
ಬೆಂಗಳೂರು: ಸಂಬಂಧಿಕರ ಮನೆಯಲ್ಲಿ ನಡೆಯುತ್ತಿದ್ದ 'ಪಿತೃ ಪಕ್ಷ' ಪೂಜೆಗೆ ಹೋಗುತ್ತಿದ್ದ ಆಟೋ ಚಾಲಕ ಹಿಂಬಾಲಿಸಿ ಕತ್ತು ಸೀಳಿ ಹತ್ಯೆಗೆ ಯತ್ನಿಸಿರುವ ಘಟನೆಯೊಂದು ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.
ನಾಗಸಂದ್ರದ ಗಂಗೊಂಡನಹಳ್ಳಿ ಮುಖ್ಯ ರಸ್ತೆಯ ನಿವಾಸಿ ಆರ್. ಶಶಿ ಕುಮಾರ್ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾನೆ. ಕೃತ್ಯ ಎಸಗಿದ ಶಿವು ಅಲಿಯಾಸ್ ಜನರೇಟರ್(26) ಎಂಬಾತನನನ್ನು ಪೊಲೀಸರು ಬಂಧಿಸಿದ್ದು, ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಶಶಿಕುಮಾರ್ ಆಟೋ ಚಾಲಕರಾಗಿದ್ದು, ಅವರ ಪತ್ನಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಗುತ್ತಿಗೆ ಆಧಾರದಲ್ಲಿ ಟೆಲಿಕಾಲರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಬ್ಬರು ಮಕ್ಕಳ ಜತೆ ತಿಪ್ಪೇನಹಳ್ಳಿಯಲ್ಲಿ ವಾಸವಾಗಿದ್ದಾರೆ.
ಭಾನುವಾಪ ರಾತ್ರಿ ನೆಲಗೆದರನಹಳ್ಳಿಯಲ್ಲಿರುವ ಸಂಬಂಧಿಕರ ಮನೆಯಲ್ಲಿ ನಡೆಯುತ್ತಿದ್ದ ಪಿತೃಪಕ್ಷದ ಪೂಜೆಗೆ ಶಶಿಕುಮಾರ್ ಅವರು ಬೈಕ್‌ನಲ್ಲಿ ಹೋಗುವಾಗ, ಮಾರ್ಗ ಮಧ್ಯೆ ಶಿವಪುರದ ವೈನ್ಸ್ ಸ್ಟೋರ್‌ನಲ್ಲಿ ಮದ್ಯ ಸೇವಿಸಲು ಹೋಗಿದ್ದಾರೆ. ಅದೇ ವೈನ್ಸ್ ಸ್ಟೋರ್‌ನಲ್ಲಿ ಆರೋಪಿಗಳಾದ ಭರತ್, ಶಿವು ಹಾಗೂ ಮತ್ತೊಬ್ಬ ಆರೋಪಿ ಮದ್ಯ ಸೇವಿಸುತ್ತಿದ್ದರು.
ಈ ವೇಳೆ ಕ್ಷುಲ್ಲಕ ವಿಚಾರಕ್ಕೆ ಶಶಿಕುಮಾರ್ ಹಾಗೂ ಆರೋಪಿಗಳ ನಡುವೆ ಜಗಳವಾಗಿದೆ. ಬಳಿಕ ಸ್ಥಳೀಯರು ಜಗಳ ಬಿಡಿಸಿದ್ದಾರೆ. ನಂತರ ವೈನ್ಸ್ ಸ್ಟೋರ್‌ನಿಂದ ಹೊರಗೆ ಬಂದ ಶಶಿಕುಮಾರ್‌ಗೆ ಬಿಯರ್ ಬಾಯಟಲಿಯಿಂದ ಭರತ್ ತಲೆಗೆ ಹೊಡೆದಿದ್ದಾನೆ. ಬಳಿಕ ಮತ್ತೊಬ್ಬ ಆರೋಪಿ ಶಿವು, ಶಶಿಕುಮಾರ್ ಕುತ್ತಿಗೆಗೆ ಚಾಕುವಿನಿಂದ ಚುಚ್ಚಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಶಶಿಕುಮಾರ್ ಕುಸಿದು ಬಿದ್ದಿದ್ದಾರೆ. ಬಳಿಕ ಸ್ಥಳೀಯರು ಗೊರಗುಂಟೆಪಾಳ್ಯದಲ್ಲಿರುವ ಇಎಸ್‌ಐ ಆಸ್ಪತ್ರೆಗೆ ಶಶಿಕುಮಾರ್‌ನನ್ನು ದಾಖಲಿಸಿದ್ದಾರೆ.
ಸದ್ಯ ಶಶಿಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದು, ಈ ಸಂಬಂಧ ಶಶಿಕುಮಾರ್ ಪತ್ನಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇತರೆ ಇಬ್ಬರು ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಪೀಣ್ಯ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
Advertisement