
ಬೆಂಗಳೂರು: ಬೆಂಗಳೂರಿನಲ್ಲಿ ನವವಿವಾಹಿತರ ನಡುವಿನ ಕೌಟುಂಬಿಕ ವಿವಾದ ಗಂಭೀರ ತಿರುವು ಪಡೆದುಕೊಂಡಿದ್ದು, ನನ್ನ ಗಂಡ ನಪುಂಸಕ ಎಂದು ಆರೋಪಿಸಿರುವ ಯುವತಿ 2 ಕೋಟಿ ರೂ ಪರಿಹಾರ (ಜೀವನಾಂಶ) ಕೊಡಿಸುವಂತೆ ಬೇಡಿಕೆ ಇಟ್ಟಿದ್ದಾಳೆ.
ಕಳೆದ 5 ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಜೋಡಿ ಕೌಟುಂಬಿಕ ಕಲಹದಿಂದಾಗಿ ಬೇರ್ಪಡುವ ಪರಿಸ್ಥಿತಿಗೆ ಬಂದು ತಲುಪಿದೆ. ಮದುವೆಯಾಗಿ ತಿಂಗಳುಗಳೇ ಕಳೆದರೂ ಪತಿ ತನ್ನೊಂದಿಗೆ ದೈಹಿಕ ಸಂಪರ್ಕ ನಡೆಸುತ್ತಿಲ್ಲ.
ಲೈಂಗಿಕ ಸಂಬಂಧ ಹೊಂದುತ್ತಿಲ್ಲ ಎಂದು ಆರೋಪಿಸಿ ಯುವತಿಯೊಬ್ಬಳು ಬರೊಬ್ಬರಿ 2 ಕೋಟಿ ರೂ ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದಾರೆ.
ಮೂಲಗಳ ಪ್ರಕಾರ, ಚಿಕ್ಕಮಗಳೂರು ಮೂಲದ ಬೆಂಗಳೂರಿನ ಗೋವಿಂದರಾಜ ನಗರದ ನಿವಾಸಿ ಪ್ರವೀಣ್ (ಹೆಸರು ಬದಲಿಸಲಾಗಿದೆ), ಮೇ 5 ರಂದು ಚಿಕ್ಕಮಗಳೂರಿನ ತರೀಕೆರೆಯಲ್ಲಿ ಚಂದನಾ (ಹೆಸರು ಬದಲಿಸಲಾಗಿದೆ) ಎಂಬ ಯುವತಿಯನ್ನು ವಿವಾಹವಾದರು.
ನಂತರ ದಂಪತಿಗಳು ಬೆಂಗಳೂರಿನ ಸಪ್ತಗಿರಿ ಪ್ಯಾಲೆಸ್ ಅಪಾರ್ಟ್ ಮೆಂಟ್ ನಲ್ಲಿ ವಾಸಿಸಲು ಪ್ರಾರಂಭಿಸಿದರು.
ಮೊದಲ ರಾತ್ರಿಯೇ ಪ್ರವೀಣ್ ಸಂಸಾರ ಮಾಡಲು ಹಿಂಜರಿದಿದ್ದ. ಇದರಿಂದ ಅನುಮಾನಗೊಂಡ ಪತ್ನಿ ಚಂದನಾ ಆತನಿಗೆ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗುವಂತೆ ಒತ್ತಾಯಿಸಿದ್ದಾರೆ.
ಪತ್ನಿಯ ಒತ್ತಾಯದ ಮೇರೆಗೆ ವೈದ್ಯಕೀಯ ಪರೀಕ್ಷೆಗೊಳಗಾದ ಪತಿ ಪ್ರವೀಣ್ ದೈಹಿಕವಾಗಿ ಸದೃಢರಾಗಿದ್ದಾರೆ ಎಂದು ವೈದ್ಯರು ವರದಿ ನೀಡಿದ್ದಾರೆ.
ಆದಾಗ್ಯೂ ಅವರ ಮಾನಸಿಕ ಒತ್ತಡದಿಂದಾಗಿ ಪತ್ನಿಯೊಂದಿಗೆ ದೈಹಿಕ ಸಂಬಂಧ ಆರಂಭಿಸಲು ಸಮಯ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಅವರಿಗೆ ಸಹಕರಿಸುವಂತೆ ವೈದ್ಯರು ಪತ್ನಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಚಂದನ ಕುಟುಂಬಸ್ಥರಿಂದ ಹಲ್ಲೆ
ಈ ನಡುವೆ ಆಗಸ್ಟ್ 17 ರಂದು, ಚಂದನ ಕುಟುಂಬ ಸದಸ್ಯರು ಪ್ರವೀಣ್ ಅವರ ಗೋವಿಂದರಾಜ ನಗರದ ನಿವಾಸಕ್ಕೆ ನುಗ್ಗಿ ಪ್ರವೀಣ್ ಮತ್ತು ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಘಟನೆಯ ನಂತರ, ಪ್ರವೀಣ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಔಪಚಾರಿಕ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರವೀಣ್ ದೂರಿನಲ್ಲೇನಿದೆ?
ಪ್ರವೀಣ್ ಅವರ ಪೋಷಕರು 2025 ರ ಆರಂಭದಲ್ಲಿ ಚಂದನ ಜೊತೆ ವಿವಾಹ ನಿಶ್ಚಯಿಸಿದ್ದರು. ಮೇ ತಿಂಗಳಲ್ಲಿ ಪ್ರವೀಣ್ ಮತ್ತು ಚಂದನ ವಿವಾಹ ಕೂಡ ಅದ್ದೂರಿಯಾಗಿ ನೆರವೇರಿತ್ತು. ವಧುವಿನ ಕುಟುಂಬದ ಎಲ್ಲಾ ಬೇಡಿಕೆಗಳನ್ನು ಪ್ರವೀಣ್ ಕುಟುಂಬಸ್ಥರು ಈಡೇರಿಸಿದ್ದರು.
ಚಂದನಾ ಕುಟುಂಬಸ್ಥರ ಬೇಡಿಕೆ ಮೇರೆಗೆ ಬೆಂಗಳೂರಿನಲ್ಲಿ ಗೃಹಪ್ರವೇಶ ಸಮಾರಂಭವನ್ನು ನಡೆಸಲಾಯಿತು. ಮೇ 16 ರಂದು ಪ್ರವೀಣ್ ಅವರ ಚಿಕ್ಕಮ್ಮನ ಮನೆಯಲ್ಲಿ ಮೊದಲ ರಾತ್ರಿ ಸಮಾರಂಭವನ್ನು ಆಯೋಜಿಸಲಾಗಿತ್ತು. ಆದಾಗ್ಯೂ, ಪ್ರವೀಣ್ ಅವರ ಮಾನಸಿಕ ಮತ್ತು ದೈಹಿಕ ಒತ್ತಡದಿಂದಾಗಿ ಅಂದು ಮೊದಲರಾತ್ರಿ 'ಶಾಂತಿ ಕಾರ್ಯ' ನೆರವೇರಲಿಲ್ಲ. ಬಳಿಕ ಕೆಲ ದಿನಗಳು ಸಹ ಇದೇ ರೀತಿ ಪ್ರವೀಣ್ ಪತ್ನಿಚಂದನಾಳನ್ನು ದೂರವಿಟ್ಟದ್ದರು.
ಪ್ರವೀಣ್ ನಪುಂಸಕ ಎಂದ ಚಂದನ!
ಇದು ಚಂದನ ಮತ್ತು ಪ್ರವೀಣ್ ಜೊತೆ ಜಗಳಕ್ಕೆ ಕಾರಣವಾಯಿತು. ಆರಂಭದಲ್ಲಿ ಪ್ರವೀಣ್ ರನ್ನುಚಂದನ ಅನುಮಾನಿಸಿ, ಅವಮಾನಿಸಿದರು ಎನ್ನಲಾಗಿದೆ. ಅಲ್ಲದೆ ಕುಟುಂಬದೊಳಗೆ ಪ್ರವೀಣ್ ಗಂಡಸೇ ಅಲ್ಲ.. ಆತ ನಪುಂಸಕ ಎಂದ ಮಾನಹಾನಿಕರ ಹೇಳಿಕೆಗಳನ್ನು ಹರಡಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಂತೆಯೇ ಜೂನ್ 5 ರಂದು ಚಂದನಾರ ಸುಮಾರು 15 ರಿಂದ 20 ಸಂಬಂಧಿಕರು ಮನೆಗೆ ಬಂದು ಪಂಚಾಯತಿ ನಡೆಸಿದರು. ಈ ವೇಳೆ 2 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಚಂದನ ಅವರಿಗೆ ವರ್ಗಾಯಿಸಬೇಕೆಂದು ಒತ್ತಾಯಿಸಿದರು. ಆದರೆ ಪ್ರವೀಣ್ ಸಮಸ್ಯೆ ಬಗೆಹರಿಸಲು ಸಮಯ ಕೋರಿದರು ಎನ್ನಲಾಗಿದೆ.
ಬಳಿಕ ಆಗಸ್ಟ್ 17 ರಂದು, ಪ್ರವೀಣ್ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂತಿರುಗಿದಾಗ ಚಂದನ ಮತ್ತು ಅವರ ಸಂಬಂಧಿಕರು ಅವರ ಮೇಲೆ ಹಿಂಸಾತ್ಮಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಂದು ಚಂದನ ಕುಟುಂಬಸ್ಥರು ನನ್ನ ಮೇಲೆ ಹಲ್ಲೆ ಮಾಡಿ ಮನೆಯಲ್ಲಿದ್ದ ಎಲ್ಲ ವಸ್ತುಗಳನ್ನು ನಾಶ ಮಾಡಿದ್ದಾರೆ. ನನ್ನನ್ನು ಮನೆಯಿಂದ ಹೊರಗೆ ಹಾಕಿದ್ದರು. ಇದಕ್ಕೆ ಸಿಸಿಟಿವಿ ದೃಶ್ಯಾವಳಿಗಳು ಮತ್ತು ವೈದ್ಯಕೀಯ ವರದಿಗಳನ್ನು ಸಾಕ್ಷಿಯಾಗಿ ಸಲ್ಲಿಸಲಾಗಿದೆ ಎಂದು ಪ್ರವೀಣ್ ಹೇಳಿಕೊಂಡಿದ್ದಾರೆ.
ಒತ್ತಡದಿಂದಾಗಿ ಲೈಂಗಿಕ ಕ್ರಿಯೆ ನಡೆಸಲಾಗಿಲ್ಲ
ಅಂತೆಯೇ ವೃತ್ತಿಪರ ಜೀವನದ ಒತ್ತಡದಿಂದಾಗಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಚಂದನಗೆ ತಿಳಿಸಿದ್ದರೂ, ತನ್ನ ಕುಟುಂಬದ ಬೆಂಬಲದೊಂದಿಗೆ ತನ್ನನ್ನು ಮಾನಹಾನಿ ಮಾಡಿ ಅವಮಾನಿಸಿದ್ದಾಳೆ, ಕಿರುಕುಳ ನೀಡಿದ್ದಾಳೆ ಮತ್ತು ಗಣನೀಯ ಪರಿಹಾರವನ್ನು ಕೋರಿದ್ದಾಳೆ ಎಂದು ಪ್ರವೀಣ್ ದೂರಿನಲ್ಲಿ ಆರೋಪಿಸಿದ್ದಾರೆ.
ಅಲ್ಲದೆ ಪತ್ನಿ ಚಂದನ ಸೇರಿದಂತೆ ಅವರ ಕುಟುಂಬ ಹಲವು ಮಂದಿಯ ವಿರುದ್ಧ ಪ್ರವೀಣ್ ಕೌಟುಂಬಿಕ ಹಿಂಸೆ ಆರೋಪದಡಿಯಲ್ಲಿ ದೂರು ಸಲ್ಲಿಸಿದ್ದಾರೆ.
Advertisement