

ಬಾಗಲಕೋಟೆ: ಶಿವಾಜಿ ಮಹಾರಾಜರ ಜಯಂತೋತ್ಸವ ಆಚರಣೆ ವೇಳೆ ನಡೆದ ಕಲ್ಲು ತೂರಾಟ, ಚಪ್ಪಲಿ ಎಸೆತ ಘಟನೆಗೆ ಸಂಬಂಧಿಸಿ 8 ಮಂದಿಯನ್ನು ಬಂಧಿಸಲಾಗಿದೆ ಎಂದು ಬಾಗಲಕೋಟೆ ಜಿಲ್ಲೆ ಎಸ್ ಪಿ ಸಿದ್ಧಾರ್ಥ್ ಗೋಯೆಲ್ ತಿಳಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳಿಗೆ ಘಟನೆ ಬಗ್ಗೆ ಮಾಹಿತಿ ನೀಡಿದ ಅವರು, ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ಕೇಸು ದಾಖಲಿಸಿ ಎಂಟು ಮಂದಿಯನ್ನು ಬಂಧಿಸಲಾಗಿದೆ. ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅವರ ಮೇಲೆ ಕಲ್ಲು ತೂರಾಟ ನಡೆದಿದ್ದು, ಎಸ್‌ಪಿ ಸೇರಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.
ಬಂಧಿತರಲ್ಲಿ ಮುಖ್ಯ ಆರೋಪಿಯೂ ಸೇರಿದಂತೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಏಳು ಮಂದಿ ಸೇರಿದ್ದಾರೆ. ನಿಷೇಧಾಜ್ಞೆಯನ್ನು ಫೆಬ್ರವರಿ 24ರವರೆಗೆ ವಿಸ್ತರಿಸಲಾಗಿದ್ದು, ಹೆಚ್ಚುವರಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ತರಕಾರಿ ಅಂಗಡಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಸಿಸಿಟಿವಿ ದೃಶ್ಯಾಧಾರಗಳ ಮೇಲೆ ಇನ್ನಷ್ಟು ಬಂಧನಗಳು ನಡೆಯಲಿವೆ ಎಂದರು.
ನಡೆದ ಘಟನೆಯೇನು
ನಿನ್ನೆ ಸಾಯಂಕಾಲ 5 ಗಂಟೆ ಸುಮಾರಿಗೆ ಶಿವಾಜಿ ಮಹಾರಾಜ ಜಯಂತಿ ಪ್ರಯುಕ್ತ ಮೆರವಣಿಗೆ ಆರಂಭವಾಗಿದ್ದು, ಮಸೀದಿ ಮುಂದೆ ಮೆರವಣಿಗೆ ಬರುವ ಮುನ್ನವೇ ಗಲಾಟೆ ಆರಂಭವಾಗಿತ್ತು. ರಾತ್ರಿ 10 ಗಂಟೆ 6 ನಿಮಿಷಕ್ಕೆ ಸರಿಯಾಗಿ ಗಲಾಟೆ ನಡೆದಿದೆ. ನಾವೆಲ್ಲ ಮೆರವಣಿಗೆ ಜೊತೆಜೊತೆಗೇ ಹೋಗುತ್ತಿದ್ದೆವು. ಮಸೀದಿ ಮುಂದೆ ಕೂಡ ಇದ್ದೆವು.
ಮಸೀದಿಯೊಳಗೆ ಕೆಲವರು ಇದ್ದರೆ, ಇನ್ನು ಕೆಲವರು ಪ್ರಾರ್ಥನೆ ಮುಗಿಸಿಕೊಂಡು ಹೋಗಿದ್ದರು. ಒಬ್ಬ ವ್ಯಕ್ತಿ ಶ್ಯೂರ್ಯಾಕ್ ಕೆಳಗೆ ಇದ್ದ ಎರಡು ಕಲ್ಲನ್ನು ಹೊರಗೆ ಎಸೆದಾಗ ನಮ್ಮ ಪೊಲೀಸರ ಮೇಲೆ ಕೂಡ ಬಿದ್ದಿತು. ಜನರ ಮೇಲೆ ಕೂಡ ಬಿದ್ದಿದೆ, ಗಂಭೀರ ಗಾಯಗಳಾಗಿಲ್ಲ. ಕಲ್ಲೆಸೆದ 28 ವರ್ಷದ ಯುವಕ ಕಂಜೀರ್ ನನ್ನು ಗುರುತಿಸಿ ಬಂಧಿಸಿ ಎ1 ಆರೋಪಿ ಎಂದು ಗುರುತಿಸಿದ್ದೇವೆ ಎಂದರು.
ಈ ಘಟನೆ ನಿನ್ನೆ ಹಳೆಯ ನಗರ ಪ್ರದೇಶದಲ್ಲಿ ನಡೆದಿದೆ. ಪ್ರಾಥಮಿಕ ಮಾಹಿತಿ ಮತ್ತು ಇದುವರೆಗೆ ಪರಿಶೀಲಿಸಿದ ವೀಡಿಯೊಗಳ ಆಧಾರದ ಮೇಲೆ, ಒಂದು ಕಲ್ಲು ಪೊಲೀಸ್ ಕಾನ್ಸ್‌ಟೇಬಲ್‌ಗೆ ತಗುಲಿದ್ದು, ಇನ್ನೊಂದು ಕಲ್ಲು ಅವರ ಭುಜದ ಮೇಲೆ ಬಿದ್ದಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.
ಯಾರಿಗೂ ಗಂಭೀರ ಗಾಯಗಳಾಗಿಲ್ಲ. ನಂತರ ಮೆರವಣಿಗೆ ಯಾವುದೇ ಅಡಚಣೆ ಇಲ್ಲದೆ ಮುಂದುವರಿಯಿತು ಮತ್ತು ವಾತಾವರಣ ಶಾಂತವಾಗಿಯೇ ಇತ್ತು ಎಂದರು.
ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 163 ಅಡಿಯಲ್ಲಿ ಕಳೆದ ಮಧ್ಯರಾತ್ರಿಯಿಂದ ಫೆಬ್ರವರಿ 24ರ ಮಧ್ಯರಾತ್ರಿ ತನಕ ಬಾಗಲಕೋಟೆಯ ಕೆಲವು ಭಾಗಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಅಧಿಕಾರಿಗಳ ಪ್ರಕಾರ, ಈ ನಿರ್ಬಂಧಗಳಡಿ ಸಾರ್ವಜನಿಕ ಸ್ಥಳಗಳಲ್ಲಿ ನಾಲ್ಕು ಜನಕ್ಕಿಂತ ಹೆಚ್ಚು ಜನರು ಸೇರಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಅಪಾಯಕಾರಿ ಆಯುಧಗಳನ್ನು ಹೊತ್ತುಕೊಂಡು ಸಂಚರಿಸುವುದು, ಸಾರ್ವಜನಿಕ ಸುರಕ್ಷತೆಗೆ ಧಕ್ಕೆಯಾಗುವ ಚಟುವಟಿಕೆಗಳಲ್ಲಿ ತೊಡಗುವುದು, ಹಾಗೂ ಪೂರ್ವಾನುಮತಿ ಇಲ್ಲದೆ ಸಭೆ, ಸಮಾರಂಭ ಅಥವಾ ಪ್ರತಿಭಟನೆ, ಧರಣಿಗಳನ್ನು ಆಯೋಜಿಸುವುದನ್ನು ನಿಷೇಧಿಸಲಾಗಿದೆ.
ಪ್ರಭಾವಿತ ಪ್ರದೇಶಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
Advertisement