

ಬೆಂಗಳೂರು: ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇಳಿಸಲು ಲಂಚಕ್ಕೆ ಬೇಡಿಕೆ ಇಟ್ಟು ಸಿಕ್ಕಿಬಿದ್ದಿದ್ದ ಆದಾಯ ತೆರಿಗೆ (I-T) ಅಧಿಕಾರಿ ಹಾಗೂ ಅವರಿಗೆ ಸಾಥ್ ನೀಡಿದ್ದ ಚಾರ್ಟರ್ಡ್ ಅಕೌಂಟೆಂಟ್ (CA)ಗೆ ವಿಶೇಷ ಸಿಬಿಐ ಪ್ರಕರಣಗಳ ಪ್ರಧಾನ ವಿಶೇಷ ನ್ಯಾಯಾಲಯವು 3 ವರ್ಷಗಳ ಕಾಲ ಸಾದಾ ಜೈಲು ಶಿಕ್ಷೆ ಹಾಗೂ ಭಾರಿ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಬೆಂಗಳೂರು: 14 ವರ್ಷಗಳ ಹಿಂದೆ ದಾಖಲಾಗಿದ್ದ ಲಂಚ ಪ್ರಕರಣದಲ್ಲಿ ಆದಾಯ ತೆರಿಗೆ ಅಧಿಕಾರಿ ವಿ. ನಾಗರಾಜ್ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ನಾಗಿನಚಂದ್ ವಿ. ಕಿಂಚಾ ಅವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ನಾಗರಾಜ್ ಅವರಿಗೆ ರೂ.3 ಲಕ್ಷ ಹಾಗೂ ಕಿಂಚಾ ಅವರಿಗೆ ರೂ.2 ಲಕ್ಷ ದಂಡವನ್ನೂ ವಿಧಿಸಲಾಗಿದೆ.
ಬೆಂಗಳೂರಿನ ಆದಾಯ ತೆರಿಗೆ ಕಚೇರಿಯ ವಾರ್ಡ್ 4(3)ರಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ನಾಗರಾಜ್, ತೆರಿಗೆದಾರ ಎ.ಕೆ. ಹಲೀಂ ಅವರ ತೆರಿಗೆಗೆ ಒಳಪಡುವ ಆದಾಯವನ್ನು ರೂ.80 ಲಕ್ಷದಿಂದ ರೂ.30 ಲಕ್ಷಕ್ಕೆ ಇಳಿಸುವುದಕ್ಕಾಗಿ ರೂ.20 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಬಳಿಕ ಕಿಂಚಾ ಮೂಲಕ ಹಲೀಂ ಅವರಿಂದ ರೂ.5 ಲಕ್ಷ ಲಂಚ ಪಡೆದಿದ್ದರು. 2012ರ ಸೆಪ್ಟೆಂಬರ್ 8ರಂದು ಸಿಬಿಐ ನಡೆಸಿದ ಕಾರ್ಯಾಚರಣೆಯಲ್ಲಿ ಕಿಂಚಾ ಅವರ ಕಚೇರಿಯಲ್ಲಿ ಈ ಹಣವನ್ನು ವಶಪಡಿಸಿಕೊಳ್ಳಲಾಗಿತ್ತು.
ಶಿಕ್ಷೆಯ ಪ್ರಮಾಣ ಪ್ರಕಟಿಸುವ ಸಂದರ್ಭದಲ್ಲಿ ನ್ಯಾಯಾಧೀಶ ಮಂಜುನಾಥ್ ಸಂಗ್‌ರೇಶಿ, “ಸಾರ್ವಜನಿಕ ಕಚೇರಿಗಳಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟಲು ತ್ವರಿತ ಶಿಕ್ಷೆ ಹಾಗೂ ಕಠಿಣ ದಂಡ ವಿಧಿಸಬೇಕು ಎಂಬ ಸಮಾಜದ ನಿರೀಕ್ಷೆಯನ್ನು ನ್ಯಾಯಾಲಯ ಗಮನದಲ್ಲಿಟ್ಟುಕೊಳ್ಳಬೇಕು” ಎಂದು ಹೇಳಿದರು.
ಆರೋಪಿಗಳಿಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120-ಬಿ ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7, 8 ಮತ್ತು 13(2) ಜೊತೆಗೆ 13(1)(ಡಿ) ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ.
ತೆರಿಗೆ ವಿಚಾರದಲ್ಲಿ ತೆರಿಗೆದಾರರಿಂದ ಆರ್ಥಿಕ ಲಾಭ ಪಡೆಯುವ ಉದ್ದೇಶದಿಂದ ಇಬ್ಬರೂ ಆರೋಪಿಗಳು ಪರಸ್ಪರ ಸಾಮಾನ್ಯ ಉದ್ದೇಶದೊಂದಿಗೆ ಸಂಚು ರೂಪಿಸಿ ಕಾರ್ಯನಿರ್ವಹಿಸಿದ್ದರು ಎಂಬುದು ಸಾಬೀತಾದ ಸಂಗತಿಗಳು ಮತ್ತು ಸನ್ನಿವೇಶಗಳಿಂದ ಸ್ಪಷ್ಟವಾಗುತ್ತದೆ. ಈ ಆರೋಪಗಳು ಸಾಬೀತಾಗಿವೆ ಎಂದು ನ್ಯಾಯಾಲಯ ಹೇಳಿದೆ.
ಹಲೀಂ ಅವರಿಂದ ದೂರು ಸ್ವೀಕರಿಸಿದ ಬಳಿಕ ಸಿಬಿಐ ಅಧಿಕಾರಿಗಳು ಲಂಚದ ಬಲೆಗೆ ಕಾರ್ಯಾಚರಣೆ ರೂಪಿಸಿದ್ದರು. ಕಿಂಚಾ ತಮ್ಮ ಕಚೇರಿಯಲ್ಲಿದ್ದಾಗ ದೂರುದಾರರಿಗೆ ಹಣ ತೋರಿಸುವಂತೆ ಕೇಳಿದ್ದರು. ಅದರಂತೆ ಹಲೀಂ ಅವರು ಚೀಲದಲ್ಲಿ ತಂದಿದ್ದ ಲಂಚದ ಹಣವನ್ನು ಕಿಂಚಾ ಅವರಿಗೆ ನೀಡಿದ್ದರು. ಕಿಂಚಾ ಚೀಲ ತೆರೆದು ಹಣ ಎಣಿಸಿ ರೂ.5 ಲಕ್ಷ ಇದೆ ಎಂದು ಖಚಿತಪಡಿಸಿಕೊಂಡಿದ್ದರು.
ಬಳಿಕ ದೂರುದಾರರು ಕೊಠಡಿಯಿಂದ ಹೊರಬಂದು ಸಿಬಿಐ ಅಧಿಕಾರಿಯೊಬ್ಬರಿಗೆ ದೂರವಾಣಿ ಕರೆ ಮಾಡಿ, “ದಯವಿಟ್ಟು ನನ್ನ ರೈಲು ಟಿಕೆಟ್ ವ್ಯವಸ್ಥೆ ಮಾಡಿ” ಎಂಬ ಸಂಕೇತದ ಮಾತು ಹೇಳಿದ್ದರು.
ಕೂಡಲೇ ಸಿಬಿಐ ಅಧಿಕಾರಿಗಳು ಕಿಂಚಾ ಅವರ ಕಚೇರಿಗೆ ಪ್ರವೇಶಿಸಿ, ಅಲ್ಲಿದ್ದ ನಾಗರಾಜ್ ಅವರೊಂದಿಗೆ ಕಿಂಚಾ ಅವರನ್ನು ಬಂಧಿಸಿದ್ದರು.
ಶಿಕ್ಷೆಯ ಪ್ರಮಾಣದಲ್ಲಿ ದಯೆ ತೋರಿಸುವಂತೆ ಆರೋಪಿಗಳು ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಆದರೆ ಆರೋಪಿಗಳು ಎಸಗಿರುವ ಅಪರಾಧಗಳು ಸಮಾಜದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಯಾವುದೇ ರೀತಿಯ ಸಡಿಲಿಕೆ ತೋರಬಾರದು ಹಾಗೂ ಕಠಿಣ ನಿಲುವು ತಳೆಯಬೇಕು ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು.