ಆಹಾರ ಸುರಕ್ಷತೆ: ಹೋಟೆಲ್‌ಗಳ ಮೇಲೆ ಕರ್ನಾಟಕ ಆರೋಗ್ಯ ಇಲಾಖೆ ದಿಢೀರ್ ದಾಳಿ, ತಪಾಸಣೆಗೆ 30 ವಿಶೇಷ ತಂಡ ರಚನೆ, Video

ಕಳಪೆ ಆಹಾರ ಗುಣಮಟ್ಟ, ಸ್ವಚ್ಛತೆ ಕೊರತೆ ಹಾಗೂ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಕುರಿತು ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಂಗಳೂರು ಸೇರಿದಂತೆ..
Karnataka Health Department search in hotels
ಹೋಟೆಲ್‌ಗಳ ಆರೋಗ್ಯ ಇಲಾಖೆ ಅಧಿಕಾರಿಗಳ ದಾಳಿ
Updated on

ಬೆಂಗಳೂರು: ಆಹಾರ ಸುರಕ್ಷತೆ ಕುರಿತು ದಾಖಲಾದ ದೂರುಗಳ ಹಿನ್ನಲೆಯಲ್ಲಿ ಕರ್ನಾಟಕ ಆರೋಗ್ಯ ಇಲಾಖೆ ಇಂದು ಹೋಟೆಲ್‌ಗಳ ತಪಾಸಣೆಗೆ ಮುಂದಾಗಿದ್ದು, ಇದಕ್ಕಾಗಿ 30 ವಿಶೇಷ ತಂಡಗಳ ರಚನೆ ಮಾಡಿದೆ.

ಕಳಪೆ ಆಹಾರ ಗುಣಮಟ್ಟ, ಸ್ವಚ್ಛತೆ ಕೊರತೆ ಹಾಗೂ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಕುರಿತು ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಹೋಟೆಲ್‌, ರೆಸ್ಟೋರೆಂಟ್‌ ಹಾಗೂ ಆಹಾರ ಮಳಿಗೆಗಳ ಮೇಲೆ ದಿಢೀರ್ ತಪಾಸಣೆ ನಡೆಸಲು 30 ವಿಶೇಷ ತಂಡಗಳನ್ನು ರಚಿಸಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರ ಸೂಚನೆ ಮೇರೆಗೆ ಈ ಕಾರ್ಯಾಚರಣೆ ಆರಂಭಿಸಲಾಗಿದೆ. ವಿವಿಧ ಹೋಟೆಲ್‌ಗಳಲ್ಲಿ ಅಸ್ವಚ್ಛತೆ ಹಾಗೂ ಗುಣಮಟ್ಟವಿಲ್ಲದ ಆಹಾರ ಮಾರಾಟ ಮಾಡಲಾಗುತ್ತಿದೆ ಎಂಬ ಸಾರ್ವಜನಿಕರ ದೂರುಗಳು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ದೂರುಗಳೂ ಸೇರಿದಂತೆ, ಇಲಾಖೆಗೆ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ರೆಸ್ಟೋರೆಂಟ್‌, ಹೋಟೆಲ್‌ ಹಾಗೂ ಇತರ ಆಹಾರ ಸಂಸ್ಥೆಗಳಲ್ಲಿ ಆಹಾರ ಸುರಕ್ಷತಾ ನಿಯಮ ಉಲ್ಲಂಘನೆ ಕುರಿತು ಪದೇಪದೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ತಪಾಸಣೆಯನ್ನು ತೀವ್ರಗೊಳಿಸಲು ನಿರ್ಧರಿಸಲಾಗಿದೆ ಎಂದು ಆಹಾರ ಸುರಕ್ಷತಾ ಅಧಿಕಾರಿ ಶ್ರೀನಿವಾಸ್ ತಿಳಿಸಿದ್ದಾರೆ.

Karnataka Health Department search in hotels
ಶಾಕ್ ಕೊಟ್ಟ ಸರ್ಕಾರ: ಡೈರಿಯೇತರ ಪನೀರ್ ಗೆ ಒಂದು ವರ್ಷದ ನಿಷೇಧ; ಕಾರಣ ಏನು?

ದಿಢೀರ್ ತಪಾಸಣೆ

ಅಧಿಕಾರಿಗಳ ಪ್ರಕಾರ, 30 ವಿಶೇಷ ತಂಡಗಳಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ಇರಲಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಹೆಚ್ಚಿನ ಜನಸಂದಣಿ ಇರುವ ಪ್ರದೇಶಗಳ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ದಿಢೀರ್ ತಪಾಸಣೆ ನಡೆಸಲಿದ್ದಾರೆ. ಸ್ಟಾರ್ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ರಸ್ತೆ ಬದಿಯ ಹೋಟೆಲ್‌ಗಳು ಹಾಗೂ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಜನರು ಊಟ ಮಾಡುವ ಇತರ ಆಹಾರ ಮಳಿಗೆಗಳನ್ನೂ ತಪಾಸಣೆಗೆ ಒಳಪಡಿಸಲಾಗುತ್ತದೆ.

“ಆಹಾರದ ಗುಣಮಟ್ಟದ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇವೆ. 30 ತಂಡಗಳನ್ನು ರಚಿಸಲಾಗಿದ್ದು, ಅವು ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ಆಹಾರ ಸುರಕ್ಷತಾ ಮಾನದಂಡಗಳನ್ನು ಪರಿಶೀಲಿಸಲಿವೆ” ಎಂದು ಖಾದರ್ ಹೇಳಿದ್ದಾರೆ.

ತಪಾಸಣೆ ವೇಳೆ ಅವಧಿ ಮೀರಿದ ಪದಾರ್ಥಗಳನ್ನು ಬಳಸಲಾಗುತ್ತಿದೆಯೇ, ಅಡುಗೆಮನೆಗಳಲ್ಲಿ ಸೂಕ್ತ ಸ್ವಚ್ಛತೆ ಕಾಪಾಡಲಾಗುತ್ತಿದೆಯೇ, ನಿಗದಿತ ನಿಯಮಗಳಂತೆ ಆಹಾರವನ್ನು ಸಂಗ್ರಹಿಸಲಾಗುತ್ತಿದೆಯೇ ಹಾಗೂ ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ನಿಷೇಧಿತ ಕೃತಕ ಬಣ್ಣಗಳು ಮತ್ತು ರಾಸಾಯನಿಕಗಳ ಬಳಕೆ, ಆಹಾರ ನಿರ್ವಹಣೆಯಲ್ಲಿನ ಅಕ್ರಮಗಳು ಹಾಗೂ ಆಹಾರದ ಲೇಬಲ್‌ ನಿಯಮಗಳ ಉಲ್ಲಂಘನೆಯನ್ನೂ ಪರಿಶೀಲಿಸಲಾಗುತ್ತದೆ.

ಕರ್ನಾಟಕದಲ್ಲಿ ಆಹಾರ ಸುರಕ್ಷತೆ ಕುರಿತು ಸಾರ್ವಜನಿಕರ ಆತಂಕ ಹೆಚ್ಚುತ್ತಿರುವ ಸಂದರ್ಭದಲ್ಲೇ ಈ ಕಾರ್ಯಾಚರಣೆ ಆರಂಭಿಸಲಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಡಿಯೋಗಳು ಹಾಗೂ ಪೋಸ್ಟ್‌ಗಳು ಹರಿದಾಡುತ್ತಿದ್ದು, ಅಡುಗೆಮನೆಗಳಲ್ಲಿನ ಅಸ್ವಚ್ಛತೆ, ಆಹಾರ ನಿರ್ವಹಣೆಯಲ್ಲಿನ ನಿರ್ಲಕ್ಷ್ಯ ಹಾಗೂ ಗೋಬಿ ಮಂಚೂರಿಯನ್‌, ಕಬಾಬ್‌ ಸೇರಿದಂತೆ ಜನಪ್ರಿಯ ಆಹಾರಗಳಲ್ಲಿ ಕೃತಕ ಬಣ್ಣಗಳ ಬಳಕೆಯ ಆರೋಪಗಳು ಕೇಳಿಬಂದಿವೆ. ಈ ದೂರುಗಳ ಹಿನ್ನೆಲೆಯಲ್ಲಿ ಇಲಾಖೆ ತಪಾಸಣೆ ಮತ್ತು ಜಾರಿ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಿದೆ.

ಆಪರೇಷನ್ ಈಟ್ ರೈಟ್

ಕಳೆದ ವರ್ಷವೂ ಆಹಾರ ವಿಷಬಾಧೆ ಹಾಗೂ ಆಹಾರ ಪದಾರ್ಥಗಳಲ್ಲಿ ಕೃತಕ ಬಣ್ಣಗಳ ಬಳಕೆ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ‘ಆಪರೇಷನ್ ಈಟ್ ರೈಟ್’ ಹೆಸರಿನಲ್ಲಿ ಇದೇ ರೀತಿಯ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಹಲವು ಹೋಟೆಲ್‌ಗಳು ಮತ್ತು ಆಹಾರ ಸಂಸ್ಥೆಗಳನ್ನು ಪರಿಶೀಲಿಸಿ, ನಿಯಮ ಉಲ್ಲಂಘಿಸಿದವರಿಗೆ ನೋಟಿಸ್ ನೀಡಲಾಗಿತ್ತು. ಆಹಾರ ಸುರಕ್ಷತಾ ಮಾನದಂಡಗಳನ್ನು ಪಾಲಿಸದವರ ವಿರುದ್ಧ ದಂಡ ವಿಧಿಸಲಾಗಿತ್ತು.

ಬೆಂಗಳೂರು ನಗರದಲ್ಲಿ ಕ್ಲೌಡ್ ಕಿಚನ್‌ಗಳು, ಪಬ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ತಡರಾತ್ರಿ ಆಹಾರ ವಿತರಣಾ ಸೇವೆಗಳು ವೇಗವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಖಾತರಿಪಡಿಸುವುದು ಮತ್ತಷ್ಟು ಮುಖ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರ ಆರೋಗ್ಯ ರಕ್ಷಣೆ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ನಿಯಮಗಳ ಪಾಲನೆಗಾಗಿ ನಿಯಮಿತ ತಪಾಸಣೆ ಅಗತ್ಯ ಎಂದು ಅವರು ಹೇಳಿದ್ದಾರೆ.

ಆಹಾರ ಸುರಕ್ಷತಾ ನಿಯಮ ಉಲ್ಲಂಘಿಸುವ ಹೋಟೆಲ್‌ಗಳು ಮತ್ತು ಆಹಾರ ಮಳಿಗೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಖಾದರ್ ಎಚ್ಚರಿಸಿದ್ದಾರೆ. ಗಂಭೀರ ಪ್ರಕರಣಗಳಲ್ಲಿ ಪರವಾನಗಿ ಅಮಾನತು, ಕಾನೂನು ಕ್ರಮ ಹಾಗೂ ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸುವ ಸಾಧ್ಯತೆಯೂ ಇದೆ.

“ಸುರಕ್ಷಿತ ಮತ್ತು ಗುಣಮಟ್ಟದ ಆಹಾರ ಪಡೆಯುವುದು ಜನರ ಹಕ್ಕು. ಸಾರ್ವಜನಿಕರ ಆರೋಗ್ಯದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ನಿಯಮ ಉಲ್ಲಂಘಿಸುವವರನ್ನು ಬಿಡುವುದಿಲ್ಲ” ಎಂದು ಸಚಿವರು ಹೇಳಿದ್ದಾರೆ.

ಮುಂದಿನ ಕೆಲವು ವಾರಗಳವರೆಗೆ ತಪಾಸಣಾ ಕಾರ್ಯಾಚರಣೆ ಮುಂದುವರಿಯಲಿದ್ದು, ಬಳಿಕ ರಾಜ್ಯದ ಕಾಲೇಜುಗಳು, ಹಾಸ್ಟೆಲ್‌ಗಳು ಮತ್ತು ಕ್ಯಾಟರಿಂಗ್ ಸೇವೆಗಳಿಗೂ ವಿಸ್ತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಕಂಡುಬಂದಲ್ಲಿ ಎಫ್‌ಎಸ್‌ಎಸ್‌ಎಐ ಸಹಾಯವಾಣಿ ಹಾಗೂ ರಾಜ್ಯದ ದೂರು ಪರಿಹಾರ ಪೋರ್ಟಲ್‌ ಮೂಲಕ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಇಲಾಖೆ ಮನವಿ ಮಾಡಿದೆ.

Karnataka Health Department search in hotels
ಹಂಪಿಯಲ್ಲಿ ಅಕ್ರಮ ಹೋಂಸ್ಟೇಗಳಿಗೆ ಅನುಮತಿ: 54 ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದೂರು ದಾಖಲು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com