

ಬೆಂಗಳೂರು: ಕಳೆದ ತಿಂಗಳು ಕೆಲಸ ಮುಗಿಸಿ ಪೇಯಿಂಗ್ ಗೆಸ್ಟ್ ವೊಂದಕ್ಕೆ ತೆರಳುತ್ತಿದ್ದ ವೈದ್ಯೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ 21 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಆರೋಪಿಯನ್ನು ರಾಕೇಶ್ ಎಂದು ಗುರುತಿಸಲಾಗಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಎಜಿಬಿ ಲೇಔಟ್‌ನಲ್ಲಿ ಡಿಸೆಂಬರ್ 16-17ರ ಮಧ್ಯರಾತ್ರಿ ಈ ಘಟನೆ ನಡೆದಿತ್ತು.
28 ವರ್ಷದ ವೈದ್ಯೆ ಆಸ್ಪತ್ರೆಯೊಂದರಲ್ಲಿ ಡ್ಯೂಟಿ ಮುಗಿಸಿ ಮಧ್ಯರಾತ್ರಿ 12.40ರ ಸುಮಾರಿಗೆ ಪಿಜಿಗೆ ಹಿಂತಿರುಗುತ್ತಿದ್ದಾಗ ಸ್ಕೂಟರ್ ನಲ್ಲಿ ಬಂದಿದ್ದ ಆರೋಪಿ, ವಿಳಾಸ ಕೇಳುವ ನೆಪದಲ್ಲಿ ವೈದ್ಯೆಯನ್ನು ಮಾತನಾಡಿಸಿದ್ದ. ನಂತರ ಸ್ಕೂಟರ್ ನಿಂದ ಇಳಿದು ಆಕೆಯ ಮೈ-ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ, ವೈದ್ಯೆ ಜೋರಾಗಿ ಕಿರುಚಾಟ ನಡೆಸಿದಾಗ ಅಲ್ಲಿಂದ ಆರೋಪಿ ಪರಾರಿ ಆಗಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಆಕೆಯ ದೂರಿನ ಆಧಾರದ ಮೇಲೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 74 (ಹೆಣ್ಣಿನ ಮೇಲೆ ದೌರ್ಜನ್ಯ ಅಥವಾ ಕ್ರಿಮಿನಲ್ ಬಲ) ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಆರೋಪಿಯನ್ನು ಗುರುತಿಸಿ, ಬಂಧಿಸಲಾಯಿತು ಎಂದು ಅವರು ಹೇಳಿದರು.
Advertisement