

ಬೆಂಗಳೂರು: ಕೈಗಾರಿಕೆ ಮತ್ತು ಮೂಲಸೌಕರ್ಯ ಸಚಿವ ಎಂಬಿ ಪಾಟೀಲ್ ಶುಕ್ರವಾರ, ಅಮೆರಿಕದ ಚೆನ್ನೈ ಕಾನ್ಸುಲ್ ಜನರಲ್ ಮರಿಯಾನಾ ಎಲ್. ನ್ಯೂಸುಲರ್ ಜೊತೆಗೆ ಸಭೆ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದು, ಫಲಪ್ರದ ಸಭೆ ನಡೆಸಿದ್ದು, ಕರ್ನಾಟಕ–ಅಮೆರಿಕ ನಡುವಿನ ವ್ಯಾಪಾರ, ಹೂಡಿಕೆ ಹಾಗೂ ತಂತ್ರಜ್ಞಾನ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು ಎಂದು ತಿಳಿಸಿದ್ದಾರೆ.
ಈಗಾಗಲೇ ಸುಮಾರು 700ಕ್ಕೂ ಹೆಚ್ಚು ಅಮೆರಿಕದ ಕಂಪನಿಗಳು ಮತ್ತು ಸ್ಟಾರ್ಟ್‌ಅಪ್ ಗಳು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್ಸ್, ಏರೋಸ್ಪೇಸ್, ರಕ್ಷಣಾ, ಆರೋಗ್ಯ, ಕೃತಕ ಬುದ್ಧಿಮತ್ತೆ ಹಾಗೂ ಸುಧಾರಿತ ಉತ್ಪಾದನಾ ಕ್ಷೇತ್ರಗಳಲ್ಲಿ ನಮ್ಮ ರಾಜ್ಯ ಜಾಗತಿಕ ಹೂಡಿಕೆದಾರರ ವಿಶ್ವಾಸದ ತಾಣವಾಗಿ ಹೊರಹೊಮ್ಮಿದೆ ಎಂದು ಹೇಳಿದ್ದಾರೆ.
ಮಿಷನ್ 500 ಗುರಿಯಡಿ ಭಾರತ–ಅಮೆರಿಕ ದ್ವಿಪಕ್ಷೀಯ ವ್ಯಾಪಾರವನ್ನು 2030ರೊಳಗೆ 500 ಬಿಲಿಯನ್ ಅಮೆರಿಕನ್ ಡಾಲರ್ ಗೆ ಹೆಚ್ಚಿಸುವ ಮಹತ್ವಾಕಾಂಕ್ಷಿ ಗುರಿಗೆ ಕರ್ನಾಟಕವು ತನ್ನ ಶಕ್ತಿಶಾಲಿ ಕೈಗಾರಿಕಾ ಮತ್ತು ನಾವೀನ್ಯ ಪರಿಸರದ ಮೂಲಕ ಪ್ರಮುಖ ಕೊಡುಗೆ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.