
ಬೆಂಗಳೂರು: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಕೊನಿಡೇಲ ಪವನ್ ಕಲ್ಯಾಣ್ ಅಭಿನಯದ 'They Call Him OG' ಬೆಂಗಳೂರು ಸೇರಿದಂತೆ ಹಲವೆಡೆ ಬುಧವಾರ ಮಧ್ಯರಾತ್ರಿ ಸಿನಿಮಾ ಪ್ರದರ್ಶನ ಕಂಡಿದ್ದು, ಈ ನಡುವೆ ಬೆಂಗಳೂರು ಮಡಿವಾಳದ ಸಂಧ್ಯಾ ಥಿಯೇಟರ್ ಬಳಿ ಪವನ್ ಕಲ್ಯಾಣ್ ಅಭಿಮಾನಿಗಳು ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಹುಚ್ಚಾಟ ಮೆರೆದಿದ್ದಾರೆ.
ಅಭಿಮಾನಿಗಳ ಕೈಯಲ್ಲಿ ತಲ್ವಾರ್ ಇರುವುದನ್ನು ನೋಡಿದ ಇತರೆ ಸಿನಿ ಪ್ರೇಕ್ಷಕರು ಒಂದು ಕ್ಷಣ ಗಾಬರಿ ಆಗಿದ್ದಾರೆ.
ಈ ನಡುವೆ ಚಿತ್ರಮಂದಿರದ ಎದುರು ಪವನ್ ಕಲ್ಯಾಣ್ ಅಭಿಮಾನಿಗಳು ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದನ್ನು ಗಮನಿಸಿದ ಮಡಿವಾಳ ಪೊಲೀಸರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ವಿಚಾರಣೆ ವೇಳೆ ಸಿನಿಮಾ ಕ್ರೇಜ್ಗಾಗಿ ಅಭಿಮಾನಿಗಳು ಪ್ಲಾಸ್ಟಿಕ್ ತಲ್ವಾರ್ ಬಳಕೆ ಮಾಡಿರುವುದು ತಿಳಿದುಬಂದಿದೆ. ಕಟೌಟ್ ಮುಂದೆ ಫೋಟೋ ತೆಗೆದುಕೊಳ್ಳಲು ಪ್ಲಾಸ್ಟಿಕ್ ತಲ್ವಾರ್ ತರಲಾಗಿದೆ ಎಂದು ಹೇಳಲಾಗುತ್ತಿದೆ.
ಆದರೂ, ಜನರಲ್ಲಿ ಆತಂಕ ಸೃಷ್ಟಿಸಿದ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಅಭಿಮಾನಿಗಳ ಕೈಯಲ್ಲಿದ್ದ ಪ್ಲಾಸ್ಟಿಕ್ ತಲ್ವಾರ್ ವಶಕ್ಕೆ ಪಡೆದುಕೊಂಡಿದ್ದಾರೆ.
ಏತನ್ಮಧ್ಯೆ ಡಿಜೆ ಸೆಟ್ ಹಾಕಲು ಪ್ರಯತ್ನಿಸಿದ ಮತ್ತು ಪೋಸ್ಟರ್ ಅಂಟಿಸಿ ಸ್ಥಳದಲ್ಲಿ ಉದ್ವಿಗ್ನತೆ ಸೃಷ್ಟಿಸಿದ ಹಿನ್ನೆಲೆಯಲ್ಲಿ ಥಿಯೇಟರ್ ಮ್ಯಾನೇಜರ್ ಸೋಮಶೇಖರ್ ರೆಡ್ಡಿ ವಿರುದ್ಧ ಪೊಲೀಸರು ಎನ್‌ಸಿಆರ್ ದಾಖಲಿಸಿದ್ದಾರೆ.
"ಸಿನಿಮಾ ಬಿಡುಗಡೆ ವೇಳೆ ಯಾವುದೇ ಡಿಜೆ ಸೆಟ್ ಹಾಕದಂತೆ ವ್ಯವಸ್ಥಾಪಕರಿಗೆ ಸ್ಪಷ್ಟ ಸೂಚನೆ ನೀಡಲಾಗಿತ್ತು. ಆದರೂ ಬುಧವಾರ ರಾತ್ರಿ ಡಿಜೆ ಸೆಟ್ ಹಾಕಿದ್ದಾರೆ. ಇದಕ್ಕೂ ಮೊದಲು, ಮತ್ತೊಂದು ತೆಲುಗು ಚಲನಚಿತ್ರ ಬಿಡುಗಡೆಯ ಸಮಯದಲ್ಲಿ, ಬ್ಯಾನರ್‌ಗಳಲ್ಲಿ ಕನ್ನಡ ಭಾಷೆಯನ್ನು ಬಳಸದಿದ್ದಕ್ಕಾಗಿ ಕನ್ನಡ ಸಂಘಟನೆಗಳು ಥಿಯೇಟರ್ ವಿರುದ್ಧ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದವು. ಮಡಿವಾಳ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಚಿತ್ರ ಬಿಡುಗಡೆಯ ಸಮಯದಲ್ಲಿ ಕೆಲವು ಕಾರ್ಯವಿಧಾನಗಳನ್ನು ಅನುಸರಿಸಲು ವ್ಯವಸ್ಥಾಪಕರಿಗೆ ನೋಟಿಸ್ ನೀಡಿದ್ದರು. ಈ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಚಿತ್ರಮಂದಿರದ ವ್ಯವಸ್ಥಾಪಕರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತವಾಗಿ ಎನ್‌ಸಿಆರ್ (ಗಂಭೀರ ಸ್ವರೂಪವಲ್ಲದ ಅಪರಾಧ) ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement