

ಬೆಂಗಳೂರು: ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ಮಾದರಿಯಲ್ಲೇ ಬೆಂಗಳೂರಿನಲ್ಲಿ ಮತ್ತೊಂದು ವೃಕ್ಷೋದ್ಯಾನ ನಿರ್ಮಾಣಕ್ಕೆ ಸರ್ಕಾರದ ಸಿದ್ಧತೆ ನಡೆಸಿದ್ದು ಇದಕ್ಕಾಗಿ ಬೆಂಗಳೂರಿನ ಬೈಯಪ್ಪನಹಳ್ಳಿ ಬಳಿಯ ಎನ್.ಜಿ.ಇ.ಎಫ್ ನಲ್ಲಿ 65 ಎಕರೆ ಜಾಗ ಮೀಸಲಿರಿಸಲಾಗಿದೆ.
ಬೈಯ್ಯಪ್ಪನಹಳ್ಳಿಯಲ್ಲಿದ್ದ ಸರಕಾರಿ ಸ್ವಾಮ್ಯದ ಎನ್.ಜಿ.ಇ.ಎಫ್ ಕಾರ್ಖಾನೆಗೆ ಸೇರಿದ 119 ಎಕರೆ ಜಾಗದ ಪೈಕಿ 65 ಎಕರೆ ಜಾಗದಲ್ಲಿ ವೃಕ್ಷೋದ್ಯಾನ ಅಭಿವೃದ್ಧಿಪಡಿಸಲಾಗುವುದು. ಮಾರ್ಚ್ ತಿಂಗಳಲ್ಲಿ ಮೊದಲ ಹಂತವನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.
ಎಂಬಿ ಪಾಟೀಲ್ ಅವರು ಶನಿವಾರ ಎನ್.ಜಿ.ಇ.ಎಫ್. ಆವರಣಕ್ಕೆ ಭೇಟಿ ನೀಡಿ ವೃಕ್ಷೋದ್ಯಾನ ಕಾಮಗಾರಿಗಳನ್ನು ಪರಿಶೀಲಿಸಿದ್ದು, ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಜೊತೆಯಲ್ಲಿದ್ದರು.
8500 ಬಗೆಬಗೆಯ ಮರಗಳು
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂಬಿ ಪಾಟೀಲ್ ಅವರು, 'ವೃಕ್ಷೋದ್ಯಾನವನ್ನು ಹಂತ 1, 1ಎ, 1ಬಿ ಮತ್ತು 2 ಹೀಗೆ ನಾಲ್ಕು ಹಂತಗಳಲ್ಲಿ, 37.75 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. 1ಎ ಹಂತದ ಕಾಮಗಾರಿ ಕೂಡ ಮುಂದಿನ 6 ತಿಂಗಳಲ್ಲಿ ಮುಗಿಯಲಿದೆ.
ಒಟ್ಟಾರೆ ಈ ಜಾಗದಲ್ಲಿ ಈಗಾಗಲೇ 8,500 ಬಗೆಬಗೆಯ ಮರಗಳಿವೆ. ಇವುಗಳ ವೈಜ್ಞಾನಿಕ ಹೆಸರನ್ನು ಈಗ ಪ್ರದರ್ಶಿಸಲಾಗಿದೆ. ಇವುಗಳ ಪೈಕಿ ಒಂದೇ ಒಂದು ಮರವನ್ನೂ ನಾವು ಕಡಿಯುವುದಿಲ್ಲ. ಆದರೆ ಇಲ್ಲಿರುವ ನೀಲಗಿರಿ ಜಾತಿಯ ಮರಗಳನ್ನು ಏನು ಮಾಡಬೇಕೆಂದು ವೈಜ್ಞಾನಿಕವಾಗಿ ಪರಿಶೀಲಿಸಿ, ತೀರ್ಮಾನಿಸಲಾಗುವುದು. ಹಂತ-1ರ ಕಾಮಗಾರಿಗಳಿಗೆ ಅಗತ್ಯವಿದ್ದ 11.50 ಕೋಟಿ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದರು.
ಎನ್ ಜಿಇಎಫ್ ಆವರಣದಲ್ಲಿರುವ ಆಡಳಿತ ಕಚೇರಿ ಕಟ್ಟಡಗಳು, ಕೈಗಾರಿಕಾ ಶೆಡ್ ಗಳು ಕೂಡ ಸುಭದ್ರವಾಗಿವೆ. ಇವೆಲ್ಲವೂ ಗಟ್ಟಿಮುಟ್ಟಾಗಿವೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಪರೀಕ್ಷಿಸಿ ಹೇಳಿದ್ದಾರೆ. ಆದ್ದರಿಂದ ಈ ಕಟ್ಟಡಗಳಿಗೇ ಹೊಸ ರೂಪ ಕೊಟ್ಟು ಅಗತ್ಯಗಳನ್ನು ಪೂರೈಸಿಕೊಳ್ಳಲಾಗುವುದು. ಕಾಂಪೌಂಡಿನ ಹೊರಗೂ ಕಾರ್ಖಾನೆಗೆ ಸೇರಿದ 4.5 ಎಕರೆ ಜಾಗವಿದೆ. ಅಲ್ಲಿ 5ರಿಂದ 7 ಸಾವಿರ ವಾಹನಗಳ ನಿಲುಗಡೆಗೆ ಬಹುಮಹಡಿ ಪಾರ್ಕಿಂಗ್ ಲಾಟ್ ನಿರ್ಮಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಈಗಾಗಲೇ ಇರುವ ಎರಡು ಎಲೆಕ್ಟ್ರಿಕ್ ಮೋಟಾರ್ ಶೆಡ್ ಗಳಲ್ಲಿ ಕನಿಷ್ಠ 15 ಸಾವಿರ ಆಸನ ವ್ಯವಸ್ಥೆ ಇರುವ ಎರಡು ಪ್ರತ್ಯೇಕ ಕನ್ವೆನ್ಶನ್ ಸೆಂಟರ್ ನಿರ್ಮಿಸಲಾಗುವುದು. ಇಲ್ಲಿ ಸಮಾವೇಶ, ಸಮಾರಂಭ, ವಾರ್ಷಿಕೋತ್ಸವ, ಸಮ್ಮೇಳನ, ವಿಚಾರ ಸಂಕಿರಣ, ಕಾರ್ಯಕ್ರಮ ಇತ್ಯಾದಿಗಳನ್ನು ಮಾಡಬಹುದು. ಇದರ ಜೊತೆಗೆ `ಇನ್ನೋವರ್ಸ್’ ಹೆಸರಿನಲ್ಲಿ ನವೋದ್ಯಮಗಳಿಗೆ ಬೇಕಾದ ಪರಿಪೋಷಣಾ ಕೇಂದ್ರವನ್ನು ಸರಕಾರದ `ಕಿಟ್ಸ್’ ಸಂಸ್ಥೆಯ ವತಿಯಿಂದ ಸ್ಥಾಪಿಸಲಾಗುವುದು.
ಇಲ್ಲಿ ನವೋದ್ಯಮ ವಲಯದವರು ಬಂದು ಕೆಲಸವನ್ನೂ ಮಾಡಬಹುದು. ಜೊತೆಗೆ ಐಟಿ-ಬಿಟಿ ಇಲಾಖೆಯು ಇಲ್ಲಿ 100 ಕೋಟಿ ರೂ. ವೆಚ್ಚದಲ್ಲಿ `ಟೆಕ್ನಾಲಜಿ ಇನ್ನೋವೇಶನ್ ಮ್ಯೂಸಿಯಂ’ಅನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.
ಜಾಗತಿಕ ಮಟ್ಟದ ಶಿಲ್ಪಕಲೋದ್ಯಾನ
ವೃಕ್ಷೋದ್ಯಾನದಲ್ಲಿ ಜಾಗತಿಕ ಮಟ್ಟದ ಶಿಲ್ಪಕಲೋದ್ಯಾನ, ಎನ್ ಜಿಇಎಫ್ ವಸ್ತು ಸಂಗ್ರಹಾಲಯ ಕೂಡ ಇರಲಿವೆ. ಈ ಆವರಣದಲ್ಲಿ ಯಾವುದೇ ರೀತಿಯ ಮಾಲ್ ನಿರ್ಮಿಸುವುದಿಲ್ಲ. ಜೊತೆಗೆ ವೈವಿಧ್ಯಮಯ ಚಟುವಟಿಕೆಗಳನ್ನು ನಡೆಸಲು ಸುಸಜ್ಜಿತ ಆ್ಯಂಪಿ ಥಿಯೇಟರ್ ಕಟ್ಟಲಾಗುವುದು. ಇದರಿಂದ ನಗರದ ಪೂರ್ವ ಭಾಗದ ಜನರಿಗೆ ಅನುಕೂಲವಾಗಲಿದೆ.
ಇದು ಕಬ್ಬನ್ ಪಾರ್ಕ್ ಮತ್ತು ಲಾಲ್ ಬಾಗ್ ಗಿಂತ ಒಳ್ಳೆಯ ಹಸಿರು ತಾಣವಾಗಲಿದೆ. ಇಲ್ಲಿ ಪ್ರವೇಶ ದ್ವಾರಕ್ಕೆ ಬೇಕಾದ ಸ್ವಲ್ಪ ಜಾಗ ಮಾತ್ರ ನಮ್ಮ ಮೆಟ್ರೋ ಅಧೀನದಲ್ಲಿದೆ. ಈ ಸಂಬಂಧವಾಗಿ ಅವರೊಂದಿಗೆ ಮಾತನಾಡಿ, ಜಾಗವನ್ನು ಪಡೆದುಕೊಳ್ಳಲಾಗುವುದು ಎಂದು ಪಾಟೀಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಡಾ.ಜೆ. ರವಿಶಂಕರ್, ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ , ಮೂಲಸೌಕರ್ಯ ಇಲಾಖೆ ಕಾರ್ಯದರ್ಶಿ ವಿಶಾಲ್, ಐಟಿ ಬಿಟಿ ಇಲಾಖೆ ಕಾರ್ಯದರ್ಶಿ ಡಾ.ಎನ್.ಮಂಜುಳಾ, ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಜತೆಯಲ್ಲಿದ್ದರು.
ವೃಕ್ಷೋದ್ಯಾನದ ವಿಶೇಷಗಳು:
ಎನ್ ಜಿಇಎಫ್ ವೃಕ್ಷೋದ್ಯಾನವು ಹಂತ-1 ಪ್ರವೇಶ ದ್ವಾರದ ಪ್ಲಾಜಾ, ಎಲಿವೇಟೆಡ್ ವಾಕ್-ವೇ, ಸೈಕ್ಲಿಂಗ್ ಪಥ, ನೀರಿನ ಝರಿ/ಚಿಲುಮೆ/ಕಾರಂಜಿ, ಫುಡ್ ಕೋರ್ಟ್, ಮಕ್ಕಳು ಆಟವಾಡುವ ಜಾಗ, ಸಾಕುಪ್ರಾಣಿಗಳನ್ನು ಕರೆದುಕೊಂಡು ಬರುವ ಜಾಗ, ಶೌಚಾಲಯಗಳು ಮತ್ತು ಇನ್ನಿತರ ಮೂಲಸೌಕರ್ಯಗಳನ್ನು ಒಳಗೊಂಡಿದೆ ಎಂದು ಎಂ ಬಿ ಪಾಟೀಲ ಮಾಹಿತಿ ನೀಡಿದ್ದಾರೆ.
ಫೇಸ್ 1-ಬಿ ಅಡಿಯಲ್ಲಿ 26.23 ಕೋಟಿ ರೂ. ವಿನಿಯೋಗಿಸುತ್ತಿದ್ದೇವೆ. ಇದರ ಅಡಿಯಲ್ಲಿ ಮತ್ತಷ್ಟು ಎಲಿವೇಟೆಡ್-ವಾಕ್ ವೇಸ್, ವೀಕ್ಷಣಾ ಗೋಪುರ, ಮುಂಚಿನಿಂದಲೂ ಇರುವ ಆಡಳಿತ ವಿಭಾಗದ ನವೀಕರಣ, ಓಪನ್ ಆ್ಯಂಫಿ-ಥಿಯೇಟರ್ ಇವುಗಳನ್ನು ಅಭಿವೃದ್ಧಿ ಪಡಿಸಲಾಗುವುದು.
ಫೇಸ್-2ರಲ್ಲಿ ಎನ್ ಜಿಇಎಫ್ ಫ್ಯಾಕ್ಟರಿ ಇದ್ದಾಗ ಕಟ್ಟಿದ್ದ ಶೆಡ್ ಗಳನ್ನು ಸ್ಪೋರ್ಟ್ ಹಬ್, ಕಲೆ ಮತ್ತು ಸಂಸ್ಕೃತಿಗಳ ಕೇಂದ್ರ, ಸಮುದಾಯ ಭವನ ಮತ್ತು ಫುಡ್ ಕೋರ್ಟ್ ಇಷ್ಟನ್ನೂ ಸರಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಅವರು ನುಡಿದಿದ್ದಾರೆ.
Advertisement