ಯುವ ಉದ್ಯೋಗ ಸೇತು, ವಿದ್ಯಾರ್ಥಿ ಸಹಾಯಹಸ್ತ, ಖಾಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ: ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ CM ಡಿ ಕೆ ಶಿವಕುಮಾರ್ ಪ್ರಮುಖ ಘೋಷಣೆಗಳು-Video

ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಬೆಂಗಳೂರು ಪೊಲೀಸ್ ಕಮಿಷನರೇಟ್‌ನ್ನು ಐದು ಪ್ರತ್ಯೇಕ ಕಮಿಷನರೇಟ್‌ಗಳಾಗಿ ಪುನರ್‌ರಚಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದರು.
CM D K Shivakumar receive guard of homour
ಮಾಣೆಕ್ ಶಾ ಪರೇಡ್ ಮೈದಾನದಲ್ಲಿ ಗೌರವ ವಂದನೆ ಸ್ವೀಕರಿಸಿದ ಸಿಎಂ ಡಿ ಕೆ ಶಿವಕುಮಾರ್
Updated on

80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಇಂದು ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಪೆರೇಡ್ ಮೈದಾನದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಿದರು.

ನಮ್ಮ ನಾಡಿನ 7.5 ಕೋಟಿ ಕನ್ನಡಿಗರಿಗೆ ಮತ್ತು ಎಲ್ಲ ಭಾರತೀಯರಿಗೆ 80ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. ಈ ಪವಿತ್ರ ದಿನದಂದು ರಾಜ್ಯದ ಮುಖ್ಯಮಂತ್ರಿಯಾಗಿ ನಾಡಿನ ಜನರನ್ನು ಉದ್ದೇಶಿಸಿ ಮಾತನಾಡುತ್ತಿರುವುದು ನನ್ನ ಪೂರ್ವ ಜನ್ಮದ ಪುಣ್ಯ.

ಈ ವರ್ಷ ಬರಗಾಲ ಸ್ಥಿತಿ ಎದುರಿಸಲು ಸರ್ಕಾರ ದೃಢ ಹೆಜ್ಜೆ ಇಟ್ಟಿದೆ. ಈಗ ರಾಜ್ಯ ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ನಮ್ಮ ಸರ್ಕಾರ ಈ ಪರಿಸ್ಥಿತಿಯ ಗಂಭೀರತೆಯನ್ನು ಅರಿತಿದೆ. ಕುಡಿಯುವ ನೀರು, ಮೇವು ಮತ್ತು ಅಗತ್ಯ ಪರಿಹಾರ ನೀಡಲು ತುರ್ತು ಕ್ರಮ ಕೈಗೊಳ್ಳುತ್ತಿದೆ. ವಿಭಾಗ ಮಟ್ಟದ ಸಭೆಗಳನ್ನು ನಡೆಸಿ ಸ್ಥಳದಲ್ಲೇ ತೀರ್ಮಾನಗಳನ್ನು ಕೈಗೊಂಡಿದ್ದೇನೆ. ಕೆರೆ-ಕಟ್ಟೆಗಳನ್ನು ತುಂಬಿಸಲು, ಕುಡಿಯುವ ನೀರಿನ ಮೂಲಗಳನ್ನು ಕಾಪಾಡಲು ಸೂಚನೆ ನೀಡಿದ್ದೇನೆ. ಇದಲ್ಲದೆ ಬೆಂಗಳೂರಿನ ಜನತೆಗೆ ನೀರಿನ ಬವಣೆಯನ್ನು ತಪ್ಪಿಸಲು ಬೆಂಗಳೂರು ನಗರದ ಸುತ್ತ ಇರುವ ಕೆರೆಗಳ ರಕ್ಷಣೆಯ ಮೂಲಕ ಅಂತರ್ಜಲವನ್ನು ಹೆಚ್ಚಿಸಲು ಒಂದು ಹೊಸ ಕಾರ್ಯಕ್ರಮವನ್ನು ರೂಪಿಸುತ್ತಿದ್ದೇನೆ ಎಂದರು.

ಮೊದಲ ಮತ್ತು ಮೂರನೇ ಶನಿವಾರ: ಜಿಲ್ಲಾ ಉಸ್ತುವಾರಿ ಸಚಿವರಿಂದ ಜನಸ್ಪಂದನ ಸಭೆ

80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಜನಸ್ಪಂದನ ಸಭೆಗಳನ್ನು ನಡೆಸಲಿದ್ದಾರೆ ಎಂದು ಘೋಷಿಸಿದರು.

ಮುಂದಿನ ಹಂತದಲ್ಲಿ ಈ ಉಪಕ್ರಮವನ್ನು ಹೋಬಳಿ ಹಾಗೂ ಜಿಲ್ಲಾ ಪಂಚಾಯಿತಿ ಮಟ್ಟಕ್ಕೂ ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದರು. ಅಲ್ಲದೆ, ಪ್ರತಿ ಶಾಸಕರು ಪಂಚಾಯಿತಿ ಮಟ್ಟದಲ್ಲಿ ಜನಸ್ಪಂದನ ಸಭೆ ನಡೆಸಿ, ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲಿದ್ದಾರೆ ಎಂದು ಶಿವಕುಮಾರ್ ಹೇಳಿದರು.

CM D K Shivakumar receive guard of homour
'ನನಗೆ ದುಡ್ಡಿನ ಅವಶ್ಯಕತೆಯಿಲ್ಲ.., ಮೂರು ತಲೆಮಾರಿಗೆ ಆಗುವಷ್ಟು ಇದೆ, ಈ ರಾಜ್ಯಕ್ಕೆ ಕೊಡುಗೆ ನೀಡಬೇಕು, ಇತಿಹಾಸ ನಿರ್ಮಿಸಬೇಕೆಂಬುದೇ ನನ್ನ ಆಸೆ': ಡಿ ಕೆ ಶಿವಕುಮಾರ್

ಬೆಂಗಳೂರಿನಲ್ಲಿ ಐದು ಟ್ರೀ ಪಾರ್ಕ್‌ಗಳು, ಏಳು ಕೆರೆಗಳಿಗೆ ಸಮಗ್ರ ಅಭಿವೃದ್ಧಿ

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಲಾಲ್‌ಬಾಗ್ ಮಾದರಿಯಲ್ಲಿ ಐದು ಟ್ರೀ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದರು.

ತುರುಹಳ್ಳಿ ಮಿನಿ ಫಾರೆಸ್ಟ್, ತೊಟ್ಟಿಕಲ್ಲು ಫಾಲ್ಸ್, ನೆಟ್ಟಿಗೆರೆ, ಬಿ.ಎಂ. ಕಾವಲ್ ಅರಣ್ಯ ಪ್ರದೇಶ, ಬಸವನ್ತರ ಹಾಗೂ ಮಂದೂರು–ಜ್ಯೋತಿಪುರದಲ್ಲಿ ಟ್ರೀ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ಅಲ್ಲದೆ, ಅಂತರ್ಜಲ ಮರುಪೂರಣ ಹೆಚ್ಚಿಸುವ ಹಾಗೂ ನಗರದ ಕುಡಿಯುವ ನೀರಿನ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಬೆಂಗಳೂರು ಮತ್ತು ಸುತ್ತಮುತ್ತಲಿನ ಏಳು ಕೆರೆಗಳನ್ನು ಪುನಶ್ಚೇತನಗೊಳಿಸಲಾಗುವುದು ಎಂದು ಹೇಳಿದರು.

ಪುನಶ್ಚೇತನಗೊಳಿಸಲಿರುವ ಕೆರೆಗಳೆಂದರೆ ಹೆಸರಘಟ್ಟ, ಬೆಟ್ಟದ ಕೋಟೆ, ಹೊಸಕೋಟೆ, ಎಲೆ ಮಲ್ಲಪ್ಪ ಶೆಟ್ಟಿ, ಬನ್ನೇರುಘಟ್ಟ, ಬಾಗಲೂರು ಹಾಗೂ ಬೈರಮಂಗಲ.

ಬೆಂಗಳೂರು ಪೊಲೀಸ್ ಕಮಿಷನರೇಟ್‌ನ್ನು ಐದು ವಿಭಾಗಗಳಾಗಿ ಪುನಾರಚನೆ

ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಬೆಂಗಳೂರು ಪೊಲೀಸ್ ಕಮಿಷನರೇಟ್‌ನ್ನು ಐದು ಪ್ರತ್ಯೇಕ ಕಮಿಷನರೇಟ್‌ಗಳಾಗಿ ಪುನರ್‌ರಚಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದರು.

ಅಗತ್ಯವಿರುವೆಡೆ ಹೊಸ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು. ಬೃಹತ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ಸಂಚಾರ ಪೊಲೀಸರ ನಡುವಿನ ಉತ್ತಮ ಸಮನ್ವಯದ ಮೂಲಕ ಬೆಂಗಳೂರಿನ ಸಂಚಾರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

6ನೇ ತರಗತಿಯಿಂದ AI ಶಿಕ್ಷಣ; ಬೆಂಗಳೂರಿನಲ್ಲಿ ಭಾರತದ ಮೊದಲ ಸಾರ್ವಜನಿಕ AI ವಿಶ್ವವಿದ್ಯಾಲಯ

ಜಾಗತಿಕ ತಂತ್ರಜ್ಞಾನ ಕ್ಷೇತ್ರಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಉದ್ದೇಶದಿಂದ ಕರ್ನಾಟಕದ ಎಲ್ಲ ಶಾಲೆಗಳಲ್ಲಿ 6ನೇ ತರಗತಿಯಿಂದ ಕೃತಕ ಬುದ್ಧಿಮತ್ತೆ (AI) ಶಿಕ್ಷಣವನ್ನು ಪರಿಚಯಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದರು.

ಈ ನಿಟ್ಟಿನಲ್ಲಿ ‘AI ಅಕ್ಷರ ಅಭಿಯಾನ’ ಮತ್ತು ‘ಕೋಡಿಂಗ್ ಗುರುಕುಲ’ ಎಂಬ ಎರಡು ಪ್ರಮುಖ ಕಾರ್ಯಕ್ರಮಗಳನ್ನು ಘೋಷಿಸಿದರು. ‘ಕೋಡಿಂಗ್ ಗುರುಕುಲ’ದಡಿ ಉಚಿತ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ AI ಮತ್ತು ಕೋಡಿಂಗ್ ಕೌಶಲ್ಯಗಳನ್ನು ಕಲಿಯುವ ಅವಕಾಶ ದೊರೆಯಲಿದೆ.

ಇದರ ಜೊತೆಗೆ, ಭಾರತದ ಮೊದಲ ಸಾರ್ವಜನಿಕ AI ವಿಶ್ವವಿದ್ಯಾಲಯವನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗುವುದು. AI ಪ್ರಮಾಣಪತ್ರ ಕೋರ್ಸ್‌ಗಳು 2027ರ ಜನವರಿಯಿಂದ ಆರಂಭವಾಗಲಿವೆ ಎಂದು ಅವರು ತಿಳಿಸಿದರು.

ರಾಜ್ಯದಾದ್ಯಂತ AI ಹಬ್‌ಗಳನ್ನು ಸ್ಥಾಪಿಸಲಾಗುವುದು ಎಂದೂ ಶಿವಕುಮಾರ್ ಘೋಷಿಸಿದರು.

‘ವಿದ್ಯಾರ್ಥಿ ಸಹಾಯಹಸ್ತ’: ಗ್ರಾಮೀಣ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ.7.5ರಷ್ಟು ಮೀಸಲಾತಿ

ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ವೃತ್ತಿಪರ ಉನ್ನತ ಶಿಕ್ಷಣದ ಅವಕಾಶಗಳನ್ನು ವಿಸ್ತರಿಸುವ ಉದ್ದೇಶದಿಂದ ‘ವಿದ್ಯಾರ್ಥಿ ಸಹಾಯಹಸ್ತ’ ಎಂಬ ಹೊಸ ಯೋಜನೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದರು.

ಈ ಯೋಜನೆಯಡಿ 1ರಿಂದ 10ನೇ ತರಗತಿವರೆಗೆ ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳ ಪ್ರವೇಶದಲ್ಲಿ ಈಗಿರುವ ಶೇ.15ರ ಗ್ರಾಮೀಣ ಮೀಸಲಾತಿಯೊಳಗೆ ಶೇ.7.5ರಷ್ಟು ಮೀಸಲಾತಿ ಕಲ್ಪಿಸಲಾಗುವುದು.

ಗ್ರಾಮೀಣ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಗುಣಮಟ್ಟದ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಅವಕಾಶ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ನಮ್ಮ ಸರ್ಕಾರ ಗ್ಯಾರಂಟಿಗಳಿಗಷ್ಟೇ ಸೀಮಿತವಾಗಿಲ್ಲ. ನಮ್ಮ ಮುಂದೆ ದೂರದೃಷ್ಟಿ ಅಭಿವೃದ್ಧಿಯ ಗುರಿ ಇದೆ. ನೆಮ್ಮದಿಯ ನಾಳಿನ ಕರ್ನಾಟಕವನ್ನು ಕಟ್ಟಲು ಹೊಸ ನೀಲ - ನಕಾಶೆಯನ್ನು (BLUE PRINT) ಸಿದ್ಧಪಡಿಸುತ್ತಿದ್ದೇವೆ. ಭಾರತದ ಬಲ ಕರ್ನಾಟಕ - ನಮ್ಮ ರಾಜ್ಯ ಭಾರತದ ಅತ್ಯಂತ ಬಲವಾದ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿದೆ ಎಂದರು.

ಉದ್ಯೋಗ ಆಕಾಂಕ್ಷಿ ಯುವ ಸಮೂಹದ ನೆಮ್ಮದಿಯ ನಾಳೆಗಳಿಗಾಗಿ “ಮುಖ್ಯಮಂತ್ರಿ ಉದ್ಯೋಗ ಸಂಕಲ್ಪ” ಆರಂಭಿಸುತ್ತಿದ್ದೇನೆ. ಈ ಯೋಜನೆಯ ಅಡಿಯಲ್ಲಿ ಈ ಕೆಳಗಿನ ಕೆಲಸಗಳನ್ನು ಮಾಡುತ್ತೇವೆ. - ಸರ್ಕಾರಿ ಹುದ್ದೆಗಳ ಭರ್ತಿ - ಸರ್ಕಾರಿ ವಲಯದ ಖಾಲಿ ಹುದ್ದೆಗಳನ್ನು ತುಂಬುವುದು ನಮ್ಮ ಮೊದಲ ಆದ್ಯತೆ. - ವಿವಿಧ ಇಲಾಖೆಗಳ ಖಾಲಿ ಹುದ್ದೆಗಳ ಪೈಕಿ ಪ್ರಮುಖ 72,000 ಹುದ್ದೆಗಳನ್ನು ತುಂಬುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.

- ಮುಂದಿನ ಆರು ತಿಂಗಳಲ್ಲಿ ಎಲ್ಲಾ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆಗಳನ್ನು ಹೊರಡಿಸುತ್ತೇವೆ. - “ಯುವ ಉದ್ಯೋಗ ಸೇತು” ಎಂಬ ಹೊಸ ಯೋಜನೆ ಆರಂಭಿಸಲಾಗುವುದು.

- ಖಾಸಗಿ ವಲಯದಲ್ಲಿರುವ ಉದ್ಯೋಗದ ಅವಕಾಶಗಳನ್ನು ಯುವಜನರಿಗೆ ತಲುಪಿಸಲು ಸಮಗ್ರ ತಂತ್ರಾಂಶ ರೂಪಿಸಲಾಗುವುದು.

- ಈ ತಂತ್ರಾಂಶ ಉದ್ಯೋಗ ಹುಡುಕುವವರು, ಉದ್ಯೋಗ ನೀಡುವವರು ಮತ್ತು ಶಿಕ್ಷಣ ಸಂಸ್ಥೆಗಳನ್ನು ಒಂದೇ ವೇದಿಕೆಗೆ ತರಲಿದೆ.

- 100 ಸರ್ಕಾರಿ ITIಗಳನ್ನು ಉದ್ಯೋಗ ಆಧಾರಿತ ಕ್ಯಾಂಪಸ್‌ಗಳಾಗಿ ಬದಲಿಸಲಾಗುವುದು. - ಖಾಸಗಿ ಕೈಗಾರಿಕೆಗಳ ಸಹಯೋಗದಲ್ಲಿ 10,000 ಯುವಕರಿಗೆ ಉದ್ಯೋಗದ ಅವಕಾಶ ಕಲ್ಪಿಸಲಾಗುವುದು

ಉದ್ಯೋಗ ನಿಧಿ ಉದ್ಯೋಗ ನಿಧಿ ಎಂಬ ಹೊಸ ಯೋಜನೆಯನ್ನು ಆರಂಭಿಸಲಾಗುವುದು. - ರಾಜ್ಯದ ಅತ್ಯಂತ ಹಿಂದುಳಿದ ಹತ್ತು ಜಿಲ್ಲೆಗಳಲ್ಲಿ ಹೊಸ ಉದ್ಯೋಗ ಸೃಷ್ಟಿಸುವ ಉದ್ಯಮಿಗಳಿಗೆ ಸರ್ಕಾರ ಪ್ರೋತ್ಸಾಹ ನೀಡಲಿದೆ.

- ಪ್ರತಿ ಹೊಸ ಉದ್ಯೋಗಕ್ಕೆ ಪ್ರತಿ ತಿಂಗಳು ಸರ್ಕಾರವೇ ತಲಾ 2500ರೂ ಪ್ರೋತ್ಸಾಹ ಧನ ನೀಡಲಿದೆ. - ಈ ಸೌಲಭ್ಯ ಮುಂದಿನ ಎರಡು ವರ್ಷಗಳ ಕಾಲ ಜಾರಿಯಲ್ಲಿರುತ್ತದೆ. - ಇದರಿಂದ ಒಂದು ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಕೃಷಿಗೆ ತಂತ್ರಜ್ಞಾನದ ನೆರವು

– “ಮುಖ್ಯಮಂತ್ರಿ ರೈತ ಚೈತನ್ಯ ಯೋಜನೆ” (Karnataka Digital Agritech Mission) - ರೈತರ ಅನುಭವಕ್ಕೆ ಆಧುನಿಕ ತಂತ್ರಜ್ಞಾನದ ಶಕ್ತಿಯನ್ನು ಬೆರೆಸಲು “ಮುಖ್ಯಮಂತ್ರಿ ರೈತ ಚೈತನ್ಯ” ಯೋಜನೆಯನ್ನು ಘೋಷಿಸುತ್ತಿದ್ದೇನೆ.

- ಡ್ರೋನ್ ಮತ್ತು ಉಪಗ್ರಹ ಚಿತ್ರಗಳ ಮೂಲಕ ಬೆಳೆ ಸಮೀಕ್ಷೆ ನಡೆಸಲಾಗುವುದು. - ನೈಜ ಸಮಯದ ಮಾಹಿತಿಯ ಆಧಾರದ ಮೇಲೆ ರೈತರಿಗೆ ಬೆಳೆ, ಕೀಟ ಮತ್ತು ರೋಗದ ಬಾಧೆ ಹಾಗೂ ಮಾರುಕಟ್ಟೆಯ ಬಗ್ಗೆ ನಿಖರ ಮಾಹಿತಿ ನೀಡಲಾಗುವುದು.

- ಈ ಮಾಹಿತಿಯನ್ನು ಕೃಷಿ ಮಾರುಕಟ್ಟೆಯ ಡಿಜಿಟಲ್ ವ್ಯವಸ್ಥೆಯೊಂದಿಗೆ ಜೋಡಿಸಲಾಗುವುದು

ಉದ್ಯೋಗಾಕಾಂಕ್ಷಿಗಳಿಗೆ ಗುಡ್​ ನ್ಯೂಸ್

ರಾಜ್ಯದಲ್ಲಿ ಉದ್ಯೋಗಾಕಾಂಕ್ಷಿ ಯುವಕರಿಗೆ ಸರ್ಕಾರ ಬಿಗ್ ನ್ಯೂಸ್ ಕೊಟ್ಟಿದೆ. ವಿವಿಧ ಇಲಾಖೆಗಳಲ್ಲಿರುವ 72,000 ಪ್ರಮುಖ ಖಾಲಿ ಹುದ್ದೆಗಳ ಭರ್ತಿಗೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.  ಮುಂದಿನ 6 ತಿಂಗಳಲ್ಲಿ ಎಲ್ಲಾ ಖಾಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಡಿಕೆ ಶಿವಕುಮಾರ್ ಭರವಸೆ ನೀಡಿದರು.

‘ಯುವ ಉದ್ಯೋಗ ಸೇತು’

ಯುವಕರಿಗಾಗಿ ‘ಯುವ ಉದ್ಯೋಗ ಸೇತು’ ಯೋಜನೆ ಜಾರಿಗೆ ತರಲಾಗುತ್ತೆ.ಖಾಸಗಿ ವಲಯದ ಉದ್ಯೋಗಾವಕಾಶಗಳನ್ನ ಯುವಕರಿಗೆ ತಲುಪಿಸಲು ಸಮಗ್ರ ತಂತ್ರಾಂಶ ಬಳಸಲಿದ್ದು, ಉದ್ಯೋಗ ಹುಡುಕುವವರು, ಉದ್ಯೋಗ ನೀಡುವವರು ಹಾಗೂ ಕೌಶಲ್ಯ ಸಂಸ್ಥೆಗಳನ್ನು ಒಂದೇ ವೇದಿಕೆಗೆ ತರಲು ಕ್ರಮಕೈಗೊಳ್ಳಲಾಗುವುದು. ಉದ್ಯೋಗ ಸೃಷ್ಠಿ ಮಾಡುವ ಸಣ್ಣ ಉದ್ಯಮಗಳಿಗೆ ಸರ್ಕಾರದಿಂದ ತಿಂಗಳಿಗೆ 2,500 ಪ್ರೋತ್ಸಾಹ ಧನ ನೀಡಲಾಗುತ್ತೆ. ಈ ಸೌಲಭ್ಯ 2 ವರ್ಷಗಳ ಕಾಲ ಜಾರಿಯಲ್ಲಿ ಇರಲಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com