

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು, ಬೆಕ್ಕಿಗೆ ಚೆಲ್ಲಾಟ...ಇಲಿಗೆ ಪ್ರಾಣ ಸಂಕಟ ಎಂಬ ಮಾತಿದೆ.. ಈ ಸ್ಟೋರಿ ಕೇಳಿದರೆ ಬೆಕ್ಕಿಗೆ ಚೆಲ್ಲಾಟ.. ನೆರೆಹೊರೆ ಮನೆಯವರಿಗೆ ಪ್ರಾಣಸಂಕಟ ಎಂಬಂತಿದೆ.
ಎರಡು ಬೆಕ್ಕುಗಳ ಸರಸ ಸಲ್ಲಾಪ ಎರಡು ಕುಟುಂಬಗಳ ನಡುವೆ ಜಗಳ ತಂದಿಟ್ಟ ವಿಚಿತ್ರ ಪ್ರಕರಣ ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ ಪೊಲೀಸರು ಚಾಣಾಕ್ಷತೆಯಿಂದ ಸಮಸ್ಯೆ ಪರಿಹರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಮ್ಮ ಬೆಕ್ಕು ಮರಿ ಹಾಕಲು ನಿಮ್ಮ ಗಂಡು ಬೆಕ್ಕೇ ಕಾರಣ ಎಂದು ಹೆಣ್ಣು ಬೆಕ್ಕಿನ ಮಾಲೀಕರು ಗಂಡು ಬೆಕ್ಕು ಸಾಕಿದ್ದವರ ಬಳಿ ಗಲಾಟೆ ಮಾಡಿದ್ದು, ಬಳಿಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆಶ್ವರ್ಯಕರ ರೀತಿಯಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಸಮಸ್ಯೆ ಇತ್ಯರ್ಥಪಡಿಸಿದ್ದಾರೆ.
ನೆರೆಹೊರೆಯವರ ಎರಡು ಬೆಕ್ಕುಗಳು ಪ್ರಕೃತಿ ನಿಯಮದಂತೆ ಸೇರಿವೆ. ಇದರಿಂದ ಹೆಣ್ಣು ಬೆಕ್ಕು ನಾಲ್ಕು ಮುದ್ದಾದ ಮರಿಗಳಿಗೆ ಜನ್ಮ ನೀಡಿದೆ. ಮರಿಗಳು ಹುಟ್ಟಿದ ಕೂಡಲೇ ಸಿಟ್ಟಿಗೆದ್ದ ಹೆಣ್ಣು ಬೆಕ್ಕಿನ ಮಾಲೀಕರು, ಗಂಡು ಬೆಕ್ಕಿನ ಮಾಲೀಕರೊಂದಿಗೆ ಜಗಳಕ್ಕೆ ಇಳಿದಿದ್ದಾರೆ. ನಮ್ಮ ಬೆಕ್ಕು ಮರಿ ಹಾಕಿರೊದಕ್ಕೆ ನಿಮ್ಮ ಬೇಕ್ಕೇ ಕಾರಣ. ಮರಿಗಳನ್ನ ನೀವೇ ಸಾಕಿ ಎಂದು ಮರಿಗಳನ್ನು ಗಂಡು ಬೆಕ್ಕಿನವರ ಮನೆಗೆ ಬಿಟ್ಟಿದ್ದಾರೆ.
ಇದೇ ವಿಚಾರವಾಗಿ ಶುರುವಾದ ಜಗಳ ತಾರಕಕ್ಕೇರಿ, ಜೋರಾದ ಕಿರುಚಾಟ ಇಡೀ ಪ್ರದೇಶದ ಗಮನ ಸೆಳೆದಿದೆ. ಅಷ್ಟೇ ಅಲ್ಲದೇ ಹೆಣ್ಣು ಬೆಕ್ಕಿನ ಮನೆಯವರು ʻನಿಮ್ಮ ಮಕ್ಕಳಿಗೆ ಆಸಿಡ್ ಹಾಕುತ್ತೇವೆʼ ಎಂದು ಬೆದರಿಕೆ ಹಾಕುವ ಹಂತಕ್ಕೆ ತಲುಪಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಈ ವೇಳೆ ಗಂಡು ಬೆಕ್ಕಿನ ಮನೆಯವರು ತಕ್ಷಣವೇ 112ಕ್ಕೆ ಕರೆ ಮಾಡಿ ಪೊಲೀಸರನ್ನು ಸ್ಥಳಕ್ಕೆ ಕರೆಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಎರಡೂ ಕಡೆಯವರ ಜಗಳವನ್ನು ಬಿಡಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಬಳಿಕ ನಾಲ್ಕು ಬೆಕ್ಕಿನ ಮರಿಗಳಲ್ಲಿ ಎರಡೆರಡು ಬೆಕ್ಕುಗಳನ್ನು ಎರಡೂ ಮನೆಯವರಿಗೆ ಹಂಚಿ ಪ್ರಕರಣವನ್ನು ಇತ್ಯರ್ಥಪಡಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ಇದು ಒಂದು ರೀತಿಯ ಕ್ಲಿಷ್ಟಕರ ಪರಿಸ್ಥಿತಿಯಾಗಿತ್ತು; ಹೊಯ್ಸಳ ಪೊಲೀಸ್ ತಂಡವು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಹರಸಾಹಸವೇ ಮಾಡಬೇಕಾಯಿತು.
ಒಂದು ಮನೆಯ ಹೆಣ್ಣು ಬೆಕ್ಕು ಪಕ್ಕದ ಮನೆಯ ಟಾಮ್‌ಬೆಕ್ಕಿನೊಂದಿಗೆ ಸರಸ ಸಲ್ಲಾಪ ನಡೆಸಿ, ನಾಲ್ಕು ಮರಿಗಳಿಗೆ ಜನ್ಮ ನೀಡಿದ ನಂತರ ಈ ಅಸಾಮಾನ್ಯ ವಿವಾದ ಭುಗಿಲೆದ್ದಿತು, ಇದು ಎರಡು ಮನೆಗಳ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು ಎಂದಿದ್ದಾರೆ.
Advertisement