25 ಲಕ್ಷ ಆಸ್ತಿಗಳ ಡಿಜಿಟಲೀಕರಣ, 9 ಲಕ್ಷ ಇ-ಖಾತೆಗಳ ಹಂಚಿಕೆ: 15 ದಿನದಲ್ಲಿ ಬಿ ಖಾತೆಯಿಂದ 'ಎ'ಗೆ ವರ್ಗಾವಣೆ; ಡಿ.ಕೆ. ಶಿವಕುಮಾರ್‌

ಆಸ್ತಿ ದಾಖಲೆಗಳ ಡಿಜಿಟಲೀಕರಣ ಈ ವರ್ಷದ ಪ್ರಮುಖ ತೀರ್ಮಾನ. ಈ ಹಿಂದೆ ಕೃಷಿ ಭೂಮಿ ಡಿಜಿಟಲೀಕರಣಕ್ಕೆ ಭೂಮಿ ಯೋಜನೆ ತರಲಾಗಿತ್ತು. ನಮ್ಮ ಬೆಂಗಳೂರಿನ ಎಲ್ಲಾ ಆಸ್ತಿ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ಇ–ಖಾತೆ ವ್ಯವಸ್ಥೆ ತರಲು ಉದ್ದೇಶಿಸಿದ್ದೇವೆ.
DK Shivakumar
ಡಿ.ಕೆ ಶಿವಕುಮಾರ್
Updated on

ಬೆಂಗಳೂರು: ನಗರದಾದ್ಯಂತ ಇದುವರೆಗೂ 25 ಲಕ್ಷ ಆಸ್ತಿಗಳನ್ನು ಡಿಜಿಟಲೀಕರಣ ಮಾಡಲಾಗಿದೆ. 9 ಲಕ್ಷ ಇ–ಖಾತಾಗಳನ್ನು ಜನರಿಗೆ ಹಂಚಿಕೆ ಮಾಡಲಾಗಿದೆ. ಉಚಿತವಾಗಿ, ಇ–ಖಾತಾ ಅಭಿಯಾನ ಪ್ರಾರಂಭ ಮಾಡಲು ಎಲ್ಲಾ ಪಾಲಿಕೆಗಳಿಗೆ ಸೂಚನೆ ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ತಿಳಿಸಿದರು.

ಖಾತಾ ಪರಿವರ್ತನೆ ಮಾಡಿಸಿಕೊಂಡವರಿಗೆ ಸೋಮವಾರ ಖಾತಾ ಪತ್ರ ವಿತರಣೆ ಮಾಡಿ ಅವರು ಸುದ್ದಿಗಾರರರೊಂದಿಗೆ ಜತೆ ಮಾತನಾಡಿದರು. ಆಸ್ತಿ ದಾಖಲೆಗಳ ಡಿಜಿಟಲೀಕರಣ ಈ ವರ್ಷದ ಪ್ರಮುಖ ತೀರ್ಮಾನ. ಈ ಹಿಂದೆ ಕೃಷಿ ಭೂಮಿ ಡಿಜಿಟಲೀಕರಣಕ್ಕೆ ಭೂಮಿ ಯೋಜನೆ ತರಲಾಗಿತ್ತು. ನಮ್ಮ ಬೆಂಗಳೂರಿನ ಎಲ್ಲಾ ಆಸ್ತಿ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ಇ–ಖಾತೆ ವ್ಯವಸ್ಥೆ ತರಲು ಉದ್ದೇಶಿಸಿದ್ದೇವೆ. ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಕಾವೇರಿ ಸಾಫ್ಟ್‌ವೇರ್‌ನಲ್ಲಿ ದಾಖಲೆಗಳು ಆಧಾರ್‌ ಜೊತೆ ಲಿಂಕ್‌ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದರು.

‘ಯೂನಿಫಾರ್ಮ್‌ ಲ್ಯಾಂಡ್‌ ರೆಕಾರ್ಡ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌’ ಮೂಲಕ ಬಿ ಖಾತಾದಿಂದ ಎ ಖಾತೆ ನೀಡಲಾಗುತ್ತದೆ. ಈಗಾಗಲೇ ಏಳು ಸಾವಿರ ಅರ್ಜಿಗಳು ಬಂದಿವೆ. ಇದಕ್ಕೆ ಇನ್ನೂ ಲಕ್ಷಗಟ್ಟಲೆ ಅರ್ಜಿಗಳು ಬರಬೇಕಿದೆ. ಈಗಾಗಲೇ ಅರ್ಜಿ ಹಾಕಿರುವವರಿಗೆ 15 ದಿನದಲ್ಲಿ ಖಾತಾ ನೀಡಲು ಸಮಯ ನಿಗದಿಪಡಿಸಲಾಗಿದೆ ಎಂದರು.

‘ಅನೇಕರು ಕ್ರಯಪತ್ರ ಮಾತ್ರ ಹೊಂದಿದ್ದು, ಖಾತೆಯನ್ನೇ ಪಡೆದಿಲ್ಲ. 1.20 ಲಕ್ಷ ಜನ ಈ ಬಗ್ಗೆ ಅರ್ಜಿ ನೀಡಿದ್ದಾರೆ. 60 ಸಾವಿರ ಜನರ ಅರ್ಜಿ ಒಪ್ಪಿತವಾಗಿದೆ. 40 ಸಾವಿರ ಅರ್ಜಿ ರದ್ದಾಗಿದೆ. 15 ಸಾವಿರ ಅರ್ಜಿಗಳು ವಿವಿಧ ಹಂತದಲ್ಲಿವೆ. ಅರ್ಜಿಗಳು ಏಕೆ ತಿರಸ್ಕೃತವಾಗಿವೆ ಎಂದು ಮತ್ತೊಮ್ಮೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದರು.

DK Shivakumar
ರಾಜ್ಯಾದ್ಯಂತ ಬಿ ಖಾತಾ ಆಸ್ತಿಗಳಿಗೆ ಎ ಖಾತಾ ಭಾಗ್ಯ: ಸಚಿವ ಸಂಪುಟದಲ್ಲಿ ಮಹತ್ವದ ತೀರ್ಮಾನ

‘ಶಿವರಾಮ ಕಾರಂತ ಬಡಾವಣೆಯಲ್ಲಿ ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಿ ಎಂದು ನ್ಯಾಯಾಲಯ ತಿಳಿಸಿದೆ. 34,977 ನಿವೇಶನ ರಚಿಸಲಾಗಿದೆ. 17 ಸಾವಿರ ನಿವೇಶನಗಳನ್ನು ಭೂ ಮಾಲೀಕರಿಗೆ ನೀಡಬೇಕು. ಶೇ 75ರಷ್ಟು ಮಾಲೀಕರು ಇದಕ್ಕೆ ತಯಾರಿದ್ದಾರೆ. ಮಿಕ್ಕ ಮಾಲೀಕರ ಬಳಿ ನಾನು ಮನವಿ ಮಾಡುತ್ತಿದ್ದೇನೆ. ಬಿಡಿಎಗೆ 50 ವರ್ಷ ತುಂಬುತ್ತಿದ್ದು, 17 ಸಾವಿರ ಜನರಿಗೂ ಒಂದೇ ದಿನ ಹಂಚಿಕೆ ಮಾಡುವ ಕಾರ್ಯಕ್ರಮ ನಡೆಸಲಾಗುವುದು. ಉಳಿದ ನಿವೇಶನಗಳಿಗೆ ಅರ್ಜಿ ಕರೆದು ನೀಡಲಾಗುವುದು’ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ನಂಬಿಕೆ ನಕ್ಷೆ ಯೋಜನೆಯಡಿ 12 ಸಾವಿರ ನಕ್ಷೆಗಳನ್ನು ನೀಡಲಾಗಿದೆ. ಇದರಿಂದ ಭ್ರಷ್ಟಾಚಾರ ನಿಂತಿದೆ. ಕೆಲಸದ ವೇಗ ಹೆಚ್ಚಿದೆ. ನಾಗರಿಕ ಸ್ನೇಹಿ ವಾತಾವರಣ ಉಂಟಾಗಿದೆ. ಓಟಿಎಸ್‌ ಯೋಜನೆಯ ಅಡಿ ದಂಡ ಹಾಗೂ ಬಡ್ಡಿಯನ್ನು ರದ್ದು ಮಾಡಲಾಯಿತು. ಇದರಿಂದ 2 ಲಕ್ಷ ಜನರಿಗೆ ಅನುಕೂಲವಾಗಿದೆ. ಜಿಬಿಎ ವ್ಯಾಪ್ತಿಯಲ್ಲಿ 1,200 ಕೋಟಿ ಹಣ ಸಂಗ್ರಹವಾಗಿದೆ. ಟಿಡಿಆರ್‌ ಅಡಿ ಬೆಂಗಳೂರು ಬಿಜಿನೆಸ್‌ ಕಾರಿಡಾರ್‌ ಯೋಜನೆಗೆ ಎಂದು ಭೂಮಿ ಕಳೆದುಕೊಂಡವರಿಗೆ ಹೆಚ್ಚು ಅನುಕೂಲವಾಗಲಿದೆ” ಎಂದು ಹೇಳಿದರು.

"ನಾವು ಜಾರಿಗೆ ತಂದಿದ್ದ ಪ್ರಿಮೀಯಂ ಎಫ್‌ ಎಆರ್‌ ಅನ್ನು ರಾಜ್ಯಪಾಲರು ತಡೆ ನೀಡಿದರು. ಬಿಜೆಪಿ ಸಮಯದಲ್ಲಿ ತಂದಿದ್ದ ಕಾನೂನನ್ನೇ ನಾನು ಜಾರಿಗೆ ತಂದಿದ್ದೇವೆ. ಒಂದಷ್ಟು ಜನ ಇದರ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಈಗ ಅಲ್ಲಿಂದಲೂ ವಾಪಸ್‌ ಕಳುಹಿಸಿದ್ದಾರೆ. ಒಂದಷ್ಟು ಜನ ಪ್ರಿಮೀಯಂ ಎಫ್‌ ಎಆರ್‌ ಅನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ 1 ಸಾವಿರ ಕೋಟಿ ಬರುವ ನಿರೀಕ್ಷೆಯಿದೆ” ಎಂದರು.

“ಬಿ ಸ್ಮೈಲ್‌ ಎನ್ನುವ ಕಂಪೆನಿಯನ್ನು ಕಳೆದ ವರ್ಷ ಪ್ರಾರಂಭ ಮಾಡಲಾಯಿತು. ಒಟ್ಟು 1.47 ಲಕ್ಷ ಕೋಟಿಯಷ್ಟು ಹೂಡಿಕೆಯನ್ನು ಬಿ ಸ್ಮೈಲ್‌ ಅಲ್ಲಿ ಮಾಡಲಾಗಿದೆ. ಈಗಾಗಲೇ ಟೆಂಡರ್‌ ಕರೆಯಲಾಗಿದೆ. ಬಿಡಿಎಗೂ ಸಹ ಒಂದಷ್ಟು ಜವಾಬ್ದಾರಿ ನೀಡಲಾಗಿದೆ. 1.5 ಕಿಮೀ ಉದ್ದದ ಕಟ್‌ ಅಂಡ್‌ ಕವರ್‌ ಟನಲ್‌, ಮೇಖ್ರಿ ವೃತ್ತದ ಬಳಿ ವಾಹನ ದಟ್ಟಣೆ ತಪ್ಪಿಸಲು ಯೋಜನೆ ಮಾಡಲಾಗುವುದು. ಬ್ರಾಂಡ್‌ ಬೆಂಗಳೂರು ಅಡಿ ಬೀದಿ ದೀಪ, ನಗರ ಸೌಂದರ್ಯೀಕರಣವನ್ನು ಯಾವ ರೀತಿ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಲಾಗುವುದು. ವೈಟ್‌ ಟಾಪಿಂಗ್ ಕಾಮಗಾರಿಯನ್ನು ನಾನೇ ಖುದ್ದಾಗಿ ಪರಿಶೀಲನೆ ಮಾಡಿದ್ದೇನೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com