

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಹಾಡಹಗಲೇ ನಡುರಸ್ತೆಯಲ್ಲಿ ದುಷ್ಕರ್ಮಿಗಳು ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಶುಕ್ರವಾರ ನಡೆದಿದೆ.
ಹುಬ್ಬಳಿಯ ವಿದ್ಯಾನಗರದ ಬನಶಂಕರಿ ಬಡಾವಣೆಯಲ್ಲಿ ಈ ಭೀಕರ ಕೊಲೆ ನಡೆದಿದ್ದು, ಸಿದ್ದೇಶ್ವರ ಪಾರ್ಕ್ ಬಳಿ ಸ್ಕೂಟಿಯಲ್ಲಿ ತೆರಳುತ್ತಿದ್ದ ವ್ಯಕ್ತಿಯ ಮೇಲೆ ಮೂವರು ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. ಬಳಿಕ ಜನರ ಎದುರೇ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಹತ್ಯೆಯಾದ ವ್ಯಕ್ತಿಯನ್ನು ದಾದಾಪೀರ್ ಎಂದು ಗುರುತಿಸಲಾಗಿದ್ದು, ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಳೆಯ ದ್ವೇಷಕ್ಕೆ ಈ ಭಯಾನಕ ಕೃತ್ಯ ನಡೆದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಹತ್ಯೆ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಕೊಲೆಗೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಯಾರಾದರೂ ಪ್ರಕರಣ ದಾಖಲಿಸಿದರೆ ದಾಖಲು ಮಾಡಿಕೊಳ್ಳಲಾಗುವುದು. ಇಲ್ಲದೇ ಹೋದಲ್ಲಿ ಸುಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ಶಶಿಕುಮಾರ್ ಅವರು ತಿಳಿಸಿದ್ದಾರೆ.