
ಬೆಂಗಳೂರು: ರಾಜ್ಯಸಭಾ ಸಂಸದೆ ಹಾಗೂ ಇನ್ಫೋಸಿಸ್ ಫೌಂಡೇಶನ್ ಚೇರ್ಮನ್ ಆಗಿರುವ ಸುಧಾಮೂರ್ತಿ ಅವರಿಗೆ ಸೈಬರ್ ವಂಚಕನೊಬ್ಬ ಕರೆ ಮಾಡಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಮೂಲಗಳ ಪ್ರಕಾರ ಬೆಳಗ್ಗೆ 9.40ರ ವೇಳೆಗೆ ಸೈಬರ್ ವಂಚಕ ಸುಧಾಮೂರ್ತಿ ಅವರಿಗೆ ಕರೆ ಮಾಡಿದ್ದು, ತಾನು ಟೆಲಿಕಾಂ ಸಚಿವಾಲಯದ ಸಿಬ್ಬಂದಿ... ನಿಮ್ಮ ಮೊಬೈಲ್ ಫೋನ್ ಸಂಖ್ಯೆಯನ್ನು ಅಶ್ಲೀಲ ವೀಡಿಯೊಗಳನ್ನು ಪ್ರಸಾರ ಮಾಡಲು ಬಳಸಲಾಗುತ್ತಿದೆ. ಮಧ್ಯಾಹ್ನ 12 ಗಂಟೆಯೊಳಗೆ ಫೋನ್ ಸಂಖ್ಯೆಯ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಹೇಳಿದ್ದಾನೆ.
ಇನ್ನು ಸುಧಾಮೂರ್ತಿ ಅವರು ಈ ಸಂಖ್ಯೆಯನ್ನು ಟ್ರೂ ಕಾಲರ್‌ನಲ್ಲಿ ಪರಿಶೀಲಿಸಿದಾಗ ಅದು ಟೆಲಿಕಾಂ ವಿಭಾಗ ಎಂದು ಸೂಚಿಸಿತ್ತು. ಹೀಗಾಗಿ ಸುಧಾಮೂರ್ತಿ ಅವರು ಫೋನ್ ರಿಸೀವ್ ಮಾಡಿದ್ದಾರೆ. ಇದೀಗ ಈ ಕುರಿತು ಸುಧಾಮೂರ್ತಿ ಬೆಂಗಳೂರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕನ ಫೋನ್ ನಂಬರ್ ಸೇರಿದಂತೆ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಸುಧಾ ಮೂರ್ತಿಗೆ ಕರೆ ಮಾಡಿ ವಂಚಿಸಲು ಯತ್ನಿಸಿದ ಆರೋಪಿ ಪತ್ತೆಗಾಗಿ ಬಲೆಬೀಸಿದ್ದಾರೆ.
ಆಗಿದ್ದೇನು?
ಸುಧಾಮೂರ್ತಿಗೆ ಕರೆ ಮಾಡಿದ ವಂಚಕ, 2020ರಲ್ಲಿ ನಿಮ್ಮ ಫೋನ್ ನಂಬರ್ ರಿಜಿಸ್ಟ್ರೇಶನ್ ಮಾಡಲಾಗಿದೆ. ಆದರೆ ಆಧಾರ್ ಕಾರ್ಡ್ ಲಿಂಕ್ ಮಾಡಿಲ್ಲ. ನಿಮ್ಮ ಫೋನ್ ನಂಬರ್ ಮೂಲಕ ಅಶ್ಲೀಲ ವಿಡಿಯೋಗಳನ್ನು ಬೇರೆಯವರಿಗೆ ಕಳುಹಿಸುತ್ತೇನೆ. 12 ಗಂಟೆ ಒಳಗೆ ಫೋನ್ ಸಂಪರ್ಕ ತೆಗೆಯುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.
ಸುಧಾ ಮೂರ್ತಿ ಅವರಿಗೆ ಸೆಪ್ಟೆಂಬರ್ 5 ರಂದು ಬೆಳಿಗ್ಗೆ 9.40 ಕ್ಕೆ ಕರೆ ಬಂದಿತು. ಟ್ರೂಕಾಲರ್ ಅಪ್ಲಿಕೇಶನ್‌ನಲ್ಲಿ ಸಂಖ್ಯೆಯನ್ನು ಪರಿಶೀಲಿಸಿದಾಗ, ಅದು ಟೆಲಿಕಾಂ ಇಲಾಖೆ ಎಂದು ತೋರಿಸಿದೆ. ಈ ಸಂಬಂಧ ಸುಧಾಮೂರ್ತಿ ಪರವಾಗಿ 65 ವರ್ಷದ ಬಿ ಗಣಪತಿ ದೂರು ದಾಖಲಿಸಿದ್ದಾರೆ. ಸೆಪ್ಟೆಂಬರ್ 20 ರಂದು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಗಳು ಅವರಿಂದ ಸೂಕ್ಷ್ಮ ಮಾಹಿತಿಯನ್ನು ಪಡೆಯಲು ಬಯಸಿದ್ದಾರೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
"ನಕಲಿ ಗುರುತಿನ ಚೀಟಿ ಬಳಸಿ ಕರೆ ಮಾಡಿದ ವ್ಯಕ್ತಿ ಸುಧಾ ಮೂರ್ತಿಯವರೊಂದಿಗೆ ಅಸಭ್ಯವಾಗಿ ಮಾತನಾಡಿದ್ದಾನೆಂದು ಹೇಳಲಾಗಿದೆ. ಸೈಬರ್ ಅಪರಾಧಿ ಸುಧಾಮೂರ್ತಿಯವರ ವೈಯಕ್ತಿಕ ಮಾಹಿತಿಯನ್ನು ಪಡೆಯಲು ಪ್ರಯತ್ನಿಸಿದ್ದಾನೆ. +91 9242142562 ಸಂಖ್ಯೆಯಿಂದ ಕರೆ ಬಂದಿದೆ. ಟ್ರೂಕಾಲರ್ ಅಪ್ಲಿಕೇಶನ್‌ನಲ್ಲಿ ಸಂಖ್ಯೆಯನ್ನು ಪರಿಶೀಲಿಸಿದಾಗ, ಅದು 'ಟೆಲಿಕಾಂ ಇಲಾಖೆ' ಎಂದು ತೋರಿಸಿದೆ" ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬೆದರಿಕೆ ಮತ್ತು ಸೂಕ್ಷ್ಮ ಡೇಟಾವನ್ನು ಪಡೆಯಲು ಪ್ರಯತ್ನಿಸಿದ್ದಕ್ಕಾಗಿ ಕರೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರರು ಕೋರಿದ್ದಾರೆ. ಗುರುತಿನ ಕಳ್ಳತನ (66(C)), ಕಂಪ್ಯೂಟರ್ ಸಂಪನ್ಮೂಲಗಳನ್ನು ಬಳಸಿಕೊಂಡು ವಂಚಿಸಿದ ಶಿಕ್ಷೆ (66(D)) ಮತ್ತು 2000ದ ಐಟಿ ಕಾಯ್ದೆಯ (84(C)) ಅಪರಾಧಗಳನ್ನು ಮಾಡಲು ಪ್ರಯತ್ನಿಸಿದ್ದಕ್ಕಾಗಿ FIR ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿವೆ.
Advertisement