

ಬೆಂಗಳೂರು: ಬೆಂಗಳೂರಿನಿಂದ ಕಾರ್ಯನಿರ್ವಹಿಸುತ್ತಿದ್ದ ಪ್ರಮುಖ ಖಾಟ್ ಎಲೆಗಳ ಅಕ್ರಮ ಸಾಗಣೆ ಅಂತಾರಾಷ್ಟ್ರೀಯ ಜಾಲವನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬುಧವಾರ ಭೇದಿಸಿದೆ.
ಈ ಕಾರ್ಯಾಚರಣೆಯಲ್ಲಿ 8 ಕೋಟಿ ರೂ. ಮೌಲ್ಯದ 160 ಕಿಲೋಗ್ರಾಂ ತೂಕದ ಖಾಟ್ ಎಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
2018ರಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಖಾಟ್ ಅನ್ನು ಮಾದಕ ವಸ್ತು ಪಟ್ಟಿಗೆ ಸೇರಿಸಲಾಗಿತ್ತು. ಆ ಬಳಿಕ ಇಷ್ಟು ದೊಡ್ಡ ಪ್ರಮಾಣದಲ್ಲಿ ಖಾಟ್ ಎಲೆಗಳನ್ನು ವಶಪಡಿಸಿಕೊಂಡಿರೋದು ರಾಜ್ಯದಲ್ಲಿ ಇದೇ ಮೊದಲು ಎಂದು ಎನ್‌ಸಿಬಿ ತಿಳಿಸಿದೆ.
ಈ ಅಕ್ರಮ ವಸ್ತುಗಳನ್ನು ಇಥಿಯೋಪಿಯಾದಿಂದ ಕೀನ್ಯಾ ಮೂಲಕ ಭಾರತಕ್ಕೆ ಅಂತಾರಾಷ್ಟ್ರೀಯ ಮಾರ್ಗದಲ್ಲಿ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎನ್ನಲಾಗಿದ್ದು, ಸುಮಾರು 20ಕ್ಕೂ ಹೆಚ್ಚು ದೇಶಗಳಲ್ಲಿ ಈ ಜಾಲ ಸಕ್ರಿಯವಾಗಿರುವ ಮಾಹಿತಿ ದೊರೆತಿದೆ.
ಈ ಜಾಲವು ಉತ್ತರ ಅಮೆರಿಕಾ, ಯುರೋಪ್, ಗಲ್ಫ್ ರಾಷ್ಟ್ರಗಳು ಮತ್ತು ಮಧ್ಯಪ್ರಾಚ್ಯಕ್ಕೆ ಸುಮಾರು 2,100 ಕಿಲೋಗ್ರಾಂ ತೂಕದ 550ಕ್ಕೂ ಹೆಚ್ಚು ಪಾರ್ಸೆಲ್‌ಗಳನ್ನು ಕಳುಹಿಸಿದೆ ಎಂದು ಮಾಹಿತಿ ನೀಡಿದೆ.
ವಾಣಿಜ್ಯ ವಸ್ತುಗಳಂತೆ ಪ್ಯಾಕ್ ಮಾಡಿ ಅಂತರರಾಷ್ಟ್ರೀಯ ಅಂಚೆ ಹಾಗೂ ಕೂರಿಯರ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ಈ ವಸ್ತುವನ್ನು ಕಳ್ಳಸಾಗಣೆ ಮಾಡಲಾಗುತ್ತಿತ್ತು. ಬೆಂಗಳೂರನ್ನು ಸಂಗ್ರಹಣೆ ಮತ್ತು ವಿತರಣೆ ಕೇಂದ್ರವಾಗಿ ಉಪಯೋಗಿಸಿ, ದೊಡ್ಡ ಪ್ರಮಾಣದ ವಸ್ತುಗಳನ್ನು ಸಣ್ಣ ಪಾಲುಗಳಾಗಿ ವಿಭಜಿಸಿ ಕಳುಹಿಸಲಾಗುತ್ತಿತ್ತು.
ಈ ಜಾಲದಲ್ಲಿರುವ ಹೆಚ್ಚಿನವರು ವಿದೇಶಿ ಪ್ರಜೆಗಳೇ ಆಗಿದ್ದು, ಕೆಲ ಸ್ಥಳೀಯರ ಸಹಕಾರ ಕೂಡ ಇದೆ ಎಂದು ಎನ್‌ಸಿಬಿ ತಿಳಿಸಿದೆ.
ವಿದ್ಯಾರ್ಥಿ ವೀಸಾ ಮತ್ತು ವೈದ್ಯಕೀಯ ವೀಸಾ ಮೇಲೆ ಭಾರತದಲ್ಲಿದ್ದ ಕೆಲವರು ಕೂಡ ಇದರ ಭಾಗವಾಗಿರುವ ಅನುಮಾನವಿದೆ. ಈ ಸಂಬಂಧ ತನಿಖೆ ಮುಂದುವರಿದಿದ್ದು, ಮತ್ತಷ್ಟು ಜನರು ಬಂಧನಕ್ಕೊಳಗಾಗಲಿದ್ದಾರೆಂದು ಹೇಳಲಾಗುತ್ತಿದೆ.
Advertisement