

ಖಾಲಿ ನಿವೇಶನಗಳಲ್ಲಿ ಕಸ ಹಾಗೂ ಕಟ್ಟಡ ನಿರ್ಮಾಣದ ಅವಶೇಷಗಳನ್ನು ತೆರವುಗೊಳಿಸದ ಮಾಲೀಕರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ದಂಡ ವಿಧಿಸಲು ಆರಂಭಿಸಿದೆ. ಈ ಅಭಿಯಾನದ ಭಾಗವಾಗಿ, ಜಿಬಿಎ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಿ, ಅದಕ್ಕೆ ತಗಲುವ ವೆಚ್ಚವನ್ನು ಸಂಬಂಧಪಟ್ಟ ಆಸ್ತಿ ಮಾಲೀಕರಿಂದಲೇ ವಸೂಲಿ ಮಾಡಲಿದೆ.
ಶಾಂತಿನಗರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಇಂದು ಈ ಜಾರಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಶಾಂತಿನಗರ ಶಾಸಕ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಅಧ್ಯಕ್ಷ ಎನ್.ಎ. ಹ್ಯಾರಿಸ್ ಅವರು ಉಪಸ್ಥಿತರಿರಲಿದ್ದಾರೆ.
20x30 ಚದರ ಅಡಿ ವಿಸ್ತೀರ್ಣದ ನಿವೇಶನಕ್ಕೆ 19,200 ರೂಪಾಯಿಗಳಿಂದ 30x40 ಚದರ ಅಡಿ ನಿವೇಶನಕ್ಕೆ 38,400 ರೂಪಾಯಿಗಳವರೆಗೆ ದಂಡ ವಿಧಿಸಲಾಗುತ್ತದೆ. ಈ ಶುಲ್ಕದಲ್ಲಿ ಖಾಲಿ ನಿವೇಶನ ಸ್ವಚ್ಛಗೊಳಿಸುವುದು ಹಾಗೂ ಕಸ ಅಥವಾ ಅವಶೇಷಗಳನ್ನು ಸಾಗಿಸುವ ವೆಚ್ಚವೂ ಸೇರಿದೆ.
2020ರ ಘನತ್ಯಾಜ್ಯ ನಿರ್ವಹಣೆ ಉಪನಿಯಮಗಳ ಬೈಲಾ 18(1)(b)ರ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಖಾಲಿ ನಿವೇಶನಗಳನ್ನು ಸ್ವಚ್ಛ ಹಾಗೂ ನೈರ್ಮಲ್ಯಯುತ ಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಅದರ ಮಾಲೀಕರ ಜವಾಬ್ದಾರಿ ಎಂದು ನಿಯಮದಲ್ಲಿ ತಿಳಿಸಲಾಗಿದೆ.
ಆಸ್ತಿ ಮಾಲೀಕರು ಸ್ವತಃ ನಿವೇಶನವನ್ನು ಸ್ವಚ್ಛಗೊಳಿಸಿದರೆ, ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಪಾಲಿಕೆಯೇ ತ್ಯಾಜ್ಯವನ್ನು ವಿಲೇವಾರಿ ಮಾಡಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಈ ಹಿಂದೆ ತಿಳಿಸಿದ್ದರು. ಖಾಲಿ ನಿವೇಶನಗಳಿಗೂ ಈಗಾಗಲೇ ಘನತ್ಯಾಜ್ಯ ನಿರ್ವಹಣಾ ಬಳಕೆದಾರ ಶುಲ್ಕ ವಿಧಿಸಲಾಗುತ್ತಿದೆ ಎಂದು ಅವರು ಹೇಳಿದ್ದರು.
ಆಗಸ್ಟ್ 15ರೊಳಗೆ ತಮ್ಮ ಖಾಲಿ ನಿವೇಶನಗಳಲ್ಲಿರುವ ಎಲ್ಲಾ ಕಸ, ತ್ಯಾಜ್ಯ ಹಾಗೂ ಅವಶೇಷಗಳನ್ನು ತೆರವುಗೊಳಿಸುವಂತೆ ಜಿಬಿಎ ಮಾಲೀಕರಿಗೆ ಸೂಚಿಸಿತ್ತು. ಸೂಚನೆಯನ್ನು ಪಾಲಿಸದಿದ್ದರೆ, ಪ್ರಾಧಿಕಾರವೇ ಸ್ವಚ್ಛತಾ ಕಾರ್ಯ ಕೈಗೊಂಡು ಅದಕ್ಕೆ ತಗಲುವ ವೆಚ್ಚವನ್ನು ಆಸ್ತಿ ತೆರಿಗೆ ಮೂಲಕ ಮಾಲೀಕರಿಂದ ವಸೂಲಿ ಮಾಡಲಿದೆ ಎಂದು ಎಚ್ಚರಿಸಿತ್ತು.
ಇಂದು ಗುರುವಾರ ಅಂದರೆ ಆಗಸ್ಟ್ 27ರಿಂದ ಖಾಲಿ ನಿವೇಶನಗಳಲ್ಲಿ ಕಸ ಹಾಗೂ ಕಟ್ಟಡ ನಿರ್ಮಾಣದ ಅವಶೇಷಗಳನ್ನು ತೆರವುಗೊಳಿಸದ ಮಾಲೀಕರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ದಂಡ ವಿಧಿಸುತ್ತಿದೆ. ಈ ಅಭಿಯಾನದ ಭಾಗವಾಗಿ, ಜಿಬಿಎ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಿ, ಅದಕ್ಕೆ ತಗಲುವ ವೆಚ್ಚವನ್ನು ಸಂಬಂಧಪಟ್ಟ ಆಸ್ತಿ ಮಾಲೀಕರಿಂದಲೇ ವಸೂಲಿ ಮಾಡಲಿದೆ.