

ಚಿಕ್ಕಬಳ್ಳಾಪುರ: ಹೈಕೋರ್ಟ್ ನಿರ್ದೇಶನ ಹಿನ್ನೆಲೆಯಲ್ಲಿ ಶೃಂಗೇರಿ ವಿಧಾನಸಭಾ ಚುನಾವಣೆಯ ಅಂಚೆ ಮತಗಳ ಮರು ಎಣಿಕೆ ಕಾರ್ಯ ಮೇ 2 ರಂದು ಐಡಿಎಸ್‌ಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ.
ಕಾಲೇಜು ಆವರಣದಲ್ಲಿ ಮರು ಎಣಿಕೆ ಪ್ರಕ್ರಿಯೆಗೆ ಜಿಲ್ಲಾಡಳಿತ ಸಮಗ್ರ ವ್ಯವಸ್ಥೆ ಮಾಡಿದ್ದು, ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಗೌರವ್ ಶೆಟ್ಟಿ ಅವರನ್ನು ಚುನಾವಣಾಧಿಕಾರಿಯಾಗಿ ನೇಮಿಸಲಾಗಿದ್ದು, ನಾಲ್ವರು ಸಹಾಯಕ ಚುನಾವಣಾಧಿಕಾರಿಗಳು ಸಹ ಕಾರ್ಯನಿರ್ವಹಿಸಲಿದ್ದಾರೆ. ಮರುಎಣಿಕೆ ನಡೆಯುವ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಪಾರದರ್ಶಕತೆಯನ್ನು ಖಚಿತಪಡಿಸಲು ಕ್ರಮ ಕೈಗೊಳ್ಳಲಾಗಿದೆ.
ಈ ಪ್ರಕ್ರಿಯೆ ವೇಳೆ ಕಾಂಗ್ರೆಸ್ ಶಾಸಕ ಟಿಡಿ ರಾಜೇ ಗೌಡ, ಹಾಗೂ ಬಿಜೆಪಿ ಪರಾಜಿತ ಅಭ್ಯರ್ಥಿ ಡಿಎನ್ ಜೀವರಾಜ್ ಸೇರಿದಂತೆ ಮತ ಎಣಿಕೆ ಪ್ರತಿನಿಧಿಗಳು ಹಾಜರಾಗುವ ಸಾಧ್ಯತೆ ಇದೆ.
ಮರು ಎಣಿಕೆಗೆ ತಡೆ ಕೋರುವ ಗಡುವು ಏಪ್ರಿಲ್ 20 ರಂದು ಮುಗಿದಿದ್ದರಿಂದ, ಮೇ 2 ರಂದು ಮರು ಎಣಿಕೆ ನಡೆಸಲು ಹೈಕೋರ್ಟ್ ಆದೇಶಿಸಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಟಿಡಿ ರಾಜೇ ಗೌಡ ಅವರು ಕೇವಲ 201 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಒಟ್ಟು 2,811 ಪೋಸ್ಟಲ್ ಮತಗಳಲ್ಲಿ 279 ಮತಗಳು ಅಮಾನ್ಯಗೊಂಡಿದ್ದವು. ಈ ಫಲಿತಾಂಶದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದ ಡಿಎನ್ ಜೀವರಾಜ್ ಅವರು ಮರುಎಣಿಕೆಗೆ ಮನವಿ ಸಲ್ಲಿಸಿದ್ದರು. ಆದರೆ ಜಿಲ್ಲಾ ಚುನಾವಣಾಧಿಕಾರಿ ಅದನ್ನು ಪರಿಗಣಿಸದೆ ಫಲಿತಾಂಶವನ್ನು ಘೋಷಿಸಿದ್ದರು.
Advertisement