SIR ಡ್ಯೂಟಿಯಲ್ಲಿ ಶಿಕ್ಷಕರು ಬ್ಯುಸಿ: ಸರ್ಕಾರಿ ಶಾಲೆ ಮಕ್ಕಳ ದುಸ್ಥಿತಿ ಕೇಳೋರೇ ಇಲ್ಲ !

ಕಳೆದ ಸುಮಾರು ಎರಡು ತಿಂಗಳಿಂದ SIR ಕರ್ತವ್ಯದ ಹಿನ್ನೆಲೆಯಲ್ಲಿ ಶಿಕ್ಷಕರು ತಮಗೆ ನಿಗದಿಪಡಿಸಿದ ವಿಷಯಗಳ ಹೊರತಾಗಿಯೂ ಇತರ ವಿಷಯಗಳನ್ನು ಬೋಧಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಕೆಲವೊಮ್ಮೆ ಮುಖ್ಯಶಿಕ್ಷಕರೂ ತರಗತಿಗಳನ್ನು ತೆಗೆದುಕೊಳ್ಳಬೇಕಾಗುತ್ತಿದೆ.
Government school
ಸರ್ಕಾರಿ ಶಾಲೆ
Updated on

ಬೆಂಗಳೂರು: ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಇತರ ಭಾಗಗಳ ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಆಗಸ್ಟ್ 17ರ ಗಡುವು ಮುಗಿದ ಬಳಿಕವೂ ವಿಶೇಷ ತೀವ್ರ ಪರಿಷ್ಕರಣೆ (SIR) ಕರ್ತವ್ಯದಲ್ಲಿ ತೊಡಗಿಸಿಕೊಂಡಿರುವುದರಿಂದ, ಶಾಲೆಗಳಲ್ಲಿನ ವಿದ್ಯಾರ್ಥಿಗಳು ಪಾಠವಾಗದೆ ತೀವ್ರ ಸಿಬ್ಬಂದಿ ಕೊರತೆಯ ಪರಿಣಾಮ ಎದುರಿಸುತ್ತಿದ್ದಾರೆ.

ಕಳೆದ ಸುಮಾರು ಎರಡು ತಿಂಗಳಿಂದ SIR ಕರ್ತವ್ಯದ ಹಿನ್ನೆಲೆಯಲ್ಲಿ ಶಿಕ್ಷಕರು ತಮಗೆ ನಿಗದಿಪಡಿಸಿದ ವಿಷಯಗಳ ಹೊರತಾಗಿಯೂ ಇತರ ವಿಷಯಗಳನ್ನು ಬೋಧಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಕೆಲವೊಮ್ಮೆ ಮುಖ್ಯಶಿಕ್ಷಕರೂ ತರಗತಿಗಳನ್ನು ತೆಗೆದುಕೊಳ್ಳಬೇಕಾಗುತ್ತಿದೆ. ಇದರಿಂದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಆತಂಕಕಾರಿಯಾಗಿರುವ ವಿದ್ಯಾರ್ಥಿ-ಶಿಕ್ಷಕರ ಅನುಪಾತ ಮತ್ತಷ್ಟು ಹದಗೆಟ್ಟಿದೆ.

ಶಾಲಾ ಶಿಕ್ಷಕರು ಮತ್ತು ಅಂಗನವಾಡಿ ಶಿಕ್ಷಕರನ್ನು ಒಳಗೊಂಡಿರುವ SIR ಪ್ರಕ್ರಿಯೆಯ BLOಗಳ ಕರ್ತವ್ಯ ಮಾರ್ಚ್‌ನಲ್ಲೇ ಆರಂಭವಾಗಿತ್ತು. ಬಿಎಲ್ ಒ ಕೆಲಸ ಒಂದು ತಿಂಗಳೊಳಗೆ ಪೂರ್ಣಗೊಳ್ಳಬೇಕಿತ್ತು. ಆದರೆ ಈ ಪ್ರಕ್ರಿಯೆಗೆ ಎರಡು ಬಾರಿ ವಿಸ್ತರಣೆ ನೀಡಿದ್ದರಿಂದ, ಅವರನ್ನು ಆಗಸ್ಟ್ 17ರವರೆಗೆ ವ್ಯಾಪಕವಾಗಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅಂತಿಮ ಹಂತದ ಹಕ್ಕು-ಆಕ್ಷೇಪಣೆಗಳ ಪ್ರಕ್ರಿಯೆ ಅಕ್ಟೋಬರ್ 22ರವರೆಗೆ ನಡೆಯಲಿದ್ದು, ಅಲ್ಲಿಯವರೆಗೆ ಬಿಎಲ್ ಒಗಳ ಸಕ್ರಿಯ ಪಾತ್ರ ಮುಂದುವರಿಯಲಿದೆ. ಆದರೆ ಬಿಎಲ್ ಒಗಳೆಲ್ಲರೂ ಶಿಕ್ಷಕರಲ್ಲ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Government school
Karnataka SIR: 1.08 ಕೋಟಿಗೂ ಅಧಿಕ ಮತದಾರರು ಪಟ್ಟಿಯಿಂದ ಹೊರಗೆ; 25 ಲಕ್ಷ ಮಂದಿ ಸ್ಥಿತಿ ಡೋಲಾಯಮಾನ

ಶಾಲಾ ಶಿಕ್ಷಕಿ ಮೆರಿನಾ ಫ್ಲೋರಾ ಅವರು ಈ ವರದಿ ಬರೆಯುವ ವೇಳೆಯಲ್ಲೂ SIR ಕರ್ತವ್ಯದಲ್ಲಿ ನಿರತರಾಗಿದ್ದರು. ನಮ್ಮ ಮೇಲೆ ಸಾಕಷ್ಟು ಒತ್ತಡವಿದೆ. ಆದರೆ ಕರ್ತವ್ಯ ಪೂರ್ಣಗೊಳಿಸಲೇಬೇಕು. ನನ್ನನ್ನೂ ಒಳಗೊಂಡಂತೆ ಸುಮಾರು ಅರ್ಧದಷ್ಟು ಶಿಕ್ಷಕರು SIR ಕರ್ತವ್ಯಕ್ಕೆ ತೆರಳಿರುವುದರಿಂದ ಶಾಲೆಯು ಕೆಲವು ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದೆ ಎಂದು ಹೇಳಿದರು.

ಸರ್ಕಾರಿ ಶಾಲೆಯೊಂದರಲ್ಲಿ ಕನ್ನಡ ಬೋಧಿಸುವ ನಾಗರತ್ನ ಪಿ. ಅವರು ಈ ಹಿಂದೆ ಬೂತ್ ಮಟ್ಟದ ಅಧಿಕಾರಿ (BLO) ಆಗಿ ಕಾರ್ಯನಿರ್ವಹಿಸಿದ್ದರು. ಕೆಲಸದ ಹೊರೆ ಅಪಾರವಾಗಿ ಹೆಚ್ಚಾಗಿದೆ. ನಾನು ಯಾವಾಗಲೂ ವಿದ್ಯಾರ್ಥಿಗಳಿಂದ ಸುತ್ತುವರಿದಿರುತ್ತೇನೆ. ಪರಿಸ್ಥಿತಿ ತುಂಬಾ ಕಷ್ಟಕರವಾಗಿದೆ ಎಂದು ಹೇಳಿದರು.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಂಸ್ಥೆಯ ಪ್ರತಿನಿಧಿ ಮಾತನಾಡಿಸಿದ ಸಾಕಷ್ಟು ಸಂಖ್ಯೆಯ ಶಿಕ್ಷಕರು, ವಿಶೇಷವಾಗಿ SIR ಕರ್ತವ್ಯದಲ್ಲಿದ್ದವರು, ತಮ್ಮ ಸಮಸ್ಯೆಗಳು ಮತ್ತು ಪರಿಸ್ಥಿತಿಗಳ ಬಗ್ಗೆ ಮಾತ್ರವಲ್ಲದೆ, ತಾವು ತೆರಳಿದ ಬಳಿಕ ತಮ್ಮ ಕೆಲಸದ ಹೊರೆಯನ್ನು ಹೊತ್ತಿರುವ ಸಹೋದ್ಯೋಗಿಗಳ ಪರಿಸ್ಥಿತಿಯ ಬಗ್ಗೆಯೂ ಯಾವುದೇ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದರು.

SIR ಕರ್ತವ್ಯ: ತರಗತಿ ತೆಗೆದುಕೊಳ್ಳುವ ಅನಿವಾರ್ಯತೆಗೆ ಸಿಲುಕಿದ ಮುಖ್ಯಶಿಕ್ಷಕರು

ಸರ್ಜಾಪುರ ಮುಖ್ಯರಸ್ತೆಯಲ್ಲಿರುವ ಸರ್ಕಾರಿ ಶಾಲೆಯೊಂದರ ಮುಖ್ಯಶಿಕ್ಷಕ ಸುರೇಶ್ ಕೆ, ತಮ್ಮ ಶಾಲೆಯು ದೊಡ್ಡ ಸಮಸ್ಯೆಗಳಿಲ್ಲದೆ ಕಾರ್ಯನಿರ್ವಹಿಸುತ್ತಿರುವುದಕ್ಕೆ ಎರಡು ಲಾಭರಹಿತ ಸಂಸ್ಥೆಗಳು ಶಾಲೆಯೊಂದಿಗೆ ಕೆಲಸ ಮಾಡುತ್ತಿರುವುದೇ ಕಾರಣ ಎಂದರು. ಆ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಬೋಧಿಸಲು 25-27 ಶಿಕ್ಷಕರನ್ನು ನಿಯೋಜಿಸಿವೆ.

ನಮ್ಮ ಶಾಲೆಯಲ್ಲಿರುವ ಖಾಯಂ ಶಿಕ್ಷಕರ ಸಂಖ್ಯೆ ಕೇವಲ ಏಳು. ಅವರಲ್ಲಿ ಐವರನ್ನು SIR ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಮೇಲಿನ ಸಂಸ್ಥೆಗಳ ನೆರವು ಇಲ್ಲದಿದ್ದರೆ ನಾವು ದೊಡ್ಡ ಸಮಸ್ಯೆಗೆ ಸಿಲುಕುತ್ತಿದ್ದೆವು ಎಂದು ಹೇಳಿದರು. SIR ಕರ್ತವ್ಯಕ್ಕೆ ತೆರಳಿರುವ ಐವರು ಶಿಕ್ಷಕರು ಇಂದು (ಆಗಸ್ಟ್ 20) ನಿಯಮಿತ ಬೋಧನಾ ಕರ್ತವ್ಯಕ್ಕೆ ಶಾಲೆಗೆ ಮರಳುವ ನಿರೀಕ್ಷೆಯಿದೆ ಎಂದರು.

ಆದರೆ, ಸುತ್ತಮುತ್ತಲಿನ ಇತರ ಶಾಲೆಗಳ ಪರಿಸ್ಥಿತಿ ಅಷ್ಟೊಂದು ಉತ್ತಮವಾಗಿಲ್ಲ ಎಂದು ಸುರೇಶ್ ಹೇಳಿದರು.

ನನಗೆ ವೈಯಕ್ತಿಕವಾಗಿ ಗೊತ್ತಿರುವ ಕೆಲವು ಶಾಲೆಗಳು ತೀವ್ರ ಸಂಕಷ್ಟದಲ್ಲಿವೆ. ಅಲ್ಲಿನ ಮುಖ್ಯಶಿಕ್ಷಕರು ಅಥವಾ ಪ್ರಾಂಶುಪಾಲರು ಅನೇಕ ತರಗತಿಗಳನ್ನು ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿ ಸಂಘಟನೆಗಳ ಅರ್ಹ ಸದಸ್ಯರು ಪದವೀಧರರನ್ನು ಸ್ವಯಂಪ್ರೇರಿತವಾಗಿ ಬೋಧನೆಗೆ ನಿಯೋಜಿಸಿರುವುದರಿಂದ ಶಿಕ್ಷಕರ ಮೇಲಿನ ಹೊರೆ ಸ್ವಲ್ಪ ಕಡಿಮೆಯಾಗಿದೆ ಎಂದು ಹೇಳಿದರು.

ಸಿಬ್ಬಂದಿ ಕೊರತೆಯ ಪ್ರಮುಖ ಪರಿಣಾಮವೆಂದರೆ ಶಿಕ್ಷಕರ ಕರ್ತವ್ಯಗಳಲ್ಲಿ ಬದಲಾವಣೆ ಮಾಡಬೇಕಾಗಿರುವುದು. ಅಂದರೆ, ಶಿಕ್ಷಕರು ತಮಗೆ ಕಡಿಮೆ ಅಥವಾ ಯಾವುದೇ ಅನುಭವವಿಲ್ಲದ ವಿಷಯಗಳನ್ನೂ ಬೋಧಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ಶಿಕ್ಷಣ ತಜ್ಞೆ ಪ್ರೊ. ಸಬಿಹಾ ಭೂಮಿಗೌಡ ಅವರು ಸರ್ಕಾರಿ ಶಾಲೆಗಳಲ್ಲಿ ಸಾಮಾನ್ಯವಾಗಿಯೇ ಶಿಕ್ಷಕರ ಕೊರತೆ ತೀವ್ರವಾಗಿದೆ ಎಂದು ಹೇಳಿದ್ದು, ಈ ಪರಿಸ್ಥಿತಿಯಿಂದ ಮುಖ್ಯವಾಗಿ ಅಂಚಿನ ಸಮುದಾಯಗಳ ವಿದ್ಯಾರ್ಥಿಗಳೇ ಬಲಿಯಾಗುತ್ತಿದ್ದಾರೆ. ಇದು ಉತ್ತಮ ಶಿಕ್ಷಣ ಪಡೆಯುವ ಅವರ ಮೂಲಭೂತ ಹಕ್ಕಿಗೆ ಧಕ್ಕೆ ತರುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ಎರಡು ತಿಂಗಳ ಅವಧಿಯಲ್ಲಿ ಶಿಕ್ಷಣಕ್ಕೆ ಉಂಟಾಗಿರುವ ನಷ್ಟ ಗಮನಾರ್ಹ ಮತ್ತು ಸರಿಪಡಿಸಲಾಗದಂತಹದ್ದು. ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಕಲಿಕೆ ಈಗಾಗಲೇ ಹಲವು ಬಾಹ್ಯ ಕಾರಣಗಳಿಂದಾಗಿ ಹದಗೆಟ್ಟಿದೆ. ಅವರಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಸ್ವತಃ ಪಾಠಗಳನ್ನು ಕಲಿಯುವ ಸಾಮರ್ಥ್ಯವಿಲ್ಲ. ಹೀಗಾಗಿ ಈ ಪರಿಸ್ಥಿತಿಯ ಗಂಭೀರ ಪರಿಣಾಮವನ್ನು ಅವರೇ ಹೆಚ್ಚು ಎದುರಿಸಲಿದ್ದಾರೆ ಎಂದು ಹೇಳಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕಾರಿಗಳನ್ನು ಪ್ರತಿಕ್ರಿಯೆಗಾಗಿ ಸಂಪರ್ಕಿಸಲು ಸಾಧ್ಯವಾಗಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com