

ಬೆಂಗಳೂರು: ರಾಜ್ಯಾದ್ಯಂತ ಹಲವಾರು ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಹುಳುಗಳು ಪತ್ತೆ ಎಂಬ ಹಲವಾರು ಸುದ್ದಿ ವರದಿಗಳನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ರಾಜ್ಯ ಆಹಾರ ಆಯೋಗ (ಕೆಎಸ್‌ಎಫ್‌ಸಿ) 20 ಜಿಲ್ಲೆಗಳ ಶಾಲೆಗಳು ಮತ್ತು ಆಹಾರ ಧಾನ್ಯಗಳನ್ನು ಸಂಗ್ರಹಿಸಿರುವ ಗೋದಾಮುಗಳಿಗೆ ಭೇಟಿ ನೀಡಿದೆ.
ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸುವ ಧಾನ್ಯಗಳ ಗುಣಮಟ್ಟದ ಬಗ್ಗೆ ಆಯೋಗವು ಶೀಘ್ರದಲ್ಲೇ ಮಾಹಿತಿ ಸಂಗ್ರಹಿಸಿ, ಶಿಫಾರಸುಗಳೊಂದಿಗೆ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ.
ನಾವು 20 ಜಿಲ್ಲೆಗಳಲ್ಲಿ ನಡೆಸಿದ ತಪಾಸಣೆಯ ಸಮಯದಲ್ಲಿ, ಕಲಬುರ್ಗಿ, ಮಂಡ್ಯ, ತುಮಕೂರು ಮತ್ತು ಮೈಸೂರು ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಹುಳುಗಳಿಂದ ತುಂಬಿದ ಆಹಾರ ಧಾನ್ಯಗಳು ಕಂಡುಬಂದವು. ಹುಳುಗಳಿಂದ ತುಂಬಿದ ಅಕ್ಕಿ ಮತ್ತು ದ್ವಿದಳ ಧಾನ್ಯಗಳನ್ನು ನಾನು ವಾಪಸ್ ಕಳುಹಿಸಿ ಬದಲಿ ತರುವಂತೆ ಆದೇಶಿಸಿದೆ.
ಶಾಲೆಗಳಿಗೆ ತಾಜಾ ಆಹಾರ ಧಾನ್ಯಗಳು ಬಂದಿವೆ. ಶಾಲೆಗಳಿಗೆ ಹುಳುಗಳಿಂದ ತುಂಬಿದ ಆಹಾರ ಧಾನ್ಯಗಳನ್ನು ಹೇಗೆ ಪೂರೈಸಲಾಗಿದೆ ಎಂದು ನಾವು ವಿಚಾರಿಸುತ್ತಿದ್ದೇವೆ ಎಂದು ಕೆಎಸ್‌ಎಫ್‌ಸಿ ಅಧ್ಯಕ್ಷ ಎಚ್ ಕೃಷ್ಣ ಟಿಎನ್‌ಐಇಗೆ ತಿಳಿಸಿದ್ದಾರೆ.
ಮಕ್ಕಳಿಗೆ ಅಡುಗೆ ಮಾಡಲು ಶಾಲೆಗಳಲ್ಲಿ ಸಿಬ್ಬಂದಿ ಕೊರತೆ ಇದೆ ಎಂಬ ಬಗ್ಗೆ ಮಾಹಿತಿ ನೀಡಿದ ಅವರುಸ ಅನೇಕ ಶಾಲೆಗಳಲ್ಲಿ, ವಿದ್ಯಾರ್ಥಿಗಳಿಗೆ ಅಡುಗೆ ಮಾಡುವ ಕೆಲಸದ ಹೊರೆ ಶಿಕ್ಷಕರ ಮೇಲಿದೆ. ಆಹಾರ ಧಾನ್ಯಗಳನ್ನು ನೋಡಿಕೊಳ್ಳುವುದು, ಮೊಟ್ಟೆ, ಬಾಳೆಹಣ್ಣು ಮತ್ತು ಆಹಾರವನ್ನು ಬೇಯಿಸಲು ಅಗತ್ಯವಿರುವ ಇತರ ದಿನಸಿ ವಸ್ತುಗಳನ್ನು ಖರೀದಿಸುವ ಜವಾಬ್ದಾರಿಗಳನ್ನು ಶಿಕ್ಷಕರು ಅಥವಾ ಪ್ರಾಂಶುಪಾಲರಿಗೆ ವಹಿಸಲಾಗಿದೆ. ಈ ಎಲ್ಲಾ ವಿವರಗಳನ್ನು SATS ನಲ್ಲಿ ನಮೂದಿಸಬೇಕು.
ಈ ಸಂದರ್ಭಗಳಲ್ಲಿ, ಹುಳುಗಳನ್ನು ಹೊಂದಿರುವ ಧಾನ್ಯಗಳು ಗಮನಕ್ಕೆ ಬಾರದೇ ಇರುವುದು ಆಶ್ಚರ್ಯವೇನಿಲ್ಲ" ಎಂದು ಅವರು ಹೇಳಿದರು.
ಸರ್ಕಾರವು ಅಂತಹ ಪೂರೈಕೆದಾರರನ್ನು ತಕ್ಷಣವೇ ಕಪ್ಪುಪಟ್ಟಿಗೆ ಸೇರಿಸಬೇಕು. ಆಹಾರ ಧಾನ್ಯಗಳ ಗುಣಮಟ್ಟವನ್ನು ಪರಿಶೀಲಿಸುವ ಜವಾಬ್ದಾರಿಯನ್ನು ಶಾಲೆಗಳಲ್ಲಿನ ಬೋಧಕೇತರ ಸಿಬ್ಬಂದಿಗೆ ವಹಿಸಬೇಕು, ಮೇಲ್ವಿಚಾರಣೆಯನ್ನು ಮಾತ್ರ ಬೋಧಕ ಸಿಬ್ಬಂದಿಗೆ ವಹಿಸಬೇಕು. ಕಲಬುರ್ಗಿಯ ಪೂರೈಕೆದಾರರಿಂದ ಆಹಾರ ಧಾನ್ಯಗಳನ್ನು ಖರೀದಿಸಿ ಇತರ ವಿವಿಧ ಜಿಲ್ಲೆಗಳಿಗೆ ಪೂರೈಸುವ ಬದಲು, ಶಾಲೆಗಳು ತಾಜಾ ಆಹಾರ ಪದಾರ್ಥಗಳನ್ನು ಪಡೆಯುವಂತೆ ಇಲಾಖೆಯು ಸ್ಥಳೀಯ ಮಾರಾಟಗಾರರಿಂದ ಅವುಗಳನ್ನು ಖರೀದಿಸಬೇಕು. ಅಧಿಕಾರಿಗಳು ಮತ್ತು ಶಿಕ್ಷಕರು ಶಾಲೆಗಳಿಗೆ ಬರುವ ಆಹಾರ ಧಾನ್ಯಗಳ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡಬೇಕು ಎಂದಿದ್ದಾರೆ.
ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಗೋದಾಮುಗಳನ್ನು ಪರಿಶೀಲಿಸುವ ತಂಡದ ಭಾಗವಾಗಿದ್ದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ.ಟಿ. ತಿಪ್ಪೇಸ್ವಾಮಿ, "ಚಿತ್ರದುರ್ಗದಲ್ಲಿರುವ ಗೋದಾಮು ಹೊಸದು. ಆದಾಗ್ಯೂ, ತುಮಕೂರಿನಲ್ಲಿ ಸೌಲಭ್ಯಗಳು ಉತ್ತಮವಾಗಿಲ್ಲ ಮತ್ತು ಅಧಿಕಾರಿಗಳಿಗೆ ಅದರ ಬಗ್ಗೆ ತಿಳಿಸಲಾಗಿದೆ" ಎಂದು ಹೇಳಿದರು.
Advertisement