

ನವದೆಹಲಿ: ಖಾಸಗಿ ಕಂಪನಿಯೊಂದರ ನವೀಕರಣ ಕಡತವನ್ನು ವಿಲೇವಾರಿ ಮಾಡುವ ಸಂಬಂಧ, ತಮ್ಮ ಪತ್ನಿಯ ಮೂಲಕ 10 ಲಕ್ಷ ರೂಪಾಯಿ ಲಂಚ ಸ್ವೀಕರಿಸಿದ ಆರೋಪದ ಮೇಲೆ, ಮಾಹಿತಿ ಮತ್ತು ಪ್ರಸಾರ ಸಚಿವಾಲಯದಲ್ಲಿ ಆಂತರಿಕ ಹಣಕಾಸು ಸಲಹೆಗಾರರಾಗಿ (IFA) ಕಾರ್ಯನಿರ್ವಹಿಸುತ್ತಿದ್ದ ಲೆಕ್ಕಪತ್ರಗಳ ಉಪ ನಿಯಂತ್ರಕರೊಬ್ಬರನ್ನು ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಭಾರತೀಯ ನಾಗರಿಕ ಲೆಕ್ಕಪತ್ರ ಸೇವೆಯ (ICAS) 2020ನೇ ಬ್ಯಾಚ್‌ನ ಅಧಿಕಾರಿಯಾಗಿರುವ ಸಂದೀಪ್, ಈ ನವೀಕರಣ ಕಡತದ ಪ್ರಕ್ರಿಯೆಗಾಗಿ ಉದ್ಯಮಿಯೊಬ್ಬರಿಂದ ₹15 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ ಎಂದು ಅವರು ಹೇಳಿದರು.
'ಖಾಸಗಿ ಕಂಪನಿಯೊಂದರ ಗುತ್ತಿಗೆ ನವೀಕರಣಕ್ಕೆ ಸಂಬಂಧಿಸಿದ ಕಡತವನ್ನು ತ್ವರಿತವಾಗಿ ವಿಲೇವಾರಿ ಮಾಡಲು, ದೂರುದಾರರಿಂದ ₹10 ಲಕ್ಷ ಲಂಚ ಪಡೆಯಲು ಆರೋಪಿ ಅಂತಿಮವಾಗಿ ಒಪ್ಪಿಕೊಂಡಿದ್ದರು' ಎಂದು ಸಿಬಿಐ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಂಗಳವಾರ ಬಲೆ ಬೀಸಿದ ತನಿಖಾ ಸಂಸ್ಥೆಯು, ತನ್ನ ಪತ್ನಿಯ ಮೂಲಕ ₹10 ಲಕ್ಷ ಲಂಚ ಪಡೆಯುತ್ತಿದ್ದಾಗ ಆರೋಪಿ ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.