

ಬೆಂಗಳೂರು: ಕೌಟುಂಬಿಕ ಕಲಹಕ್ಕೆ ನಿರಪರಾಧಿ ನಾಯಿಯೊಂದು ಬಲಿಯಾದ ದಾರುಣ ಘಟನೆ ದೇವನಹಳ್ಳಿಯಲ್ಲಿ ನಡೆದಿದೆ.
ಬೆಳೆ ಹಾನಿ ನೆಪ ಮಾಡಿಕೊಂಡು ಮಲ ಸಹೋದರ ಸಾಕು ನಾಯಿಗೆ ಗುಂಡಿಟ್ಟು ಕೊಂದಿರುವ ಆರೋಪ ಕೇಳಿಬಂದಿದ್ದು, ಈ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ನಾಲ್ಲೂರು ಗ್ರಾಮದ ನಿವಾಸಿ ಎನ್. ವೆಂಕಟೇಶ್ ಅವರು ತಮ್ಮ ಮಲ ಸಹೋದರ ನಾರಾಯಣಸ್ವಾಮಿ ಮತ್ತು ಅವರ ಪತ್ನಿ ನಾಗಮ್ಮ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಮಂಗಳವಾರ ರಾತ್ರಿ ಸುಮಾರು 9.15ರ ವೇಳೆಗೆ ಈ ಘಟನೆ ನಡೆದಿದ್ದು, ಆರೋಪಿಗಳು ಗುಂಡಿಟ್ಟು ನಾನು ಸಾಕಿದ್ದ ನಾಯಿಯನ್ನು ಹತ್ಯೆ ಮಾಡಿದ್ದಾರೆಂದು ತಿಳಿಸಿದ್ದಾರೆ.
ನನ್ನ ನಾಯಿ ಯಾವುದೇ ಬೆಳೆ ನಾಶ ಮಾಡಿಲ್ಲ. ಬೀದಿ ನಾಯಿಗಳು ಹೊಲಕ್ಕೆ ನುಗ್ಗಿ ಹಾನಿ ಮಾಡಿವೆ. ಜಗಳ ಮಾಡಲು ಕಾರಣ ಹುಡುಕಿಕೊಂಡು ಬಂದು ಅಮಾಯಕ ನಾಯಿಯನ್ನು ಗುರಿಯಾಗಿಸಿಕೊಂಡಿದ್ದಾರೆಂದು ಹೇಳಿದ್ದಾರೆ.
ಅಲ್ಲದೆ, ಘಟನೆಗೂ ಮುನ್ನ ಆರೋಪಿಗಳು ತಮ್ಮ ಕುಟುಂಬದವರಿಗೆಮೇಲೆ ಗನ್ ತೋರಿಸಿ ಜೀವ ಬೆದರಿಕೆ ಹಾಕಿದ್ದರು ಎಂದೂ ಆರೋಪಿಸಿದ್ದಾರೆ.
ಏತನ್ಮಧ್ಯೆ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮಾಹಿತಿಯ ಪ್ರಕಾರ, ಕುಟುಂಬದೊಳಗಿನ ಆಸ್ತಿ ವಿವಾದವೇ ಘಟನೆ ಕಾರಣ ಎನ್ನಲಾಗುತತಿದೆ. ವೆಂಕಟೇಶ್ ಅವರ ತಂದೆಗೆ ಇಬ್ಬರು ಪತ್ನಿಯರು ಇದ್ದು, ನಾರಾಯಣಸ್ವಾಮಿ ಎರಡನೇ ಹೆಂಡತಿಯ ಮಗ. ಆಸ್ತಿ ಹಂಚಿಕೆ ವಿಚಾರವಾಗಿ ಸಹೋದರರ ನಡುವೆ ದೀರ್ಘಕಾಲದಿಂದ ವೈಮನಸ್ಸು ಇತ್ತು ಎನ್ನಲಾಗಿದೆ.
ಈ ಸಂಬಂಧ ಚನ್ನರಾಯಪಟ್ಟಣ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಭಾರತೀಯ ಕಾಯ್ದೆ ಸೇರಿದಂತೆ ಹಲವು ವಿಧಿಗಳಡಿ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಜೊತೆಗೆ, ಆರೋಪಿಗಳಿಗೆ ಗನ್ ಬಳಸಲು ಮಾನ್ಯ ಪರವಾನಗಿ ಇದೆಯೇ ಎಂಬುದನ್ನೂ ಪರಿಶೀಲನೆ ನಡೆಸುತ್ತಿದ್ದಾರೆ.
Advertisement