

ಬೆಂಗಳೂರು: ಉದ್ಯಾನವನಗಳ ಜಾಗವನ್ನು ಸೀಮಿತವಾಗಿ ಬಳಸಲು ಅವಕಾಶ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ವಿಧಾನಮಂಡಲದಲ್ಲಿ ಮಸೂದೆ ಅಂಗೀಕರಿಸಿರುವುದು ಅದಾನಿ ಸಮೂಹಕ್ಕೆ ಅನುಕೂಲ ಮಾಡಿಕೊಡಲು ಎಂಬ ಪ್ರತಿಪಕ್ಷಗಳ ಆರೋಪವನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬುಧವಾರ ತಳ್ಳಿಹಾಕಿದ್ದಾರೆ.
ಇತ್ತೀಚೆಗೆ ನಡೆದ ಮುಂಗಾರು ಅಧಿವೇಶನದಲ್ಲಿ ಕರ್ನಾಟಕ ಸರ್ಕಾರದ ಉದ್ಯಾನವನಗಳ (ಸಂರಕ್ಷಣೆ) (ತಿದ್ದುಪಡಿ) ಮಸೂದೆ, 2026 ಅಂಗೀಕಾರಗೊಂಡಿದೆ.
ಇದರ ಬೆನ್ನಲ್ಲೇ ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿಗಳು, ಈ ಕಾಯ್ದೆಯಲ್ಲಿನ ಅವಕಾಶವು ಕಾನೂನು ಚೌಕಟ್ಟಿನೊಳಗೆ ಅಗತ್ಯ ಸಾರ್ವಜನಿಕ ಕಾಮಗಾರಿಗಳಿಗೆ, ವಿಶೇಷವಾಗಿ ರಸ್ತೆ ವಿಸ್ತರಣೆಗೆ ಅನುಕೂಲ ಕಲ್ಪಿಸುವ ಉದ್ದೇಶ ಹೊಂದಿದೆ. ಇಂತಹ ಕಾಮಗಾರಿಗಳಿಗೆ ಖಾಸಗಿ ಜಮೀನು ಸ್ವಾಧೀನಪಡಿಸಿಕೊಂಡರೆ ಭೂಮಿಯ ಮೌಲ್ಯದ ದುಪ್ಪಟ್ಟು ಪರಿಹಾರ ನೀಡಬೇಕಾಗಬಹುದು ಅಥವಾ ಟಿಡಿಆರ್ ಮೂಲಕ ಪರಿಹಾರ ಕಲ್ಪಿಸಬೇಕಾಗುತ್ತದೆ.
ಉದ್ಯಾನವನದ ಜಾಗವನ್ನು ಯಾರಿಗೂ ಖಾಸಗಿ ಉದ್ದೇಶಕ್ಕಾಗಿ ಬಳಸಲು ನೀಡುವ ಪ್ರಶ್ನೆಯೇ ಇಲ್ಲ. ಉದ್ಯಾನವನಗಳಲ್ಲಿ ಕಟ್ಟಡ ನಿರ್ಮಾಣಕ್ಕೂ ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರಸ್ತೆ ವಿಸ್ತರಣೆ ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾಗುವ ಅಭಿವೃದ್ಧಿ ಕಾಮಗಾರಿಗಳಿಗಾಗಿ ಕಾನೂನುಬದ್ಧವಾಗಿ ಜಾಗ ಬಳಸಿಕೊಳ್ಳುವ ಚಿಂತನೆ ಇದೆ. “ಖಾಸಗಿ ವ್ಯಕ್ತಿಗಳಿಗೆ ನಾವು ಅವಕಾಶ ನೀಡುವುದಿಲ್ಲ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಬಿಜೆಪಿಯವರು ತಮ್ಮ ಪಕ್ಷದವರು ಮತ್ತು ಕಾರ್ಯಕರ್ತರಿಗೆ ಜಾಗ ನೀಡಿರಲಿಲ್ಲವೇ? ಸದಾಶಿವನಗರದಲ್ಲಿರುವ ನಮ್ಮ ನಿವಾಸದ ಸಮೀಪದ ಉದ್ಯಾನವನವನ್ನೇ ನೋಡಿ” ಎಂದು ತಿರುಗೇಟು ನೀಡಿದರು.
ಬೆಂಗಳೂರಿನ ಲಾಲ್‌ಬಾಗ್ ಸಸ್ಯೋದ್ಯಾನದ ಕುರಿತು ಕೇಳಿಬಂದಿರುವ ವರದಿಗಳಿಗೆ ಪ್ರತಿಕ್ರಿಯಿಸಿ, ಐತಿಹಾಸಿಕ ಉದ್ಯಾನವನಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ಹೇಳಿದರು. ಸಾರ್ವಜನಿಕ ಕಾಮಗಾರಿ ಅಥವಾ ಯಂತ್ರೋಪಕರಣಗಳ ಬಳಕೆಗೆ ಒಂದು ಬದಿಯಲ್ಲಿರುವ ಅತ್ಯಲ್ಪ ಪ್ರಮಾಣದ ಜಾಗವನ್ನು ತಾತ್ಕಾಲಿಕವಾಗಿ ಬಳಸುವ ಸಾಧ್ಯತೆ ಮಾತ್ರ ಇದೆ ಎಂದು ತಿಳಿಸಿದರು.
ತುರಹಳ್ಳಿ ಅರಣ್ಯ, ತೊಟ್ಟಿಕಲ್ಲು ಜಲಪಾತ, ಬಿಎಂ ಕಾವಲ್ ಅರಣ್ಯ, ಬಸವನ್ತ, ಮಂಡೂರು ಮತ್ತು ಜ್ಯೋತಿಪುರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ 5,000ಕ್ಕೂ ಹೆಚ್ಚು ಎಕರೆ ಜಾಗವನ್ನು ಹೊಸ ಹಸಿರು ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಗುರುತಿಸಿದೆ.
ಮುಂದಿನ 25 ವರ್ಷಗಳ ಕಾಲ ಬೆಂಗಳೂರಿನ ನೀರಿನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಪ್ರಮುಖ ಜಲಮೂಲಗಳನ್ನು ಸಂರಕ್ಷಿಸುವ ದೀರ್ಘಕಾಲೀನ ಯೋಜನೆಯನ್ನೂ ಸರ್ಕಾರ ರೂಪಿಸುತ್ತಿದೆ. ಹೆಸರಘಟ್ಟ, ಬೆಟ್ಟದಕೋಟೆ, ಹೊಸಕೋಟೆ, ಯಲಹಂಕದ ಯಲಮ್ಮ ಶೆಟ್ಟಿ ಕೆರೆ, ಬನ್ನೇರುಘಟ್ಟ, ಬಾಗಲೂರು ಮತ್ತು ಬೈರಮಂಗಲ ಕೆರೆಗಳನ್ನು ಸಂರಕ್ಷಿಸುವ ಯೋಜನೆ ಇದರಲ್ಲಿ ಸೇರಿದೆ.
ಜಲಮೂಲಗಳ ಒತ್ತುವರಿ ತಡೆಗಟ್ಟುವುದು, ಕೊಳಚೆ ನೀರು ಸೇರುವುದನ್ನು ನಿಯಂತ್ರಿಸುವುದು, ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸುವುದು ಹಾಗೂ ಅಂತರ್ಜಲ ಮರುಪೂರಣಕ್ಕೆ ಉತ್ತೇಜನ ನೀಡುವ ಕುರಿತು ಸಮನ್ವಯ ವರದಿ ಸಿದ್ಧಪಡಿಸುವಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ), ಕೆರೆ ಅಭಿವೃದ್ಧಿ ಪ್ರಾಧಿಕಾರ, ಸಣ್ಣ ನೀರಾವರಿ ಇಲಾಖೆ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ ಎಂದು ಹೇಳಿದರು.
ಇದೇ ವೇಳೆ, ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ವಿರುದ್ಧ ಮಾಡಿರುವ ಆರೋಪಗಳಿಗೂ ಶಿವಕುಮಾರ್ ಪ್ರತಿಕ್ರಿಯಿಸಿದರು.
ತಾವು ನೈಸ್ ಯೋಜನೆಯನ್ನು ವೈಯಕ್ತಿಕವಾಗಿ ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂಬ ಕುಮಾರಸ್ವಾಮಿ ಆರೋಪವನ್ನು ಅವರು ತಳ್ಳಿಹಾಕಿದರು.
ಅವರು ಪದೇಪದೇ ಮಾಡುತ್ತಿರುವ ಆರೋಪಗಳಿಗೆ ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ. ಬಹುಶಃ ಅವರೇ ಅದನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿರಬಹುದು. ಅದರಲ್ಲಿ ಅವರ ಪಾತ್ರ ಇರಬಹುದೇನೋ, ನನಗೆ ಗೊತ್ತಿಲ್ಲ. ಅವರ ಬಳಿ ಯಾವ ಮಾಹಿತಿ ಇದೆ ಎಂಬುದೂ ನನಗೆ ತಿಳಿದಿಲ್ಲ. ಬಹುಶಃ ಅವರು ಅದನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿರಬಹುದು. ಅವರು ಅದನ್ನು ಆನಂದಿಸಲಿ” ಎಂದು ವ್ಯಂಗ್ಯವಾಡಿದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ಒಕ್ಕಲಿಗ ಧಾರ್ಮಿಕ ಮುಖಂಡರೊಬ್ಬರ ಫೋನ್‌ಗಳನ್ನು ಅಕ್ರಮವಾಗಿ ಕದ್ದಾಲಿಕೆ ಮಾಡಲಾಗಿದೆ ಎಂಬ ಆರೋಪದ ಕುರಿತು ತಮ್ಮ ಬಳಿ ಹೆಚ್ಚಿನ ಮಾಹಿತಿ ಇಲ್ಲ ಎಂದು ಸಿಎಂ ಹೇಳಿದರು. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳುವುದಾಗಿ ತಿಳಿಸಿದರು. “ನಾನು ತಿಹಾರ್ ಜೈಲಿನಲ್ಲಿದ್ದಾಗ ಪತ್ರಿಕೆಯಲ್ಲಿ ಈ ಬಗ್ಗೆ ಓದಿದ್ದೆ” ಎಂದು ಹೇಳಿದರು.