

ಬೆಂಗಳೂರು: ಮಹರ್ಷಿ ವಾಲೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣ ಸಂಬಂಧ ಮಾಜಿ ಸಚಿವ ಹಾಗೂ ಶಾಸಕ ಬಿ.ನಾಗೇಂದ್ರ ಅವರ ಆಪ್ತರ ಮೇಲೆ ಸಿಬಿಐ ಬುಧವಾರ ದಾಳಿ ನಡೆಸಿದೆ.
ಬೆಂಗಳೂರಿನಿಂದ ಆಗಮಿಸಿದ್ದ ನಾಲ್ವರು ಅಧಿಕಾರಿಗಳ ತಂಡ ಸ್ಥಳೀಯ ಪೊಲೀಸರಿಗೆ ಮಾಹಿತಿಯನ್ನು ಕೊಡದೆ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
ನಾಗೇಂದ್ರ ಆಪ್ತ ವಿಶ್ವನಾಥ್ ಅವರ ಬಳ್ಳಾರಿಯ ನಿವಾಸ ಮತ್ತು ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿ ಕೆಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ.
ದಾಳಿ ಸಂದರ್ಭದಲ್ಲಿ ವಿಶ್ವನಾಥ್ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದ್ದು, ಹೀಗಾಗಿ ಅವರ ಸಹೋದರರು ಮತ್ತು ಕುಟುಂಬದ ಸದಸ್ಯ ರಿಂದ ಮಾಹಿತಿ ಪಡೆದ ಸಿಬಿಐ, ಕೆಲಹೊತ್ತು ವಿಚಾರಣೆಗೂ ಒಳಪಡಿಸಿತು ಎಂದು ತಿಳಿದುಬಂದಿದೆ.
ಬ್ರೂಸ್‌ಪೇಟೆ ಪೊಲೀಸ್ ಠಾಣೆಗೆ ವಿಶ್ವನಾಥ್ ಸಹೋದರನನ್ನು ಕರೆತಂದ ಪೊಲೀಸರು ವಾಲ್ಮೀಕಿ ಹಗರಣ ಸಂಬಂಧ ಪಾತ್ರದ ಬಗ್ಗೆ ಮಾಹಿತಿಯನ್ನು ಕಲೆ ಹಾಕಿದ್ದಾರೆ.
ಇನ್ನು ದಾಳಿ ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯಲ್ಲಿದ್ದ ಕೆಲವು ದಾಖಲೆಗಳನ್ನು ಸಿಬಿಐ ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.
ವಿಶ್ವನಾಥ್ ಅವರ ನಿವಾಸದಲ್ಲಿ ಶೋಧ ನಡೆಸಿದ ನಂತರ, ಸಿಬಿಐ ತಂಡವು ನಾಗೇಂದ್ರ ಅವರ ನಿವಾಸದಲ್ಲಿ ಈ ಹಿಂದೆ ಅಡುಗೆಯವರಾಗಿ ಕೆಲಸ ಮಾಡುತ್ತಿದ್ದ ಮಾರುತಿ ಅವರ ಮನೆಯ ಮೇಲೂ ದಾಳಿ ನಡೆಸಿತು.
ಪ್ರಕರಣಕ್ಕೆ ಸಂಬಂಧಿಸಿರಬಹುದಾದ ಹಣಕಾಸಿನ ವ್ಯವಹಾರಗಳು, ನಗದು ಚಲನೆ ಅಥವಾ ಸಭೆಗಳ ಬಗ್ಗೆ ಅವರಿಗೆ ಯಾವುದೇ ಮಾಹಿತಿ ಇದೆಯೇ ಎಂಬುದರ ಕುರಿತು ವಿಚಾರಣೆ ನಡೆಸಿತು ಎಂದು ತಿಳಿದುಬಂದಿದೆ.
ಮಹರ್ಷಿ ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಹೈಕೋರ್ಟ್ ಮಹತ್ವದ ಆದೇಶ ನೀಡಿತ್ತು.
ಸಿಬಿಐ ಈವರೆಗೆ ಬ್ಯಾಂಕ್ ವಿಚಾರಕ್ಕೆ ಸೀಮಿತವಾಗಿ ತನಿಖೆ ನಡೆಸುತ್ತಿತ್ತು. ಹೀಗಾಗಿ ಸಿಬಿಐನಿಂದ ಸಮಗ್ರ ತನಿಖೆ ಕೋರಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ ಜಾರಕಿಹೊಳಿ, ಮಾಜಿ ಶಾಸಕರಾದ ಅರವಿಂದ ಲಿಂಬಾವಳಿ ಮತ್ತು ಕುಮಾರ್ ಬಂಗಾರಪ್ಪ ಅವರು ರಿಟ್ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಶೇಷ ತನಿಖಾ ತಂಡದ(ಖಿ) ತನಿಖೆಯನ್ನು ರದ್ದುಗೊಳಿಸಿ, ಪ್ರಕರಣದ ಸಮಗ್ರ ತನಿಖೆಗೆ ನಡೆಸುವಂತೆ ಸಿಬಿಐಗೆ ಸೂಚಿಸಿತ್ತು.
ಇನ್ನು ಮಹರ್ಷಿ ವಾಲೀಕಿ ಅಭಿವೃದ್ಧಿ ನಿಗಮದ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು.
ಈ ಪ್ರಕರಣದಲ್ಲಿ ಹಣ ದುರುಪಯೋಗದ ಆರೋಪಗಳಿದ್ದು, ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಬ್ಯಾಂಕ್ ಮನವಿ ಮಾಡಿತ್ತು. ಆದರೆ, ಹೈಕೋರ್ಟ್ ಈ ಮನವಿಯನ್ನು ತಿರಸ್ಕರಿಸಿತ್ತು. ಬಳಿಕ ಬಿಜೆಪಿ ನಾಯಕರ ಅರ್ಜಿ ಪುರಸ್ಕರಿಸಿದ್ದ ಹೈಕೋರ್ಟ್, ಪ್ರಕರಣವನ್ನು ಸಿಬಿಐಗೆ ವಹಿಸಿತ್ತು.
Advertisement