ವಿದ್ಯಾರ್ಥಿಗಳ ವಿರೋಧದ ಬೆನ್ನಲ್ಲೇ NLSIU ಘಟಿಕೋತ್ಸವ ರದ್ದು; ‘ಅನಿವಾರ್ಯ ಕಾರಣ’ ಎಂದ ವಿವಿ

‘ಅನಿವಾರ್ಯ ಕಾರಣಗಳಿಂದ’ ಘಟಿಕೋತ್ಸವ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ವಿಶ್ವವಿದ್ಯಾಲಯ ಗುರುವಾರ ತಿಳಿಸಿದ್ದು, ಘಟಿಕೋತ್ಸವಕ್ಕೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ಬಾರ್ ಕೌನ್ಸಿಲ್ ಆಫ್ ಇಂಡಿಯಾ..
NLSIU Bengaluru
ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ
Updated on

ಬೆಂಗಳೂರು: ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (NLSIU) 2026ರ ಪದವೀಧರರಿಗಾಗಿ ಸೆಪ್ಟೆಂಬರ್‌ 12ರಂದು ನಿಗದಿಯಾಗಿದ್ದ ತನ್ನ 34ನೇ ವಾರ್ಷಿಕ ಘಟಿಕೋತ್ಸವವನ್ನು ರದ್ದುಗೊಳಿಸಿದೆ.

ಹೌದು.. ‘ಅನಿವಾರ್ಯ ಕಾರಣಗಳಿಂದ’ ಘಟಿಕೋತ್ಸವ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ವಿಶ್ವವಿದ್ಯಾಲಯ ಗುರುವಾರ ತಿಳಿಸಿದ್ದು, ಘಟಿಕೋತ್ಸವಕ್ಕೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಅಧ್ಯಕ್ಷ ಮನನ್‌ ಕುಮಾರ್ ಮಿಶ್ರಾ ಭಾಗವಹಿಸುವುದಕ್ಕೆ ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ ಕೆಲವೇ ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ.

2026ರ ಆಗಸ್ಟ್‌ 3ರಂದು ಅಕಾಡೆಮಿಕ್‌ ಆಡಳಿತ ವಿಭಾಗವು ಪದವೀಧರ ವಿದ್ಯಾರ್ಥಿಗಳಿಗೆ ಇ-ಮೇಲ್‌ ಕಳುಹಿಸಿ, ಸೆಪ್ಟೆಂಬರ್‌ 12, 2026ರಂದು ವಾರ್ಷಿಕ ಘಟಿಕೋತ್ಸವ ನಡೆಸುವ ಪ್ರಸ್ತಾವಿತ ದಿನಾಂಕ ಎಂದು ತಿಳಿಸಿತ್ತು. ಆದರೆ ಇದೀಗ ವಿದ್ಯಾರ್ಥಿಗಳಿಗೆ ಕಳುಹಿಸಿರುವ ಪತ್ರದಲ್ಲಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌, ‘ನಮ್ಮ ಸಾಮೂಹಿಕ ಪ್ರಯತ್ನಗಳ ಹೊರತಾಗಿಯೂ, ಅನಿವಾರ್ಯ ಕಾರಣಗಳಿಂದ 34ನೇ ವಾರ್ಷಿಕ ಘಟಿಕೋತ್ಸವವನ್ನು ನಡೆಸಲು ಸಾಧ್ಯವಾಗುತ್ತಿಲ್ಲ’ ಎಂದು ತಿಳಿಸಿದ್ದಾರೆ.

NLSIU Bengaluru
'ನಾನು ನಲ್ಸಾರ್ ಆಹ್ವಾನವನ್ನೇ ಸ್ವೀಕರಿಸಿಲ್ಲ; ಅಲ್ಲಿಗೆ ಹೋಗುವ ಪ್ರಶ್ನೆಯೇ ಇಲ್ಲ': CJI ಸೂರ್ಯಕಾಂತ್ ಸ್ಪಷ್ಟನೆ

ವಿದ್ಯಾರ್ಥಿಗಳಿಗೆ ಪದವಿ ನೀಡಲಾಗುವುದು

ಘಟಿಕೋತ್ಸವ ರದ್ದಾದರೂ 2026ರ ಎಲ್ಲ ಪದವೀಧರರಿಗೆ ಅಗತ್ಯ ಅನುಮೋದನೆಗಳ ಬಳಿಕ ‘ಇನ್ ಅಬ್ಸೆಂಟಿಯಾ’ (ವಿದ್ಯಾರ್ಥಿಗಳ ಗೈರುಹಾಜರಿಯಲ್ಲಿ) ಪದವಿ ಪ್ರದಾನ ಮಾಡಲಾಗುವುದು ಎಂದು NLSIU ತಿಳಿಸಿದೆ.

ವಿದ್ಯಾರ್ಥಿಗಳು ತಮ್ಮ ಪದವಿ ಪ್ರಮಾಣಪತ್ರವನ್ನು ಕೊರಿಯರ್ ಮೂಲಕ ಪಡೆಯಬಹುದು ಅಥವಾ ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ತೆರಳಿ ನೇರವಾಗಿ ಪಡೆದುಕೊಳ್ಳಬಹುದು. ಇದಕ್ಕಾಗಿ ವಿದ್ಯಾರ್ಥಿಗಳ ಆಯ್ಕೆಯನ್ನು ದಾಖಲಿಸಿಕೊಳ್ಳಲು ಹೊಸ ಫಾರ್ಮ್‌ ಹಾಗೂ ಮುಂದಿನ ಪ್ರಕ್ರಿಯೆಯ ವಿವರಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳುವುದಾಗಿ ವಿಶ್ವವಿದ್ಯಾಲಯ ತಿಳಿಸಿದೆ.

BCI ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ

ಇತ್ತೀಚೆಗೆ NLSIU ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳು BCI (ಬಾರ್ ಕೌನ್ಸಿಲ್ ಆಫ್ ಇಂಡಿಯಾ)ಯ ಕ್ರಮವೊಂದನ್ನು ವಿರೋಧಿಸಿ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದರು.

ಹೈದರಾಬಾದ್‌ನ NALSAR ಯೂನಿವರ್ಸಿಟಿ ಆಫ್ ಲಾ ವಿದ್ಯಾರ್ಥಿಗಳ ದಾಖಲಾತಿ ತಡೆಯಲು BCI ನೀಡಿದ್ದ, ಬಳಿಕ ಹಿಂಪಡೆಯಲಾದ ಆದೇಶವನ್ನು ಅವರು ಖಂಡಿಸಿದ್ದರು. ಅಧಿಕಾರದ ವಿರುದ್ಧ ಸತ್ಯವನ್ನು ಹೇಳುವ ಧೈರ್ಯ ತೋರಿದ NALSAR ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದರು.

BCI ಬಳಿಕ NALSAR ವಿರುದ್ಧದ ಎಲ್ಲ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಿದೆ ಎಂದು ಹೇಳಿದ್ದ ವಿದ್ಯಾರ್ಥಿಗಳು, ಸಾರ್ವಜನಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿ ವಿರುದ್ಧ ಇಂತಹ ಸಾಂವಿಧಾನಿಕ ಹಾಗೂ ಕಾನೂನುಬಾಹಿರ ಪ್ರಕ್ರಿಯೆ ಆರಂಭಿಸಿರುವುದೇ ಗಂಭೀರ ವಿಚಾರ ಎಂದು ಆಕ್ಷೇಪಿಸಿದ್ದರು. ಈ ಹೇಳಿಕೆಗೆ 2026ರ ಪದವೀಧರ ಬ್ಯಾಚ್‌ನ 165 ವಿದ್ಯಾರ್ಥಿಗಳು, 409 ಹಾಲಿ ವಿದ್ಯಾರ್ಥಿಗಳು ಮತ್ತು 128 ಹಳೆ ವಿದ್ಯಾರ್ಥಿಗಳು ಸಹಿ ಹಾಕಿದ್ದರು.

ಇದೀಗ ಘಟಿಕೋತ್ಸವವನ್ನೇ ದಿಢೀರ್ ರದ್ದುಪಡಿಸಿರುವುದು ಕಾನೂನು ಶಿಕ್ಷಣ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಆದಾಗ್ಯೂ, ಘಟಿಕೋತ್ಸವ ರದ್ದತಿಗೆ ವಿದ್ಯಾರ್ಥಿಗಳ ವಿರೋಧವೇ ನೇರ ಕಾರಣವೇ ಅಥವಾ ಬೇರೆ ಯಾವುದೇ ಆಡಳಿತಾತ್ಮಕ ಕಾರಣಗಳಿವೆಯೇ ಎಂಬುದನ್ನು NLSIU ಸ್ಪಷ್ಟಪಡಿಸಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com