

ಬೆಂಗಳೂರು: ನಗರದ ರಸ್ತೆ ಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವರ್ಷಗಳಿಂದ ಅನಾಥವಾಗಿ ನಿಂತಿರುವ ವಾಹನಗಳ ವಿರುದ್ಧ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ.
ನೋಟಿಸ್ ನೀಡಿದ ಬಳಿಕವೂ 15 ದಿನಗಳೊಳಗೆ ವಾಹನಗಳನ್ನು ತೆರವುಗೊಳಿಸದಿದ್ದರೆ ಹರಾಜು ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದ್ದು, ಈ ಕಾರ್ಯವನ್ನು ತ್ವರಿತಗೊಳಿಸಲು ಐದು ನಗರ ಪಾಲಿಕೆಗಳು ಪ್ರತ್ಯೇಕ ಕಾರ್ಯಯೋಜನೆ ಹಾಗೂ ಕಾರ್ಯಾಚರಣೆ ವೇಳಾಪಟ್ಟಿಯನ್ನು ಸಿದ್ಧಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಮಂಗಳವಾರ ನಡೆದ ವರ್ಚುವಲ್ ಪರಿಶೀಲನಾ ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು, ಬಿಟ್ಟುಹೋಗಿರುವ ವಾಹನಗಳ ತೆರವು ಹಾಗೂ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಗಳ ಪ್ರಗತಿಯನ್ನು ಪರಿಶೀಲನೆ ನಡೆಸಿದರು. ಕಾರ್ಯಾಚರಣೆಯನ್ನು ಇನ್ನಷ್ಟು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕ್ಷೇತ್ರ ಮಟ್ಟದ ಸಿಬ್ಬಂದಿಯ ಕಾರ್ಯವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು. ಅಭಿಯಾನದ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸಿ, ರಸ್ತೆ ಬದಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅನಾಥವಾಗಿ ನಿಂತಿರುವ ವಾಹನಗಳನ್ನು ತ್ವರಿತವಾಗಿ ತೆರವುಗೊಳಿಸುವಂತೆ ಸೂಚಿಸಿದರು.
ಈ ಕಾರ್ಯಾಚರಣೆಯಲ್ಲಿ ನಗರ ಪಾಲಿಕೆಗಳು ಮತ್ತು ಸಂಚಾರ ಪೊಲೀಸ್ ಇಲಾಖೆಯ ನಡುವೆ ಉತ್ತಮ ಸಮನ್ವಯ ಅಗತ್ಯವಿದೆ. ಸಂಚಾರ ಪೊಲೀಸರು ಹಾಗೂ ನಗರ ಪಾಲಿಕೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಬೇಕು ಎಂದು ನಿರ್ದೇಶನ ನೀಡಿದರು.
ಜೊತೆಗೆ, ಗುರುತಿಸಲಾದ ಅನಾಥ ವಾಹನಗಳ ಸಂಖ್ಯೆ, ನೀಡಲಾದ ನೋಟಿಸ್‌ಗಳು, ವಶಪಡಿಸಿಕೊಂಡ ವಾಹನಗಳು, ದಂಡ ಪಾವತಿಸಿ ಮಾಲೀಕರು ಮರಳಿ ಪಡೆದ ವಾಹನಗಳ ಕುರಿತು ನಿಖರ ಮಾಹಿತಿಯನ್ನು ಅಧಿಕಾರಿಗಳು ಸಲ್ಲಿಸಬೇಕು.
ನೋಟಿಸ್ ನೀಡಿದ ಬಳಿಕ ವಶಪಡಿಸಿಕೊಂಡ ವಾಹನಗಳನ್ನು 15 ದಿನಗಳವರೆಗೆ ಯಾರೂ ಸ್ವಾಧೀನಪಡಿಸಿಕೊಳ್ಳದಿದ್ದರೆ ಅವುಗಳನ್ನು ಹರಾಜು ಪ್ರಕ್ರಿಯೆಗೆ ಒಳಪಡಿಸಬೇಕು.
ಕಾರ್ಯಾಚರಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸಲು ಪ್ರತಿಯೊಂದು ಸಂಚಾರ ಪೊಲೀಸ್ ಠಾಣೆಯಿಂದ ಅನಾಥ ವಾಹನಗಳ ತೆರವು ಕಾರ್ಯಕ್ಕಾಗಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ವಿಶೇಷವಾಗಿ ನಿಯೋಜಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಮಾಹಿತಿ ನೀಡಿದ ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಅವರು, ನಗರದಲ್ಲಿ ಇದುವರೆಗೆ 6,576 ಅನಾಥ ವಾಹನಗಳನ್ನು ಗುರುತಿಸಲಾಗಿದೆ. ಇದರಲ್ಲಿ 2,533 ವಾಹನಗಳನ್ನು ಪೊಲೀಸ್ ಇಲಾಖೆ ಹಾಗೂ 4,043 ವಾಹನಗಳನ್ನು ಸಾರ್ವಜನಿಕರು ಗುರುತಿಸಿ ಮಾಹಿತಿ ನೀಡಿದ್ದಾರೆ.
ಈ ಪೈಕಿ 1,605 ವಾಹನಗಳಿಗೆ ನೋಟಿಸ್ ನೀಡಲಾಗಿದ್ದು, 263 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ನೋಟಿಸ್ ಪಡೆದ ಹಾಗೂ ವಶಪಡಿಸಿಕೊಂಡ ವಾಹನಗಳ ಮಾಲೀಕರು ₹2.16 ಲಕ್ಷ ದಂಡ ಪಾವತಿಸಿ ತಮ್ಮ ವಾಹನಗಳನ್ನು ಮರಳಿ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.
ಮುಂದಿನ ದಿನಗಳಲ್ಲಿ ಈ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಅನಾಥವಾಗಿ ಬಿಟ್ಟುಹೋಗಿರುವ ವಾಹನಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.