ಬೆಂಗಳೂರಿನಲ್ಲಿ ಸ್ಫೋಟಕ್ಕೆ ಸಂಚು: LET ಉಗ್ರ ಜುನೈದ್ ಅಹ್ಮದ್'ಗಾಗಿ ತೀವ್ರ ಶೋಧ, ಸುಳಿವು ನೀಡಿದವರಿಗೆ 5 ಲಕ್ಷ ಬಹುಮಾನ ಘೋಷಣೆ

ಜುನೈದ್ ಬಂಧನಕ್ಕೆ ಸಹಾಯವಾಗುವ ಯಾವುದೇ ಮಾಹಿತಿ ನೀಡಿದವರ ಗುರುತನ್ನು ರಹಸ್ಯವಾಗಿಡಲಾಗುವುದು. ಮಾಹಿತಿಯನ್ನು 080-29510900 ಅಥವಾ 8904241100 ಗೆ ಹಂಚಿಕೊಳ್ಳಬಹುದು ಎಂದು ಎನ್‌ಐಎ ಹೇಳಿದೆ.
NIA
ಎನ್ಐಎ online desk
Updated on

ಬೆಂಗಳೂರು: ಬೆಂಗಳೂರಿನಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಲಷ್ಕರ್-ಇ-ತೊಯ್ಬಾ (LeT) ಉಗ್ರ ಸಂಘಟನೆಯ ಭಯೋತ್ಪಾದಕ ಜುನೈದ್ ಅಹ್ಮದ್ ಕುರಿತು ಮಾಹಿತಿ ನೀಡಿದವರಿಗೆ 5 ಲಕ್ಷ ರೂ.ನಗದು ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ಘೋಷಣೆ ಮಾಡಿದೆ.

33 ವರ್ಷದ ಜುನೈದ್ ಅಹ್ಮದ್ ಘೋಷಿತ ಅಪರಾಧಿಯಾಗಿದ್ದು, ಶಸ್ತ್ರಾಸ್ತ್ರ, ಗುಂಡು ಹಾಗೂ ಸ್ಫೋಟಕ ವಸ್ತುಗಳ ಜಪ್ತಿ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.

2023 ಜುಲೈನಲ್ಲಿ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಗಶೆಟ್ಟಿಹಳ್ಳಿಯ ಮಲ್ಲಿಗೆ ಲೇಔಟ್ ನಿವಾಸಿಯಾಗಿದ್ದ ಜುನೈದ್ ಅಹ್ಮದ್, ಜುನೈದ್, ಜೆಡಿ ಜಮ್ಶೀದಾ, ಜಾನ್, ಸುಹಾನಾ, ಡಿಜೆ ರಿಟ್ಜ್, ಜಮೀಲಾ ಎಂಬ ಹಲವು ಉಪನಾಮಗಳಿಂದ ಗುರುತಿಸಿಕೊಂಡಿದ್ದಾನೆ ಎಂದು ಎನ್‌ಐಎ ಹೇಳಿದೆ.

ಅವನ ಬಂಧನಕ್ಕೆ ಸಹಾಯವಾಗುವ ಯಾವುದೇ ಮಾಹಿತಿ ನೀಡಿದವರ ಗುರುತನ್ನು ರಹಸ್ಯವಾಗಿಡಲಾಗುವುದು. ಮಾಹಿತಿಯನ್ನು 080-29510900 ಅಥವಾ 8904241100 ಗೆ ಹಂಚಿಕೊಳ್ಳಬಹುದು ಎಂದು ಎನ್‌ಐಎ ಹೇಳಿದೆ.

2023ರಲ್ಲಿ ಬೆಂಗಳೂರಿನಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ ಪ್ರಕರಣದಲ್ಲಿ ಐದು ಶಂಕಿತ ಉಗ್ರರನ್ನು ಸಿಸಿಬಿ ಬಂಧಿಸಿತ್ತು. ಈ ಪ್ರಕರಣದಲ್ಲಿ ಜುನೈದ್ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿತ್ತು.

NIA
ಬೆಂಗಳೂರು ಜೈಲಿನ ಕೈದಿಗಳನ್ನು ಉಗ್ರ ಕೃತ್ಯಕ್ಕೆ ಬಳಕೆ ಆರೋಪ: 7 ರಾಜ್ಯಗಳಲ್ಲಿ NIA ದಾಳಿ

ಆರೋಪಿಗಳಿಂದ ಏಳು ದೇಶೀಯ ಪಿಸ್ತೂಲ್‌ಗಳು, 45 ಜೀವಂತ ಗುಂಡುಗಳು, ವಾಕಿ-ಟಾಕಿ ಸೆಟ್‌ಗಳು, ಒಂದು ಚಾಕು ಮತ್ತು 12 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಜುನೈದ್ ಈ ಹಿಂದೆ ಶ್ರೀಗಂಧ ಕಳ್ಳಸಾಗಣೆ ಮತ್ತು ದರೋಡೆ ಪ್ರಕರಣಗಳಲ್ಲೂ ಬಂಧನಕ್ಕೊಳಗಾಗಿದ್ದ. ಜಾಮೀನಿನಲ್ಲಿ ಬಿಡುಗಡೆಯಾದ ಬಳಿಕ ದೇಶ ಬಿಟ್ಟು ಮಧ್ಯಪ್ರಾಚ್ಯದ ದೇಶದಲ್ಲಿ ಆಶ್ರಯ ಪಡೆದಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ತನಿಖೆಯನ್ನು ಮುಂದುವರಿಸಿರುವ ಎನ್ಐಎ, ಜನವರಿ 2026ರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರಕ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ. ಇದರಲ್ಲಿ ಜುನೈದ್ ಅಹಮದ್‌ನ ತಾಯಿ ಅನೀಸ್ ಫಾತಿಮಾ ಸೇರಿದಂತೆ ಇತರರ ಹೆಸರನ್ನು ಸೇರಿಸಲಾಗಿದೆ.

ಅನೀಸ್ ಫಾತಿಮಾ ಅವರು ಜೈಲಿನಲ್ಲಿದ್ದ ಟಿ. ನಾಸೀರ್‌ಗೆ ಆರ್ಥಿಕ ಸಹಾಯ ಮತ್ತು ಸಂವಹನ ಸೌಲಭ್ಯ ಒದಗಿಸುತ್ತಿದ್ದರು ಹಾಗೂ ತನ್ನ ಮಗನ ಸೂಚನೆಯಂತೆ ಸ್ಫೋಟಕಗಳನ್ನು ನಿರ್ವಹಿಸುತ್ತಿದ್ದರು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಅಲ್ಲದೆ, ಜೈಲಿನಲ್ಲಿದ್ದ ಕೈದಿಗಳಿಗೆ ಮೊಬೈಲ್ ಪೂರೈಸುತ್ತಿದ್ದ ವೈದ್ಯರೊಬ್ಬರ ಪಾತ್ರವನ್ನೂ ತನಿಖಾ ಸಂಸ್ಥೆ ಬಯಲಿಗೆಳೆದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com