

ಬೆಂಗಳೂರು: ಮರಿ ಹಾಕಿದ ಕೆಲವೇ ಗಂಟೆಗಳಲ್ಲೇ ನಾಯಿ ಬೊಗಳುತ್ತಿದೆ ಎಂಬ ಕಾರಣಕ್ಕೆ ನೆರೆಹೊರೆಯ ಕುಟುಂಬವೊಂದು 9 ವರ್ಷದ ಸಾಕು ನಾಯಿಯನ್ನು ಹೊಡೆದು ಕೊಂದಿರುವ ಅಮಾನವೀಯ ಕೃತ್ಯವೊಂದು ಬೆಂಗಳೂರಿನ ಗೊಟ್ಟಿಗೆರೆಯಲ್ಲಿ ನಡೆದಿದೆ.
ದೊಡ್ಡಕಮ್ಮನಹಳ್ಳಿ ನಿವಾಸಿ, ಶಾಲಾ ಅಟೆಂಡರ್ ಆಗಿ ಕೆಲಸ ಮಾಡುವ ಮಹೇಶ್ವರಿ ಎಂಬುವವರು ಕಳೆದ 9 ವರ್ಷಗಳಿಂದ 'ಜೂಲಿ' ಹೆಸರಿನ ಪೋಮರೇನಿಯನ್ ನಾಯಿಯನ್ನು ಸಾಕುತ್ತಿದ್ದರು.
ಆಗಸ್ಟ್ 14ರಂದು ಜೂಲಿ ಎರಡು ಮುದ್ದಾದ ಮರಿಗಳಿಗೆ ಜನ್ಮ ನೀಡಿತ್ತು. ಆದರೆ, ಅದೇ ದಿನ ಸಂಜೆ ನಾಯಿ ಬೊಗಳುತ್ತಿದೆ ಎಂಬ ಕಾರಣಕ್ಕೆ ನೆರೆಮನೆಯ ಬಾಲರಾಜ್ ಎಂಬಾತ ಕಬ್ಬಿಣದ ರಾಡ್‌ನಿಂದ ಜೂಲಿ ತಲೆಗೆ ಬಲವಾಗಿ ಹೊಡೆದಿದ್ದಾನೆ. ಪೆಟ್ಟಿನ ತೀವ್ರತೆಗೆ ತಾಯಿ ನಾಯಿ ಸ್ಥಳದಲ್ಲೇ ರಕ್ತಸ್ರಾವವಾಗಿ ಮೃತಪಟ್ಟಿದೆ.
ಇದನ್ನು ಪ್ರಶ್ನಿಸಲು ಹೋದ ಮಾಲೀಕರಾದ ಮಹೇಶ್ವರಿ, ಅವರ ಪತಿ ಮತ್ತು ಮಗನ ಮೇಲೆಯೂ ಆರೋಪಿ ಬಾಲರಾಜ್ ಮತ್ತು ಆತನ ಕುಟುಂಬಸ್ಥರು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಇತ್ತ ತಾಯಿಯ ಎದೆಹಾಲು ಮತ್ತು ಆರೈಕೆ ಸಿಗದೇ ಜೂಲಿ ಹೆತ್ತ ಎರಡು ನವಜಾತ ಮರಿಗಳು ಸಹ ಸೋಮವಾರ ಮತ್ತು ಮಂಗಳವಾರ ಒಂದೊಂದಾಗಿ ಸಾವನ್ನಪ್ಪಿವೆ.
ಸಾಕಿದ ನಾಯಿಯನ್ನು ತನ್ನ ಸ್ವಂತ ಮಗಳಂತೆ ಪ್ರೀತಿಸುತ್ತಿದ್ದ ಮಹೇಶ್ವರಿ, ಈ ಘಟನೆಯ ಆಘಾತದಿಂದ ತೀವ್ರವಾಗಿ ನೊಂದಿದ್ದು, ಹುಳಿಮಾವು ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನೆ ನಡೆದ ಸ್ಥಳ ಕಣ್ಣೆದುರೇ ಇರುವುದರಿಂದ ಮಾನಸಿಕವಾಗಿ ಕುಗ್ಗಿರುವ ಅವರು, ಪ್ರಸ್ತುತ ಆ ಮನೆಯನ್ನು ಖಾಲಿ ಮಾಡಿ ತಮ್ಮ ಅಣ್ಣನ ಮನೆಗೆ ಆಶ್ರಯ ಪಡೆದಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಮುಖ ಆರೋಪಿ ಬಾಲರಾಜ್, ಆತನ ಪತ್ನಿ ಕಣಿಕಮ್ಮ ಹಾಗೂ ಕುಟುಂಬದ ಇತರ ಇಬ್ಬರ ವಿರುದ್ಧ FIR ದಾಖಲಾಗಿದೆ.
ಪ್ರಾಣಿ ಹಿಂಸೆ ತಡೆ ಕಾಯ್ದೆ, 1960 ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಹಲ್ಲೆ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣಗಳು ದಾಖಲಾಗಿದ್ದು, ಸದ್ಯ ಪೊಲೀಸರು ತನಿಖೆ ಮುಂದುವರಿಸಿದಿದೆ.
“ಬಲರಾಜ್ ನನ್ನ ನಾಯಿಯ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದಿದ್ದಾರೆ. ಹೊಡೆತ ಎಷ್ಟು ಬಲವಾಗಿತ್ತೆಂದರೆ ನಾಯಿ ಸ್ಥಳದಲ್ಲೇ ಕುಸಿದು ಮೃತಪಟ್ಟಿತು. ಜೂಲಿ ನಾಯಿಯನ್ನು ಅದು ಮರಿ ಆಗಿದ್ದಾಗಿನಿಂದಲೂ ನಾನು ಸಾಕಿದ್ದೆ. ಘಟನೆ ನೆನಪಾಗಿ ಕಾಡುತ್ತಿರುವುದರಿಂದ ಮನೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಸದ್ಯ ಮೈಲಸಂದ್ರದಲ್ಲಿರುವ ನನ್ನ ಸಹೋದರನ ಮನೆಯಲ್ಲಿ ಉಳಿದುಕೊಂಡಿದ್ದೇನೆ,” ಎಂದು ಮಹೇಶ್ವರಿ ಅವರು ಕಣ್ಣೀರಿಟ್ಟಿದ್ದಾರೆ.
ನಗರದ ಖಾಸಗಿ ಶಾಲೆಯೊಂದರಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿರುವ ಮಹೇಶ್ವರಿ, ಪ್ರಕರಣದಲ್ಲಿ ಆರೋಪಿಗಳನ್ನು ಇನ್ನೂ ಬಂಧಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಪೊಲೀಸ್ ಅಧಿಕಾರಿಯೊಬ್ಬರು, “ಪ್ರಕರಣದ ತನಿಖೆ ನಡೆಯುತ್ತಿದೆ. ದೂರಿನಲ್ಲಿ ಹೆಸರಿಸಲಾದವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಅವರಿಗೆ ನೋಟಿಸ್ ನೀಡಲಾಗಿದೆ,” ಎಂದು ತಿಳಿಸಿದ್ದಾರೆ.