ನೇಪಾಳ ಪ್ರವಾಹ: ಸಂಕಷ್ಟಕ್ಕೆ ಸಿಲುಕಿದ್ದ ಕನ್ನಡಿಗರು ಸೇಫ್‌; ‘ಧೈರ್ಯವಾಗಿರಿ, ಸರ್ಕಾರ ನಿಮ್ಮೊಂದಿಗಿದೆ’ ಎಂದ ಸಿಎಂ

ಸಂಕಷ್ಟಕ್ಕೊಳಗಾಗಿರುವ ಕನ್ನಡಿಗರ ಸುರಕ್ಷತೆ ಹಾಗೂ ಯೋಗಕ್ಷೇಮದ ಕುರಿತು ವಿದೇಶಾಂಗ ಸಚಿವಾಲಯ ಮತ್ತು ನವದೆಹಲಿಯ ಕರ್ನಾಟಕ ಭವನದ ನಿವಾಸಿ ಆಯುಕ್ತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
CM D.K. Shivakumar spoke via video call from Delhi to Mallinath, a Kannadiga survivor of the Nepal tragedy.
ಡಿಕೆ.ಶಿವಕುಮಾರ್
Updated on

ಬೆಂಗಳೂರು: ನೇಪಾಳ-ಟಿಬೆಟ್‌ ಗಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಭವಿಸಿರುವ ಹಠಾತ್ ಪ್ರವಾಹ ಮತ್ತು ಇತರ ಅವಘಡಗಳಿಂದ ಕರ್ನಾಟಕದ ಮೂವರು ಸೇರಿದಂತೆ ಒಟ್ಟು 23 ಮಂದಿ ಸಿಲುಕಿಕೊಂಡಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರದೇಶದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಿಂದ ಸಾವು-ನೋವು ಸಂಭವಿಸಿದ್ದು, ಪ್ರಮುಖ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿಯಾಗಿದೆ.

ಹಲವು ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಹಾಗೂ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಪ್ರವಾಹ, ಭೂಕುಸಿತ, ರಸ್ತೆ ಬಂದ್ ಸೇರಿದಂತೆ ವಿವಿಧ ಕಾರಣಗಳಿಂದ ನೇಪಾಳದಲ್ಲಿ ಸಿಲುಕಿರುವ ಕರ್ನಾಟಕದ ನಿವಾಸಿಗಳನ್ನು ಪತ್ತೆಹಚ್ಚಿ ನೆರವು ನೀಡಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ತಿಳಿಸಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಜಿ. ಪರಮೇಶ್ವರ್ ಅವರು ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ಸಂಕಷ್ಟಕ್ಕೊಳಗಾಗಿರುವ ಕನ್ನಡಿಗರ ಸುರಕ್ಷತೆ ಹಾಗೂ ಯೋಗಕ್ಷೇಮದ ಕುರಿತು ವಿದೇಶಾಂಗ ಸಚಿವಾಲಯ ಮತ್ತು ನವದೆಹಲಿಯ ಕರ್ನಾಟಕ ಭವನದ ನಿವಾಸಿ ಆಯುಕ್ತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರವಾಹ ಪ್ರದೇಶದಲ್ಲಿ ಸಿಲುಕಿರುವವರ ಪ್ರಸ್ತುತ ಸ್ಥಳ, ಸುರಕ್ಷತಾ ಸ್ಥಿತಿ, ಸಂಪರ್ಕ ವಿವರಗಳು, ಪ್ರಯಾಣ ಅಥವಾ ಗುಂಪಿನ ಮಾಹಿತಿ ಹಾಗೂ ಪ್ರವಾಸ ಆಯೋಜಕರ ವಿವರಗಳನ್ನು ಸಂಗ್ರಹಿಸಲು ರಾಜ್ಯ ಸರ್ಕಾರ ವಿಶೇಷ ನಮೂನೆಯನ್ನು ಸಿದ್ಧಪಡಿಸಿದೆ.

CM D.K. Shivakumar spoke via video call from Delhi to Mallinath, a Kannadiga survivor of the Nepal tragedy.
ಪ್ರವಾಹದ ಅಬ್ಬರಕ್ಕೆ ನೇಪಾಳ ತತ್ತರ; ಸಂಪರ್ಕಕ್ಕೆ ಸಿಗದೆ 290 ಭಾರತೀಯರು, ರಕ್ಷಣಾ ಕಾರ್ಯಾಚರಣೆ ಚುರುಕು..!

ಈ ಮಾಹಿತಿಯ ಆಧಾರದ ಮೇಲೆ ವಿದೇಶಾಂಗ ಸಚಿವಾಲಯ, ನೇಪಾಳದಲ್ಲಿರುವ ಭಾರತೀಯ ರಾಯಭಾರ ಕಚೇರಿ, ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪ್ರವಾಸ ಆಯೋಜಕರೊಂದಿಗೆ ಸಮನ್ವಯ ಸಾಧಿಸಿ ರಕ್ಷಣೆ, ಸ್ಥಳಾಂತರ ಹಾಗೂ ಅಗತ್ಯ ನೆರವು ಒದಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವು ಪರಿಸ್ಥಿತಿಯನ್ನು 24 ಗಂಟೆಯೂ ಮೇಲ್ವಿಚಾರಣೆ ಮಾಡುತ್ತಿದೆ. ಕರ್ನಾಟಕ ಭವನದ ನಿವಾಸಿ ಆಯುಕ್ತರು ರಚಿಸಿರುವ ವಿಶೇಷ ತಂಡಗಳು ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿವೆ. ಎಸ್‌ಇಒಸಿ ಹಾಗೂ ಕರ್ನಾಟಕ ಭವನವು ವಿದೇಶಾಂಗ ಸಚಿವಾಲಯದ ತ್ವರಿತ ಪ್ರತಿಕ್ರಿಯಾ ತಂಡಗಳು, ಕಠ್ಮಂಡು ಮತ್ತು ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಹಾಗೂ ಕೇಂದ್ರ ಗೃಹ ಸಚಿವಾಲಯದ ಸಮಗ್ರ ನಿಯಂತ್ರಣ ಕೊಠಡಿಯೊಂದಿಗೆ ಸಂಪರ್ಕದಲ್ಲಿವೆ ಎಂದು ಮಾಹಿತಿ ನೀಡಿದ್ದಾರೆ.

ಮಲ್ಲಿನಾಥ್‌ಗೆ ವಿಡಿಯೋ ಕರೆ ಮಾಡಿದ ಸಿಎಂ

ಈ ನಡುವೆ ನೇಪಾಳದಲ್ಲಿ ಪ್ರವಾಹ ಹಾಗೂ ಇತರ ಅವಘಡಗಳಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದರೂ ಸುರಕ್ಷಿತವಾಗಿರುವ ಕರ್ನಾಟಕ ಮೂಲದ ಮಲ್ಲಿನಾಥ್‌ ಅವರೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುರುವಾರ ವಿಡಿಯೋ ಕಾಲ್ ಮೂಲಕ ಮಾತನಾಡಿದರು.

ಪ್ರಸ್ತುತ ನವದೆಹಲಿಯಲ್ಲಿರುವ ಶಿವಕುಮಾರ್, ದುರಂತದಿಂದ ಬಾಧಿತವಾಗಿರುವ ಕನ್ನಡಿಗರಿಗೆ ನೆರವು ನೀಡಲು ರಾಜ್ಯ ಸರ್ಕಾರ ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದೆ ಎಂದು ಭರವಸೆ ನೀಡಿದರು.

ಸುರಕ್ಷಿತ ಸ್ಥಳದಲ್ಲಿರುವವರು ಆತಂಕಗೊಳ್ಳಬಾರದು ಹಾಗೂ ತಮ್ಮಷ್ಟಕ್ಕೆ ತಾವೇ ಸುರಕ್ಷಿತ ಸ್ಥಳಗಳಿಂದ ಹೊರಬರಲು ಪ್ರಯತ್ನಿಸಬಾರದು ಎಂದು ಮನವಿ ಮಾಡಿದರು.

‘ಧೈರ್ಯವಾಗಿರಿ. ನೀವು ಇರುವ ಸುರಕ್ಷಿತ ಸ್ಥಳದಿಂದ ಹೊರಬರಲು ಪ್ರಯತ್ನಿಸಬೇಡಿ. ನಿಮ್ಮ ಸರ್ಕಾರ ನಿಮ್ಮೊಂದಿಗಿದೆ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ’ ಎಂದು ಸಿಎಂ ಧೈರ್ಯ ತುಂಬಿದರು.

ನೇಪಾಳಕ್ಕೆ ತೆರಳಿರುವ ಕರ್ನಾಟಕದ ಇತರ ನಿವಾಸಿಗಳೊಂದಿಗೆ ಸಂಪರ್ಕ ಸಾಧಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ದುರಂತದ ಬಳಿಕ ಹಲವರ ಸಂಪರ್ಕ ಕಡಿತಗೊಂಡಿರುವ ಹಿನ್ನೆಲೆಯಲ್ಲಿ ಅವರ ಸುರಕ್ಷತೆ ಹಾಗೂ ಇರುವಿಕೆಯ ಬಗ್ಗೆ ಮಾಹಿತಿ ಪಡೆಯಲು ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ನೇಪಾಳದಲ್ಲಿ 12 ಕನ್ನಡಿಗರು ಸುರಕ್ಷಿತ

ಹಾವೇರಿ: ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದ ಆರು ಕುಟುಂಬಗಳ 12 ಮಂದಿ ನೇಪಾಳ ಪ್ರವಾಸಕ್ಕೆ ತೆರಳಿದ್ದು, ಅಲ್ಲಿನ ಭೀಕರ ನೈಸರ್ಗಿಕ ವಿಕೋಪದ ನಡುವೆಯೂ ಸುರಕ್ಷಿತವಾಗಿದ್ದಾರೆ.

ಇವರು ಶೀಘ್ರದಲ್ಲೇ ನೇಪಾಳದ ಸೋನೌಲಿ ಪ್ರದೇಶ ತಲುಪುವ ನಿರೀಕ್ಷೆಯಿದೆ. ಅಲ್ಲಿಂದ ಅವರನ್ನು ಕರ್ನಾಟಕಕ್ಕೆ ವಾಪಸ್ ಕರೆತರಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಪ್ರವಾಸಕ್ಕೆ ತೆರಳಿರುವ ಕನ್ನಡಿಗರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com