News Wrap 02-02-26 | ಹೀರೋಗಳಿಗೆ Condom ಸಪ್ಲೈ: ಚಂದ್ರಚೂಡ್ ವಿರುದ್ಧ ನಿರ್ಮಾಪಕ ಸಂಘ ಗರಂ; BWSSB ಪೈಪ್‌ಲೈನ್‌ ಚೇಂಬರ್‌ನಲ್ಲಿ ಬಾಲಕನ ಶವ ಪತ್ತೆ; 12 ವರ್ಷಗಳ ಬಳಿಕ CCL ಗೆದ್ದ ಕಿಚ್ಚನ ಪಡೆ!

News Wrap 02-02-26 | ಹೀರೋಗಳಿಗೆ Condom ಸಪ್ಲೈ: ಚಂದ್ರಚೂಡ್ ವಿರುದ್ಧ ನಿರ್ಮಾಪಕ ಸಂಘ ಗರಂ; BWSSB ಪೈಪ್‌ಲೈನ್‌ ಚೇಂಬರ್‌ನಲ್ಲಿ ಬಾಲಕನ ಶವ ಪತ್ತೆ; 12 ವರ್ಷಗಳ ಬಳಿಕ CCL ಗೆದ್ದ ಕಿಚ್ಚನ ಪಡೆ!

1. ಹೀರೋಗಳಿಗೆ Condom ಸಪ್ಲೈ: ಚಂದ್ರಚೂಡ್ ವಿರುದ್ಧ ನಿರ್ಮಾಪಕ ಸಂಘ ಗರಂ

ಕೆಲ ನಿರ್ಮಾಪಕರು ಹೀರೋಗಳಿಗೆ ಕಾಂಡೋಮ್ ಸಪ್ಲೈ ಮಾಡುತ್ತಾರೆ ಎಂಬ ನಟ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ನೀಡಿದ ಹೇಳಿಯೊಂದು ಸ್ಯಾಂಡಲ್ ವುಡ್ ನಲ್ಲಿ ಕೋಲಾಹಲ ಸೃಷ್ಟಿಸಿದೆ. ಕಾಂಡೋಮ್ ಸಪ್ಲೈ ಹೇಳಿಕೆ ವೈರಲ್ ಆಗುತ್ತಿದ್ದಂತೆ ಅಸಮಾಧಾನಗೊಂಡಿದ್ದ ಕನ್ನಡ ನಿರ್ಮಾಪಕರ ಸಂಘ ಇಂದು ತುರ್ತು ಸಭೆ ಕರೆದಿತ್ತು. ಈ ಸಭೆಯಲ್ಲಿ ಚಕ್ರವರ್ತಿ ಚಂದ್ರಚೂಡ್ ವಿರುದ್ದ ದೂರು ದಾಖಲಿಸಲು ನಿರ್ಮಾಪಕರ ಸಂಘದ ಪದಾಧಿಕಾರಿಗಳು, ಸದಸ್ಯರು ಒಮ್ಮತದ ನಿರ್ಧಾರ ತೆಗೆದುಕೊಂಡರು. ಅದರಂತೆ ಕನ್ನಡ ನಿರ್ಮಾಪಕರ ಸಂಘ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ತಮ್ಮ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಚಕ್ರವರ್ತಿ ಚಂದ್ರಚೂಡ್, ನಾನು ಮಾತನಾಡಿರುವುದು ತಮಿಳು ಚಿತ್ರರಂಗದ ಬಗ್ಗೆ ಅಲ್ಲಿಯ ವಾತಾವರಣದ ಬಗ್ಗೆ ಅಲ್ಲಿನ ರಾಜಕೀಯ ವ್ಯವಸ್ಥೆಯ ಬಗ್ಗೆ ಹೊರತು ಕನ್ನಡ ನಿರ್ಮಾಪಕರ ಬಗ್ಗೆ ಅಲ್ಲ ಎಂದರು. ಅಲ್ಲದೆ "ಕಮೋಡ್ ಟು ಕಾಂಡೋಮ್ "ಅನ್ನುವ ಉಪಮೆಯನ್ನು ಬಳಸಿದ್ದೇನೆ ಅಷ್ಟೇ ವಿನಃ ಯಾವುದೇ ನಿರ್ಮಾಪಕರ ವಿರುದ್ಧ ಅಲ್ಲ. ಜೊತೆಗೆ ಒಬ್ಬ ಕನ್ನಡ ನಿರ್ಮಾಪಕ ತಮಿಳು ರಾಜಕೀಯಕ್ಕೆ ಹೇಗೆ ಸಿಲುಕಿದ್ದಾರೆ ಎಂಬ ಹಿನ್ನೆಲೆಯಲ್ಲೂ ಸಹ ದನಿ ಎತ್ತಿದ್ದೇನೆ ಎಂದರು.

2. ದ್ವೇಷ ಭಾಷಣ ಮಸೂದೆ ಜಾರಿಯಾಗದಂತೆ ತಡೆಯುವ ಪ್ರಯತ್ನ: ಪರಮೇಶ್ವರ್

ದ್ವೇಷ ಭಾಷಣ ಮಸೂದೆಯಲ್ಲಿನ 28 ಅಂಶಗಳನ್ನು ರಾಜ್ಯಪಾಲರು ಪ್ರಶ್ನಿಸಿದ್ದು ಮಸೂದೆಯನ್ನು ರಾಷ್ಟ್ರಪತಿಗಳಿಗೆ ಕಳಿಸಿದ್ದಾರೆ. ರಾಷ್ಟ್ರಪತಿಗಳು ಪರಿಶೀಲಿಸಿ ವಾಪಸ್ ಕೊಟ್ಟರೆ, ಬದಲಾವಣೆ ಮಾಡಿ ಕಳಿಸಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಹೇಳಿದರು. ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದು ಏನು ಬೇಕಾದರೂ ಮಾತನಾಡಿದರೆ, ಅದರ ಪರಿಣಾಮ‌ ಸಮಾಜಕ್ಕೆ ಆಗುತ್ತದೆ. ಸಮುದಾಯಗಳನ್ನು ದೂಷಣೆ ಮಾಡುವುದು, ವೈಯಕ್ತಿಕವಾಗಿ ಮಾತನಾಡುವುದು. ಆ ಮಾತುಗಳು ಸಮಾಜದ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ದ್ವೇಷಭಾಷಣ ಮಸೂದೆ ತಂದಿದ್ದೇವೆ ಎಂದರು. ಆದರೆ, ದ್ವೇಷ ಭಾಷಣ ಮಸೂದೆ 2026' ನೆನೆಗುದಿಗೆ ಬೀಳಬೇಕು. ಇದು ಜಾರಿಯಾಗಬಾರದು ಎಂಬ ಉದ್ದೇಶದಿಂದಲೇ ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಕಳಿಸಿದ್ದಾರೆ ಎಂದು ಜಿ ಪರಮೇಶ್ವರ್ ಅಭಿಪ್ರಾಯ ವ್ಯಕ್ತಪಡಿಸಿದರು.

3. BWSSB ಚೇಂಬರ್‌ನಲ್ಲಿ ಬಾಲಕನ ಶವ ಪತ್ತೆ

ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ಬಾಲಕ ಬೆಂಗಳೂರು ದಕ್ಷಿಣ ತಾಲೂಕಿನ ತಾತಗುಣಿ ಜಲಮಂಡಳಿ ಪೈಪ್‌ಲೈನ್‌ನ ಚೇಂಬರ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಚಾಮರಾಜನಗರ ಜಿಲ್ಲೆಯ ರಜನಿಕಾಂತ್ ಎಂಬುವವರ ಪುತ್ರ ಪ್ರೀತಮ್ (14) ಮೃತ ಬಾಲಕ. ಈ ದುರ್ಘಟನೆಗೆ BWSSB ನಿರ್ಲಕ್ಷ್ಯವೇ ಕಾರಣ. ಪೈಪ್‌ಲೈನ್‌ ಅಳವಡಿಕೆಗಾಗಿ ತೆಗೆಯಲಾಗಿದ್ದ ಸಂಪ್‌ ಅನ್ನು ಮುಚ್ಚಿರಲಿಲ್ಲ. ಬಾಲಕ ಓಡಾಡುವ ವೇಳೆ ಆಕಸ್ಮಿಕವಾಗಿ ಸಂಪ್‌ಗೆ ಬಿದ್ದಿರುವ ಸಾಧ್ಯತೆಯಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳಕ್ಕೆ ಕಗ್ಗಲೀಪುರ ಪೊಲೀಸರು ತೆರಳಿ ಮೃತದೇಹವನ್ನು ಸಂಪ್‌ನಿಂದ ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರೀತಮ್ ಮೂರು ದಿನಗಳ ಹಿಂದೆ ಮನೆಯಿಂದ ಹೊರಗೆ ಹೋದವನು ವಾಪಸ್‌ ಬಂದಿರಲಿಲ್ಲ. ಹೀಗಾಗಿ ಪೋಷಕರು ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

4. ರಂಜಾನ್: ಉರ್ದು ಶಾಲೆಗಳ ಸಮಯ ಬದಲಾವಣೆ

ರಂಜಾನ್ ಹಿನ್ನೆಲೆಯಲ್ಲಿ ಉರ್ದು ಮಾಧ್ಯಮ ಕಿರಿಯ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಶಾಲಾ ಸಮಯವನ್ನು ರಾಜ್ಯ ಸರ್ಕಾರ ಪರಿಷ್ಕರಿಸಿದ್ದು, ಬೆಳಿಗ್ಗೆ 8 ರಿಂದ ಮಧ್ಯಾಹ್ನ 12.45ರವರೆಗೆ ಮಾತ್ರ ತರಗತಿ ನಡೆಸಲು ಆದೇಶಿಸಲಾಗಿದೆ. ರಾಜ್ಯದ ಉರ್ದು ಮತ್ತು ಇತರ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯದ ನಿರ್ದೇಶನದ ಪ್ರಕಾರ, ಫೆಬ್ರವರಿ ಮಧ್ಯದಿಂದ ಮಾರ್ಚ್ 20 ರಂಜಾನ್ ಆಚರಣೆ ಇರಲಿದ್ದು ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ರಂಜಾನ್ ತಿಂಗಳಲ್ಲಿ ಉಪವಾಸ ವ್ರತವನ್ನು ಕೈಗೊಳ್ಳುವುದರಿಂದ ಶಾಲೆಗಳ ಸಮಯವನ್ನು ಬದಲಾವಣೆ ಮಾಡಲಾಗಿದೆ. ಮಾರ್ಚ್ 20ರವರೆಗೆ ಮಾತ್ರ ಶಾಲಾ ಅವಧಿಯ ವೇಳಾಪಟ್ಟಿಯ ಬದಲಾವಣೆ ಮಾಡಲಾಗಿದೆ. ಸರ್ಕಾರದ ಈ ಕ್ರಮಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಕಾಂಗ್ರೆಸ್ ತುಷ್ಟೀಕರಣ ರಾಜಕೀಯದಲ್ಲಿ ತೊಡಗಿದೆ. ಯಾವುದೇ ಹಿಂದೂ ಹಬ್ಬಕ್ಕೂ ಅದು ಅದೇ ಕ್ರಮವನ್ನು ತೆಗೆದುಕೊಳ್ಳುತ್ತದೆಯೇ ಎಂದೂ ಬಿಜೆಪಿ ಪ್ರಶ್ನಿಸಿದೆ.

5. 12 ವರ್ಷಗಳ ಬಳಿಕ CCL2026 ಗೆದ್ದ ಕಿಚ್ಚನ ಪಡೆ

ಕರ್ನಾಟಕ ಬುಲ್ಡೋಜರ್ಸ್ ತಂಡ ಬರೊಬ್ಬರಿ 12 ವರ್ಷಗಳ ಬಳಿಕ 3ನೇ ಬಾರಿಗೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕೊಯಮತ್ತೂರಿನ ಎಸ್ ಎನ್ ಆರ್ ಕಾಲೇಜು ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಬೆಂಗಾಲ್ ಟೈಗರ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ನಟ ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ 6 ವಿಕೆಟ್ ಗಳಿಂದ ಗೆಲುವು ಸಾಧಿಸಿತ್ತು. ಕರ್ನಾಟಕ ಪರ ರಾಜೀವ್ ಹನು ಸ್ಫೋಟಕ ಬ್ಯಾಟಿಂಗ್ ಮೂಲಕ 69 ರನ್ ಬಾರಿಸಿದ್ದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಹಿಂದೆ 2013 ಹಾಗೂ 2014ರಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಚಾಂಪಿಯನ್ ಆಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com