

ಗದಗ: ಗದಗ ಜಿಲ್ಲೆಯಲ್ಲೊಂದು ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘೋರ ಘಟನೆ ಬೆಳಕಿಗೆ ಬಂದಿದೆ. 26 ವರ್ಷದ ಅಸಹಾಯಕ, ಮಾನಸಿಕ ವಿಕಲಚೇತನ ಯುವತಿಯನ್ನು ಪುಸಲಾಯಿಸಿ ಸಾಮೂಹಿತ ಅತ್ಯಾಚಾರ ನಡೆಸಿ, ಬಳಿಕ ಆಕೆ ಗರ್ಭಿಣಿಯಾಗುತ್ತಿದ್ದಂತೆ ಅಕ್ರಮವಾಗಿ ಗರ್ಭಪಾತ ಮಾಡಿಸಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಘಟನೆ ನಡೆದಿದೆ.
ಈ ಸಂಬಂಧ ಗದಗ ಮಹಿಳಾ ಠಾಣೆಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಆರ್.ಎಂ.ಪಿ (RMP) ವೈದ್ಯ ಮತ್ತು ನರ್ಸ್ ಸೇರಿದಂತೆ ಒಟ್ಟು ಏಳು ಮಂದಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ಗದಗದ ಎಸ್.ಎಂ. ಕೃಷ್ಣಾನಗರ ನಿವಾಸಿಯಾದ ಮಾನಸಿಕ ವಿಕಲಚೇತನ ಯುವತಿಯೇ ಕಾಮುಕರ ದೌರ್ಜನ್ಯಕ್ಕೆ ಒಳಗಾದ ದುರ್ದೈವಿ.
ಈಕೆಯ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡ ನಾಲ್ವರು ಕಾಮುಕರು, ಕಳೆದ ಕೆಲವು ತಿಂಗಳುಗಳಿಂದ ಯುವತಿಗೆ ಆಮಿಷ ಒಡ್ಡಿ ಬೇರೆ ಬೇರೆ ಕಡೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಇದರಿಂದಾಗಿ ಯುವತಿ 3 ತಿಂಗಳ ಗರ್ಭಿಣಿಯಾಗಿದ್ದಾಳೆ.
ಯುವತಿ ಗರ್ಭಿಣಿಯಾಗಿರುವ ವಿಷಯ ತಿಳಿಯುತ್ತಿದ್ದಂತೆ ಆತಂಕಗೊಂಡ ಆರೋಪಿಗಳು, ತಮ್ಮ ಪಾಪಕೃತ್ಯವನ್ನು ಮುಚ್ಚಿಹಾಕಲು ಸ್ಕೆಚ್ ಹಾಕಿದ್ದಾರೆ.
ಸ್ಥಳೀಯ ಆರ್.ಎಂ.ಪಿ ವೈದ್ಯ ಹಾಗೂ ನರ್ಸ್ ನೆರವು ಪಡೆದು, ಯುವತಿಗೆ ಬಲವಂತವಾಗಿ ಗರ್ಭಪಾತದ ಮಾತ್ರೆಗಳನ್ನು ನೀಡಿ ಗರ್ಭಪಾತ ಮಾಡಿಸಿದ್ದಾರೆ.
ಗರ್ಭಪಾತದ ಬಳಿಕ ಸಂತ್ರಸ್ತೆಯ ಕುಟುಂಬಕ್ಕೆ ವಿಷಯ ತಿಳಿದಿದ್ದು, ಬಳಿಕ ಆರೋಪಿಗಳು ಪ್ರಕರಣವನ್ನು ಮುಚ್ಚಿಹಾಕಲು ದೊಡ್ಡ ಮೊತ್ತದ ಹಣದ ಆಮಿಷ ಒಡ್ಡಿದ್ದಾರೆ. ಅಷ್ಟೇ ಅಲ್ಲದೆ, ಒಂದು ವೇಳೆ ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ, ಇಡೀ ಕುಟುಂಬವನ್ನೇ ಕೊಲೆ ಮಾಡುವುದಾಗಿ ಬೆದರಿಕೆಯನ್ನೂ ಹಾಕಿದ್ದಾರೆಂದು ತಿಳಿದುಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ಗದಗ ಮಹಿಳಾ ಪೊಲೀಸರು, ತಡರಾತ್ರಿ ಕಾರ್ಯಾಚರಣೆ ನಡೆಸಿ ಏಳು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಸಿಕಂದರ್ ಬೆಪಾರಿ, ಶಬ್ಬೀರ್, ಪ್ರದೀಪ್ ನವಲೇಕರ್, ಭರತ್ ಕೋರವರ್, ಸಂದೀಪ್ ನವಲೇಕರ್, ಆರ್‌ಎಂಪಿ ವೈದ್ಯ ನಾಗರಾಜ್ ಕಾಮತಾರ್ ಮತ್ತು ಸ್ಟಾಫ್ ನರ್ಸ್ ರೇಖಾ ಶಿರಹಟ್ಟಿ ಎಂದು ಗುರುತಿಸಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪ್ರಕರಣದ ತನಿಖೆ ಇನ್ನೂ ಮುಂದುವರೆದಿದ್ದು, ಇದೀಗ ವೈದ್ಯರ ಚೀಟಿ (Prescription) ಇಲ್ಲದೆಯೇ ಗರ್ಭಪಾತದ ಮಾತ್ರೆಗಳನ್ನು ಅಕ್ರಮವಾಗಿ ಮಾರಾಟ ಮಾಡಿದ ಸ್ಥಳೀಯ ಮೆಡಿಕಲ್ ಸ್ಟೋರ್ ಮಾಲೀಕ ಹಾಗೂ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಕೆಲವು ಸ್ಥಳೀಯ ಮುಖಂಡರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಸದ್ಯ ತೀವ್ರ ಅಸ್ವಸ್ಥಗೊಂಡಿರುವ ಸಂತ್ರಸ್ತ ಯುವತಿಯನ್ನು ಸುರಕ್ಷಿತ ಕೇಂದ್ರಕ್ಕೆ ರವಾನಿಸಲಾಗಿದ್ದು, ಸೂಕ್ತ ವೈದ್ಯಕೀಯ ಚಿಕಿತ್ಸೆ ಹಾಗೂ ಆಪ್ತಸಮಾಲೋಚನೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.