3 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ Bescom ಎಂಜಿನಿಯರ್ ಲೋಕಾಯುಕ್ತರ ಬಲೆಗೆ
ಬೆಂಗಳೂರು: ಲಂಚ ಸ್ವೀಕರಿಸುತ್ತಿದ್ದಾಗ ಬೆಸ್ಕಾಂ (BESCOM) ಕಾರ್ಯನಿರ್ವಾಹಕ ಎಂಜಿನಿಯರ್ ಒಬ್ಬರು ಲೋಕಾಯುಕ್ತ ಪೊಲೀಸರಿಗೆ ರೆಡ್-ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಇಂದಿರಾನಗರದ ಬೆಸ್ಕಾಂನ ಇ-11 ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ (ಎಲೆಕ್ಟ್ರಿಕ್) ರಾಜೇಶ್ ಕೆ ವಿ ಅವರನ್ನು ನಗರ ವಿಭಾಗದ ಲೋಕಾಯುಕ್ತ ಪೊಲೀಸರು ದೂರುದಾರರಿಂದ 3 ಲಕ್ಷ ರೂ. ಲಂಚ ಪಡೆಯುವಾಗ ಬಂಧನಕ್ಕೊಳಪಡಿಸಿದ್ದಾರೆ.
ಲೋಕಾಯುಕ್ತ ಪೊಲೀಸರ ಅಧಿಕೃತ ಪ್ರಕಟಣೆಯ ಪ್ರಕಾರ, ನಗರದ ನಿವಾಸಿ ವಿದ್ಯುತ್ ಗುತ್ತಿಗೆದಾರ ದಿಲೀಪ್ ಎಸ್.ಎನ್. (Dileep S N) ಅವರು ನೀಡಿದ ದೂರಿನ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ.
ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್ ದೇವರಾಜ್ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಎಸ್.ಬಿ.ಪಾಟೀಲ್, ಕೇಶವಮೂರ್ತಿ ಮತ್ತು ರಾಜಶೇಖರಯ್ಯ ಅವರ ತಂಡವು ಕಾರ್ಯಾಚರಣೆ ನಡೆಸಿದೆ.
ವಿದ್ಯುತ್ ಗುತ್ತಿಗೆದಾರ ದಿಲೀಪ್.ಎಸ್.ಎನ್ ಅವರು ಇಂದಿರಾನಗರ ಬೆಸ್ಕಾಂ ಕಚೇರಿ ವ್ಯಾಪ್ತಿಯಲ್ಲಿ ವಾಣಿಜ್ಯ ಕಟ್ಟಡವೊಂದಕ್ಕೆ ವಿದ್ಯುತ್ ಕಾಮಗಾರಿ ನಡೆಸುತ್ತಿದ್ದಾರೆ. ಆ ಕಟ್ಟಡಕ್ಕೆ 24 ಕಿಲೋವಾಟ್ ಸಾಮರ್ಥ್ಯದ ನೂತನ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಿದ್ದರು.
ಈ ಕೆಲಸಕ್ಕೆ ರಾಜೇಶ್ ಕೆ.ವಿ ಅವರು ರೂ.7 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟು, ರೂ.3 ಲಕ್ಷಕ್ಕೆ ಒಪ್ಪಿಕೊಂಡಿದ್ದರು. ಈ ಬಗ್ಗೆ ದಿಲೀಪ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ದೂರಿನ ಆಧಾರದಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆ (Prevention of Corruption Act) ಅಡಿಯಲ್ಲಿ ಪ್ರಕರಣ ದಾಖಲಿಸಿ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದರು. ಇದರಂತೆ ರೂ.3 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗಲೇ ಎಂಜಿನಿಯರ್ ರಾಜೇಶ್ ಕೆ.ವಿ. ಅವರನ್ನು ಬಂಧಿಸಿದ್ದಾರೆ.

