
ಬೆಂಗಳೂರು: ಗೋಕರ್ಣದ ರಾಮತೀರ್ಥ ಬೆಟ್ಟದ ಗುಹೆಯೊಂದರಲ್ಲಿ ವಾಸವಿದ್ದ ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ರಷ್ಯಾಗೆ ಕಳುಹಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಮಹಿಳೆಯ ಪತಿ ರಷ್ಯಾ ನಿವಾಸಿ ಡೋರ್‌ಶ್ಲೋಮೋ ಗೋಲ್ಡ್‌ಸ್ಟೈನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರ ಪೀಠ ಕೇಂದ್ರಕ್ಕೆ ಈ ಸೂಚನೆ ನೀಡಿ ಅರ್ಜಿ ಇತ್ಯರ್ಥಪಡಿಸಿದೆ.
ಗುಹೆಯಲ್ಲಿ ತಂಗಿದ್ದ ಮಹಿಳೆ ಮತ್ತು ಆಕೆಯ ಪುತ್ರಿಯರು ರಷ್ಯಾದಿಂದ ಭಾರತಕ್ಕೆ ಬಂದು ವೀಸಾ ಅವಧಿ ಮೀರಿ ನೆಲೆಸಿದ್ದಾರೆ. ಹಾಗಾಗಿ ಪ್ರಕರಣ ಕುರಿತು ರಷ್ಯಾ ಸರ್ಕಾರಕ್ಕೆ ಎಲ್ಲಾ ವಿವರ ಒದಗಿಸಬೇಕು. ಜತೆಗೆ, ಮಹಿಳೆ ಸಹ ತನ್ನ ಮಕ್ಕಳ ಜೊತೆ ರಷ್ಯಾಗೆ ಹಿಂತಿರುಗಲು ಅನುಮತಿ ನೀಡಬೇಕೆಂದು ಮಹಿಳೆಯ ಪತಿ ಕೋರಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರು, ರಷ್ಯಾ ಮಹಿಳೆ, ಆಕೆಯ ಇಬ್ಬರು ಪುತ್ರಿಯರು ಸ್ವದೇಶಕ್ಕೆ ವಾಪಸಾಗಲು ಅಗತ್ಯ ಪ್ರಯಾಣ ದಾಖಲೆ ಒದಗಿಸುವಂತೆ ಸೂಚನೆ ನೀಡಿದೆ.
ಮತ್ತೊಂದೆಡೆ ಅವರನ್ನು ಕರೆತರಲು ರಷ್ಯಾ ಸರ್ಕಾರ ಕೂಡ ಅಧಿಕಾರಿಗಳಿಗೆ ಸೂಚಿಸಿದೆ. ಆದ್ದರಿಂದ ತಾಯಿ, ಮಕ್ಕಳನ್ನು ಶೀಘ್ರ ರಷ್ಯಾಗೆ ವಾಪಸ್ ಕಳಿಸಬೇಕು. ಅದಕ್ಕೆ ಅಗತ್ಯವಿರುವ ಎಲ್ಲ ದಾಖಲೆ ಒದಗಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪೀಠ ಸೂಚಿಸಿದೆ.
ನೀನಾ ಕುಟ್ನಿಯಾ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಗೋಕರ್ಣದ ರಾಮತೀರ್ಥ ಬೆಟ್ಟದ ಗುಹೆಯೊಂದರಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಜುಲೈ 9, 2025 ರಂದು, ಭೂಕುಸಿತದ ನಂತರ ತಪಾಸಣೆ ನಡೆಸುತ್ತಿದ್ದ ಗೋಕರ್ಣ ಪೊಲೀಸರ ತಂಡವು, ಗುಹೆಯ ಬಳಿ ಬಟ್ಟೆಗಳನ್ನು ಒಣಗಿ ಹಾಕಿದ್ದನ್ನು ಗಮನಿಸಿ ಒಳಗೆ ಪರಿಶೀಲಿಸಿದಾಗ, ನೀನಾ ಮತ್ತು ಅವರ ಮಕ್ಕಳು ಪತ್ತೆಯಾಗಿದ್ದರು.
ಈ ನಡುವೆ ನೀನಾ ಅವರ ಸಂಗಾತಿಯಾದ ಇಸ್ರೇಲಿ ಉದ್ಯಮಿ ಡ್ರೋರ್ ಗೋಲ್ಡ್‌ಸ್ಟೈನ್. ತಮ್ಮ ಇಬ್ಬರು ಮಕ್ಕಳ ಸಂರಕ್ಷಣೆಯ ಹಕ್ಕಿಗಾಗಿ ಕಾನೂನು ಹೋರಾಟ ಆರಂಭಿಸಿದ್ದರು.
Advertisement