
ಬೆಂಗಳೂರು: ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ.ಶಿವಕುಮಾರ್ ಅವರ ಕಟ್ಟುನಿಟ್ಟಿನಸೂಚನೆ ಬೆನ್ನಲ್ಲೇ 5 ಪಾಲಿಕೆಗಳ ಆಯುಕ್ತರು ಸೋಮವಾರ ನಗರ ಪರಿಶೀಲನೆ ನಡೆಸಿದ್ದು, ರಸ್ತೆ ಗುಂಡಿ ಮುಚ್ಚುವುದು, ಅತಿಕ್ರಮಣ ತೆರವು ಸೇರಿದಂತೆ ಇತರೆ ಸಮಸ್ಯೆಗಳ ಕುರಿತು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಿದರು.
ಬೆಂಗಳೂರು ದಕ್ಷಿಣ ಮಹಾನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಅವರು, ಬನಶಂಕರಿ ದೇವಸ್ಥಾನ ಮತ್ತು ಪಕ್ಕದ ಸಾರಕ್ಕಿ ಮಾರುಕಟ್ಟೆಯನ್ನು ಪರಿಶೀಲಿಸಿದರು.
ದೇವಾಲಯ ಮತ್ತು ಮಾರುಕಟ್ಟೆಯ ನಡುವಿನ ಬ್ಲಾಕ್ ಸ್ಪಾಟ್ ಮತ್ತು ಪಾದಚಾರಿ ಮಾರ್ಗ ಅತಿಕ್ರಮಣಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬೆಂಗಳೂರು ಪೂರ್ವ ಮಹಾನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಅವರು, ಮಹಾನಗರ ಪಾಲಿಕೆಯ ಎಲ್ಲಾ ಎಂಜಿನಿಯರಿಂಗ್ ವಿಭಾಗಗಳ ಅಧಿಕಾರಿಗಳು ಹಾಗೂ ಬೆಸ್ಕಾಂ, ಕೆಪಿಟಿಸಿಎಲ್, ಬಿಡಬ್ಲ್ಯೂಎಸ್ಎಸ್ಬಿ, ಗೈಲ್, ರೈಲ್ವೆ ಮತ್ತು ಪೊಲೀಸ್ ಇಲಾಖೆಯ ಪ್ರತಿನಿಧಿಗಳೊಂದಿಗೆ ಸಮನ್ವಯ ಸಭೆ ನಡೆಸಿದರು.
ಪೂರ್ವ ಮಹಾನಗರ ಪಾಲಿಕೆಯೊಳಗೆ ಮೂಲಭೂತ ಸೌಕರ್ಯಗಳ ಕೊರತೆಯು ರಾಷ್ಟ್ರೀಯ ಮಟ್ಟದ ಮುಜುಗರಕ್ಕೆ ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಮುಂದಿನ 15 ದಿನಗಳಲ್ಲಿ ಬಾಕಿ ಇರುವ ರಸ್ತೆ ಮತ್ತು ಗುಂಡಿಗಳಿಗೆ ಸಂಬಂಧಿಸಿದ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತ ಡಾ. ರಾಜೇಂದ್ರ ಕೆ.ವಿ. ಅವರು, ಗೋವಿಂದರಾಜನಗರ ವಿಭಾಗದ ಮೂಡಲಪಾಳ್ಯ ವಾರ್ಡ್‌ನ ವಿವಿಧ ಸ್ಥಳಗಳನ್ನು ಪರಿಶೀಲಿಸಿದರು.
ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರು, ನಾಗವಾರದಿಂದ ಥಣಿಸಂದ್ರ-ಬಳ್ಳಾರಿ ಮುಖ್ಯ ರಸ್ತೆಯ ಬೆಲ್ಲಹಳ್ಳಿ ಮೂಲಕ ರೇವಾ ವೃತ್ತದವರೆಗೆ ಬಾಗಲೂರು ಮುಖ್ಯ ರಸ್ತೆಯಲ್ಲಿ ಸುಮಾರು 9.7 ಕಿ.ಮೀ.; ರೇವಾ ವೃತ್ತದಿಂದ NH-7 (ಬಾಗಲೂರು ಕ್ರಾಸ್) ವರೆಗೆ ಸುಮಾರು 2.5 ಕಿ.ಮೀ. ಮತ್ತು ಕೋಗಿಲು ಗ್ರಾಮದಿಂದ ಅಗ್ರಹಾರ ಸಂಪಿಗೆಹಳ್ಳಿ ಮೂಲಕ MCECHS ಲೇಔಟ್‌ವರೆಗೆ ಸುಮಾರು 3.5 ಕಿ.ಮೀ. ವ್ಯಾಪ್ತಿಯ ರಸ್ತೆ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು.
ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಅವರು, ಗುತ್ತಿಗೆದಾರರು ಮತ್ತು ನಿಗಮ ಅಧಿಕಾರಿಗಳನ್ನು ಭೇಟಿ ಮಾಡಿ, ರಸ್ತೆಗಳನ್ನು ಸಂಚಾರ ಯೋಗ್ಯಗೊಳಿಸಲು ವಿಫಲವಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಬಿಡಬ್ಲ್ಯೂಎಸ್ಎಸ್ಬಿ ಅಗೆಯುವ ರಸ್ತೆಗಳನ್ನು ದುರಸ್ತಿ ಮಾಡದಿದ್ದರೆ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪ್ರತಿ ಶುಕ್ರವಾರ ಉತ್ತರ ನಗರ ಪಾಲಿಕೆ ಆಯುಕ್ತರಿಂದ ಫೋನ್ ಇನ್ ಕಾರ್ಯಕ್ರಮ
ಉತ್ತರ ನಗರ ಪಾಲಿಕೆ ಆಯುಕ್ತ ಸುನೀಲ್ ಕುಮಾರ್ ಅವರು ಪ್ರತಿ ಶುಕ್ರವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ ಫೋನ್-ಇನ್ ಕಾರ್ಯಕ್ರಮ ನಡೆಸಲಿದ್ದಾರೆ.
ಸೆಪ್ಟೆಂಬರ್ 26 ರಿಂದ ಫೋನ್-ಇನ್ ಕಾರ್ಯಕ್ರಮ ಆರಂಭವಾಗಲಿದೆ. ಈ ವೇಳೆ ನಾಗರಿಕರು ತಮ್ಮ ದೂರುಗಳನ್ನು ದಾಖಲಿಸಬಹುದು, ಇದನ್ನು ನೇರವಾಗಿ ಅಧಿಕಾರಿಗಳಿಗೆ ರವಾನಿಸಿ, ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ನಿಯಂತ್ರಣ ಕೊಠಡಿ ಸಂಪರ್ಕ ಸಂಖ್ಯೆಗಳು ಇಂತಿವೆ...
9480685705, 080-22975936 / 080-23636671
Advertisement