ಸ್ಫೋಟದಂತಹ ಶಬ್ದ, ರಭಸವಾಗಿ ನುಗ್ಗಿದ ನೀರು: ನೇಪಾಳ ಪ್ರವಾಹದಲ್ಲಿ ಕೂದಲೆಳೆ ಅಂತರದಲ್ಲಿ ಪಾರು; ಭೀಕರ ಕ್ಷಣಗಳ ಅನುಭವ ಬಿಚ್ಚಿಟ್ಟ ಕನ್ನಡಿಗ..!

ನಾವು ಬಸ್‌ನಲ್ಲಿ ಕಠ್ಮಂಡುವಿನಿಂದ ಮಾನಸ ಸರೋವರದತ್ತ ತೆರಳುತ್ತಿದ್ದೆವು. ಸುಮಾರು ಮೂರು ಗಂಟೆಗಳ ಬಳಿಕ ಬಟ್ಟರ್‌ ಎಂಬ ಸ್ಥಳದ ಬಳಿ ಇದ್ದಕ್ಕಿದ್ದಂತೆ ಪ್ರವಾಹ ಕಾಣಿಸಿಕೊಂಡಿತು. ಅಲ್ಲಿ ಸೇತುವೆಯೊಂದಿದ್ದು, ಸಮೀಪದಲ್ಲೇ ತ್ರಿಶೂಲಿ ನದಿ ಹರಿಯುತ್ತಿತ್ತು.
Mallinath (R), a resident of Kalaburagi who survived the Nepal tragedy, with a friend at Pashupatinath Temple at Kathmandu
ನೇಪಾಳ ದುರಂತದಲ್ಲಿ ಬದುಕುಳಿದ ಕಲಬುರಗಿ ನಿವಾಸಿ ಮಲ್ಲಿನಾಥ್.
Updated on

ಬೆಂಗಳೂರು: ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಕಲಬುರಗಿಯ 50 ವರ್ಷದ ಮಲ್ಲಿನಾಥ್‌ ಎಂಬುವವರು ನೇಪಾಳದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಕಲಬುರಗಿಯ 50 ವರ್ಷದ ಮಲ್ಲಿನಾಥ್‌ ಸೇರಿದಂತೆ 28 ಯಾತ್ರಿಕರು ಆತಂಕದ ಕ್ಷಣಗಳನ್ನು ಎದುರಿಸಿದ್ದಾರೆ. ಆದರೆ, ಬಸ್‌ ಚಾಲಕನ ಸಮಯಪ್ರಜ್ಞೆಯಿಂದ ವಾಹನವನ್ನು ಕ್ಷಣಾರ್ಧದಲ್ಲಿ ಎತ್ತರದ ಪ್ರದೇಶಕ್ಕೆ ಕೊಂಡೊಯ್ದ ಪರಿಣಾಮ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

ಗುರುವಾರ ಟಿಎನ್‌ಐಇ ಜೊತೆ ಮಾತನಾಡಿದ ಮಲ್ಲಿನಾಥ್‌, ಬುಧವಾರ ಬೆಳಗ್ಗೆ 6ರ ಸುಮಾರಿಗೆ ಯಾತ್ರಿಕರ ಗುಂಪಿನೊಂದಿಗೆ ಕಠ್ಮಂಡುವಿನಿಂದ ಮಾನಸ ಸರೋವರದತ್ತ ಪ್ರಯಾಣ ಆರಂಭಿಸಿದ್ದಾಗಿ ತಿಳಿಸಿದ್ದಾರೆ.

ಸುಮಾರು ಮೂರು ಗಂಟೆಗಳ ಪ್ರಯಾಣದ ಬಳಿಕ ಬಟ್ಟರ್‌ ಎಂಬ ಪ್ರದೇಶದ ಬಳಿ ಹಠಾತ್ ಪ್ರವಾಹವನ್ನು ಕಂಡಿದ್ದಾಗಿ ಹೇಳಿದ್ದಾರೆ.

ನಾವು ಬಸ್‌ನಲ್ಲಿ ಕಠ್ಮಂಡುವಿನಿಂದ ಮಾನಸ ಸರೋವರದತ್ತ ತೆರಳುತ್ತಿದ್ದೆವು. ಸುಮಾರು ಮೂರು ಗಂಟೆಗಳ ಬಳಿಕ ಬಟ್ಟರ್‌ ಎಂಬ ಸ್ಥಳದ ಬಳಿ ಇದ್ದಕ್ಕಿದ್ದಂತೆ ಪ್ರವಾಹ ಕಾಣಿಸಿಕೊಂಡಿತು. ಅಲ್ಲಿ ಸೇತುವೆಯೊಂದಿದ್ದು, ಸಮೀಪದಲ್ಲೇ ತ್ರಿಶೂಲಿ ನದಿ ಹರಿಯುತ್ತಿತ್ತು. ಏಕಾಏಕಿ ಸ್ಫೋಟದಂತಹ ದೊಡ್ಡ ಶಬ್ದ ಕೇಳಿಸಿತು. ನಂತರ ರಭಸವಾಗಿ ನೀರು ಹರಿದುಬರಲು ಆರಂಭಿಸಿತು.

Mallinath (R), a resident of Kalaburagi who survived the Nepal tragedy, with a friend at Pashupatinath Temple at Kathmandu
ನೇಪಾಳ ಪ್ರವಾಹ: ಸಂಕಷ್ಟಕ್ಕೆ ಸಿಲುಕಿದ್ದ ಕನ್ನಡಿಗರು ಸೇಫ್‌; ‘ಧೈರ್ಯವಾಗಿರಿ, ಸರ್ಕಾರ ನಿಮ್ಮೊಂದಿಗಿದೆ’ ಎಂದ ಸಿಎಂ

ಪ್ರವಾಹದ ಅಪಾಯವನ್ನು ಅರಿತ ಬಸ್ ಚಾಲಕ ಕೂಡಲೇ ವಾಹನವನ್ನು ಎತ್ತರದ ಪ್ರದೇಶಕ್ಕೆ ಚಲಾಯಿಸಿ ಎಲ್ಲ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು.

“ಬಸ್‌ನಲ್ಲಿ ನನ್ನನ್ನೂ ಸೇರಿಸಿ ಒಟ್ಟು 28 ಮಂದಿ ಇದ್ದೆವು. ಅವರಲ್ಲಿ ನಾನು ಸೇರಿದಂತೆ ಮತ್ತೊಬ್ಬರು ಕರ್ನಾಟಕದವರು. ನಾವೆಲ್ಲರೂ ಸುರಕ್ಷಿತವಾಗಿದ್ದೇವೆ” ಎಂದು ತಿಳಿಸಿದ್ದಾರೆ.

ತಮ್ಮ ಸಂಪರ್ಕದಲ್ಲಿದ್ದ ಇನ್ನೂ ಆರು ಮಂದಿ ಟಿಬೆಟ್‌ನ ಸಾಗಾ ಎಂಬ ಪಟ್ಟಣದ ಬಳಿ ಸಿಲುಕಿಕೊಂಡಿದ್ದಾರೆ. ಮಾನಸ ಸರೋವರಕ್ಕೆ ಭೂಮಾರ್ಗದ ಮೂಲಕ ತೆರಳುವ ಯಾತ್ರಿಕರಿಗೆ ಸಾಗಾ ಪ್ರಮುಖ ತಂಗುದಾಣ ಹಾಗೂ ಸಾರಿಗೆ ಕೇಂದ್ರವಾಗಿದೆ.

ಮಲ್ಲಿನಾಥ್‌ ಹಾಗೂ ಅವರ ಗುಂಪು ಸುರಕ್ಷಿತವಾಗಿ ಕಠ್ಮಂಡುವಿಗೆ ವಾಪಸ್‌ ತಲುಪಿದ್ದು, ಪ್ರವಾಸ ಆಯೋಜಕರು ಮಾಡಿರುವ ವ್ಯವಸ್ಥೆಯಂತೆ ಶುಕ್ರವಾರ ದೆಹಲಿಗೆ ತೆರಳಲಿದ್ದಾರೆ.

ಮಾನಸ ಸರೋವರ ಯಾತ್ರೆಗಾಗಿ ಮಲ್ಲಿನಾಥ್‌ ಆಗಸ್ಟ್‌ 21ರಂದು ಹೈದರಾಬಾದ್‌ನಿಂದ ತಮ್ಮ ಪ್ರಯಾಣ ಆರಂಭಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com