

ಬೆಂಗಳೂರು: ಕರ್ನಾಟಕದಲ್ಲಿ ಜಲ ಸಂರಕ್ಷಣೆಯಲ್ಲಿ ಮಹತ್ವದ ಬದಲಾವಣೆ ಕಂಡುಬಂದಿದೆ, ಜಲ ಸಂಚಯ್ ಜನ್ ಭಾಗಿದರಿ ಅಭಿಯಾನ 2.0 ಯೋಜನೆಯು ಗ್ರಾಮೀಣ ಭಾಗಗಳಲ್ಲಿ ನಿಜವಾದ “ಜಲ ಕ್ರಾಂತಿ”ಗೆ ಕಾರಣವಾಗಿದೆ.
ಇತ್ತೀಚೆಗೆ ರಾಜ್ಯಸಭೆಯಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಕೇಳಿದ ಪ್ರಶ್ನೆಗೆ ಉತ್ತರವಾಗಿ ಕೇಂದ್ರ ಜಲಶಕ್ತಿ ಸಚಿವಾಲಯವು ಕರ್ನಾಟಕದಲ್ಲಿ ಜಲ ಸಂರಕ್ಷಣಾ ಪ್ರಯತ್ನಗಳ ಕುರಿತು ವಿವರವಾದ ಮಾಹಿತಿ ನೀಡಿತು.
2026 ಮಾರ್ಚ್ ವೇಳೆಗೆ ರಾಜ್ಯದಾದ್ಯಂತ 79,440ಕ್ಕೂ ಹೆಚ್ಚು ಜಲ ಸಂರಕ್ಷಣೆ ಮತ್ತು ಮರುಪೂರಣ ಕಾಮಗಾರಿಗಳು ಪೂರ್ಣಗೊಂಡಿದ್ದು, ಇದರ ನೇರ ಪ್ರಯೋಜನವನ್ನು ಸುಮಾರು 22.24 ಲಕ್ಷ ರೈತರು ಪಡೆದಿದ್ದಾರೆಂದು ಹೇಳಿತು.
ಈ ಯೋಜನೆಯ ಪ್ರಮುಖ ಅಂಶವೆಂದರೆ “ಜನ ಭಾಗಿದಾರಿ” — ಅಂದರೆ ಜನರೇ ಯೋಜನೆಗೆ ಹಣಕಾಸು ಮತ್ತು ಕಾರ್ಯಗತಗೊಳಿಸುವಿಕೆಯಲ್ಲಿ ಪಾಲ್ಗೊಳ್ಳುವುದು. ಗ್ರಾಮಸ್ಥರು, ಸ್ಥಳೀಯ ಸಂಘಟನೆಗಳು, ಸಿಎಸ್ಆರ್ ನಿಧಿಗಳು ಹಾಗೂ ವೈಯಕ್ತಿಕ ದೇಣಿಗೆಗಳ ಮೂಲಕ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಇದರಿಂದ ಸರ್ಕಾರದ ಮೇಲಿನ ಹಣಕಾಸು ಒತ್ತಡ ಕಡಿಮೆಯಾಗಿದ್ದು, ಸ್ಥಳೀಯ ಸಮಸ್ಯೆಗೆ ಸ್ಥಳೀಯ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆ ರೂಪುಗೊಂಡಿದೆ.
ಜಿಲ್ಲಾವಾರು ವಿಶ್ಲೇಷಣೆಯಲ್ಲಿ ಯೋಜನೆಯಲ್ಲಿ ಕೋಲಾರ, ತುಮಕೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳು ಮುಂಚೂಣಿಯಲ್ಲಿವೆ. ಯೋಜನೆಯಲ್ಲಿ ಬರಪೀಡಿತ ಪ್ರದೇಶಗಳಾಗಿರುವುದರಿಂದ ಇಲ್ಲಿ ಮಳೆನೀರು ಸಂಗ್ರಹಣೆ ಮತ್ತು ಅಂತರ್ಜಲ ಹೆಚ್ಚಿರುವ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದರ ಪರಿಣಾಮವಾಗಿ ಈ ಭಾಗಗಳಲ್ಲಿ ನೀರಿನ ಲಭ್ಯತೆ ಸುಧಾರಿಸಿದ್ದು, ಕೃಷಿ ಚಟುವಟಿಕೆಗಳಿಗೆ ಉತ್ತೇಜನ ದೊರಕಿದೆ.
ಈ ಯೋಜನೆಯಡಿ ನಿರ್ಮಿಸಲಾದ ಬೋರ್ವೆಲ್, ಮರುಪೂರಣ ನಳಿಕೆ, ಮರುಪೂರಣ ಗುಂಡಿ ವ್ಯವಸ್ಥೆಗಳು ಮಳೆನೀರನ್ನು ನೇರವಾಗಿ ಭೂಗರ್ಭಕ್ಕೆ ಹಿಂತಿರುಗಿಸಲು ಸಹಾಯ ಮಾಡುತ್ತವೆ. ಇದರಿಂದ ಅಂತರ್ಜಲ ಮಟ್ಟ ಕ್ರಮೇಣ ಏರಿಕೆಯಾಗುತ್ತಿದೆ. ದೀರ್ಘಾವಧಿಯಲ್ಲಿ ಇದು ಕುಡಿಯುವ ನೀರು ಮತ್ತು ಕೃಷಿ ನೀರಾವರಿಗೆ ಶಾಶ್ವತ ಪರಿಹಾರವನ್ನು ನೀಡಲಿದೆ.
ಇದರ ಜೊತೆಗೆ, PMKSY 2.0 ಅಡಿಯಲ್ಲಿ 2,000ಕ್ಕೂ ಹೆಚ್ಚು ಜಲ ಸಂಗ್ರಹಣೆ ಘಟಕಗಳನ್ನು ನಿರ್ಮಿಸಿ, ಸಾವಿರಾರು ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲಾಗಿದೆ. ಇದು ಬರ ಪರಿಸ್ಥಿತಿಯಲ್ಲಿ ರೈತರಿಗೆ ಭದ್ರತೆ ಒದಗಿಸುವ ಪ್ರಮುಖ ಹೆಜ್ಜೆಯಾಗಿದೆ.
ಮತ್ತೊಂದು ಪ್ರಮುಖ ಯೋಜನೆಯಾದ Per Drop More Crop (PDMC) ಮೂಲಕ ನೀರಿನ ದಕ್ಷ ಬಳಕೆಗೆ ಒತ್ತು ನೀಡಲಾಗಿದೆ. ಡ್ರಿಪ್ ಮತ್ತು ಸ್ಪ್ರಿಂಕ್ಲರ್ ಸಿಸ್ಟಮ್‌ಗಳ ಮೂಲಕ ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆ ಬೆಳೆಯುವ ವ್ಯವಸ್ಥೆ ರೈತರಿಗೆ ಲಭ್ಯವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಲಕ್ಷಾಂತರ ಹೆಕ್ಟೇರ್ ಪ್ರದೇಶವನ್ನು ಮೈಕ್ರೋ ಇರಿಗೇಶನ್ ವ್ಯಾಪ್ತಿಗೆ ತಂದು, ಕೃಷಿ ಉತ್ಪಾದನೆ ಹೆಚ್ಚಿಸುವಲ್ಲಿ ಇದು ಸಹಾಯ ಮಾಡಿದೆ.
ರಾಜ್ಯದಲ್ಲಿ 2015-16ರಿಂದ ವಿವಿಧ ಜಲ ಸಂಬಂಧಿತ ಯೋಜನೆಗಳಿಗೆ ಸುಮಾರು ರೂ.4,897 ಕೋಟಿ ಹೂಡಿಕೆ ಮಾಡಲಾಗಿದ್ದು, ಇದರಿಂದ ನೀರಿನ ನಿರ್ವಹಣೆಯಲ್ಲಿ ಸಮಗ್ರ ಸುಧಾರಣೆ ಕಂಡುಬಂದಿದೆ. ಈ ಹೂಡಿಕೆಗಳು ಕೇವಲ ನೀರಿನ ಲಭ್ಯತೆಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ರೈತರ ಆದಾಯ ಮತ್ತು ಜೀವನಮಟ್ಟವನ್ನೂ ಉತ್ತಮಗೊಳಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿವೆ.
ನಗರ ಪ್ರದೇಶಗಳಲ್ಲೂ ಅಮೃತ್ ಮತ್ತು ಅಮೃತ್ 2.0 ಯೋಜನೆಗಳಡಿ ಜಲಮೂಲ ಪುನರುಜ್ಜೀವನ ಮತ್ತು ಹಸಿರು ಪ್ರದೇಶಗಳ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇದರಿಂದ ನಗರ ಪ್ರದೇಶಗಳಲ್ಲಿ ಭೂಗರ್ಭ ಜಲಮಟ್ಟ ಹೆಚ್ಚಿಸಲು ಸಹಕಾರಿಯಾಗುತ್ತಿದೆ.
ಇದಲ್ಲದೆ, ಭೂಗರ್ಭ ಜಲ ಸಂಪನ್ಮೂಲಗಳ ವೈಜ್ಞಾನಿಕ ಅಧ್ಯಯನಕ್ಕಾಗಿ NAQUIM ಯೋಜನೆಯಡಿ ರಾಜ್ಯದ .91 ಲಕ್ಷ ಚದರ ಕಿ.ಮೀ. ನಕ್ಷೆ ಮಾಡಲಾಗಿದೆ. 2023ರಿಂದ 2025ರವರೆಗೆ ಮಾತ್ರ 2,700 ಚದರ ಕಿಲೋಮೀಟರ್ ಪ್ರದೇಶವನ್ನು ಹೊಸದಾಗಿ ಅಧ್ಯಯನಕ್ಕೆ ಒಳಪಡಿಸಲಾಗಿದೆ ಎಂದು ತಿಳಿಸಿತು.
ಒಟ್ಟಾರೆ, ಕರ್ನಾಟಕದಲ್ಲಿ ನೀರು ಸಂರಕ್ಷಣೆ, ಸಮುದಾಯದ ಭಾಗವಹಿಸುವಿಕೆ ಮತ್ತು ತಂತ್ರಜ್ಞಾನ ಬಳಕೆಯ ಮೂಲಕ ಜಲ ಸಂಪನ್ಮೂಲಗಳ ಸುಧಾರಣೆಗೆ ದೊಡ್ಡ ಮಟ್ಟದ ಪ್ರಯತ್ನಗಳು ನಡೆಯುತ್ತಿದ್ದು, ಇದು ರೈತರ ಬದುಕಿನಲ್ಲಿ ಬದಲಾವಣೆಗಳನ್ನು ತರುತ್ತಿವೆ.
Advertisement