
ಬೆಂಗಳೂರು: ಪಿಸ್ತೂಲ್ ತೋರಿಸಿ ಯುವಕನನ್ನು ಅಪಹರಿಸಿ, ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಪೀಣ್ಯ ಪೊಲೀಸರು ನಾಲ್ವರು ಆರೋಪಿಗಳನ್ನು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತರನ್ನು ಕನಕಮೂರ್ತಿ, ಕಿರಣ್, ಶ್ರೀನಿವಾಸ್ ಮತ್ತು ಮಾಲಿಂಗ್ ಸಾಬ್ ಶೇಖ್ ಎಂದು ಗುರುತಿಸಲಾಗಿದೆ. ಆಗಸ್ಟ್ 14 ರಂದು ಪೀಣ್ಯ ಪೊಲೀಸ್ ವ್ಯಾಪ್ತಿಯ ಜಾಲಹಳ್ಳಿಯಲ್ಲಿ ತನ್ನ ಊರಿಗೆ ಹೋಗಲು ಬಸ್‌ಗಾಗಿ ಕಾಯುತ್ತಿದ್ದಾಗ ಯುವಕನನ್ನು ಆರೋಪಿಗಳು ಅಪಹರಿಸಿದ್ದರು.
ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಖರೀದಿಸಲು ಆತ ನಗರಕ್ಕೆ ಬಂದಿದ್ದ. ದಾಬಸ್ಪೇಟೆ ತಲುಪುತ್ತಿದ್ದಂತೆ, ಆರೋಪಿಗಳು ಯುವಕನನ್ನು ಪಿಸ್ತೂಲ್ ತೋರಿಸಿ ಬೆದರಿಸಿ 5,000 ರೂ. ಹಣ ಮತ್ತು 75,000 ರೂ. ಮೌಲ್ಯದ ಎರಡು ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡಿದ್ದಾರೆ. ನಂತರ ಯುವಕನನ್ನು ಕಾರಿನಿಂದ ಹೊರಗೆ ತಳ್ಳಿ ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ ಯುವಕ ಸ್ಥಳೀಯರ ಸಹಾಯದಿಂದ ತನ್ನ ಊರಿಗೆ ತಲುಪಿದ್ದು, ನಾಲ್ಕು ದಿನಗಳ ನಂತರ ಪೊಲೀಸರಿಗೆ ದೂರು ನೀಡಿದ್ದಾನೆ.
ಘಟನೆ ನಡೆದ ಹತ್ತು ದಿನಗಳ ನಂತರ, ಮಾರತ್ತಹಳ್ಳಿಯ ದೊಡ್ಡಾನೆಕುಂಡಿಯಲ್ಲಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಕಾರು, ಪಿಸ್ತೂಲ್, ಎರಡು ಮೊಬೈಲ್ ಫೋನ್‌ಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕನಕಮೂರ್ತಿ, ಕಿರಣ್, ಶ್ರೀನಿವಾಸ್'ಗೆ ಈ ಹಿಂದೆ ಜೈಲಿನಲ್ಲಿದ್ದ ಶೇಖ್ ಎಂಬ ವ್ಯಕ್ತಿ ಪಿಸ್ತೂಲನ್ನು ನೀಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ಇದೀಗ ಪಿಸ್ತೂಲ್ ನೀಡಿದ್ದ ಶೇಖ್'ನನ್ನು ಬಿಜಾಪುರ ಜಿಲ್ಲೆಯ ಹೊರ್ತಿ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಕನಕಮೂರ್ತಿ, ಕಿರಣ್, ಶ್ರೀನಿವಾಸ್ ಅವರನ್ನು ಈ ಹಿಂದೆ ದೌರ್ಜನ್ಯ ಪ್ರಕರಣಗಳಲ್ಲಿ ಬಂಧಿಸಲಾಗಿತ್ತು. ನ್ಯಾಯಾಂಗ ಬಂಧನದಲ್ಲಿದ್ದಾಗ ಆರೋಪಿಗಳು ಶೇಖ್'ನನ್ನು ಭೇಟಿಯಾಗಿದ್ದಾರೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement