
ದೀರ್ಘಾವಧಿ ಸಿಎಂ ಆಗುವ ಮೂಲಕ ದಿವಂಗತ ದೇವರಾಜ ಅರಸು ಅವರ ದಾಖಲೆ ಸರಿಗಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇದೀಗ ಪೂರ್ಣಾವಧಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ನನಗೆ ಹೈಕಮಾಂಡ್ ಮೇಲೆ ಪೂರ್ಣ ವಿಶ್ವಾಸವಿದೆ. ಏನೇ ಆದರೂ ಹೈ ಕಮಾಂಡ್ ಎಲ್ಲವನ್ನೂ ತೀರ್ಮಾನ ಮಾಡುತ್ತದೆ. ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಸಿದ್ದರಾಮಯ್ಯ ಮತ್ತೆ ಪುನರುಚ್ಛರಿಸಿದರು. 'ನನಗೆ ದೇವರಾಜ ಅರಸು ದಾಖಲೆಯ ಬಗ್ಗೆ ಅರಿವು ಇರಲಿಲ್ಲ. ಯಾವ ದಾಖಲೆ ಮುರಿಯಬೇಕು ಎಂಬುದು ನನ್ನ ಗಮನದಲ್ಲಿ ಇರಲಿಲ್ಲ. ಜನರ ಆಶೀರ್ವಾದದಿಂದ ಎಲ್ಲವೂ ನಡೆದು ಹೋಗಿದೆ. ಇವತ್ತು ದೇವರಾಜ ಅರಸು ದಾಖಲೆ ಸರಿಗಟ್ಟಿದ್ದೇನೆ. ಇಲ್ಲಿವರೆಗಿನ ರಾಜಕೀಯ ತೃಪ್ತಿ ಕೊಟ್ಟಿದೆ. ನನ್ನ ರಾಜಕೀಯ ಜೀವನದಲ್ಲಿ ಶಾಸಕ, ಡಿಸಿಎಂ, ಸಿಎಂ ಎಲ್ಲ ಆದೆ, ದಾಖಲೆಯ ಬಜೆಟ್ ಕೂಡ ಮಂಡಿಸಿದೆ ಎಂದ ಸಂತಸ ವ್ಯಕ್ತಪಡಿಸಿದರು. ಸಿದ್ದರಾಮಯ್ಯರ ಪೂರ್ಣಾವಧಿ ಸಿಎಂ ಆಸೆ ಕುರಿತಂತೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ಒಳ್ಳೆಯದು ಆಗಲಿ. ನಾನು ಅವರಿಗೆ ಶುಭ ಹಾರೈಸುತ್ತೇನೆ. ಶುಭವಾಗಲಿ ಎಂದು ಆರೈಸಿದರು.
ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆ ವೇಳೆ ಫೈರಿಂಗ್ ನಿಂದ ಮೃತ ಕಾಂಗ್ರೆಸ್ ಕಾರ್ಯಕರ್ತನ ಕುಟುಂಬಕ್ಕೆ 25 ಲಕ್ಷ ರೂ ನಗದು ಪರಿಹಾರ ನೀಡಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ಗೆ ಹೊಸ ಸಂಕಷ್ಟ ಎದುರಾಗಿದ್ದು, ಸಚಿವನ ವಿರುದ್ಧ ಆದಾಯ ತೆರಿಗೆ ಇಲಾಖೆಗೆ ಹಿಂದೂ ಸಂಘಟನೆಗಳ ಮುಖಂಡ ತೇಜಸ್ ಗೌಡ ಲಿಖಿತ ದೂರು ಸಲ್ಲಿಸಿದ್ದಾರೆ. ಆದಾಯ ತೆರಿಗೆ ನಿಯಮಾವಳಿಗಳಂತೆ 2 ಲಕ್ಷ ರೂಗಿಂತ ಹೆಚ್ಚಿನ ನಗದನ್ನು ಯಾವುದೇ ರೂಪದಲ್ಲಿ ನೀಡುವಂತಿಲ್ಲ. ಆದರೂ ಓರ್ವ ಜನಪ್ರತಿನಿಧಿಯಾಗಿ 25 ಲಕ್ಷ ರೂ ನಗದನ್ನು ಪರಿಹಾರವಾಗಿ ನೀಡಿದ್ದಾರೆ. ಈ ಹಣದ ಮೂಲ ಯಾವುದು ಎಂದು ದೂರಿನಲ್ಲಿ ಪ್ರಶ್ನಿಸಿದ್ದಾರೆ. ಈ ಸಂಬಂಧ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು, ಮೃತ ಕಾಂಗ್ರೆಸ್ ಕಾರ್ಯಕರ್ತನ ಕುಟುಂಬಕ್ಕೆ ನೀಡಿದ ಹಣ ಮೂಲ ಕಾಂಗ್ರೆಸ್ ಪಕ್ಷದ್ದೋ, ಸರ್ಕಾರದ್ದೊ? ಐಟಿ ಇಲಾಖೆ ಏನು ಮಾಡುತ್ತಿದೆ ಎನ್ನುವ ಕುಮಾರಸ್ವಾಮಿ ಪ್ರಶ್ನಿಸಿದ್ದರು.
ಕರ್ನಾಟಕದ ವಿವಿಧ ಜಿಲ್ಲೆಗಳ ನ್ಯಾಯಾಲಯಗಳಿಗೆ ಒಂದೇ ದಿನ ಸರಣಿ ಬಾಂಬ್ ಬೆದರಿಕೆ ಸಂದೇಶಗಳು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಬಾಗಲಕೋಟೆ, ಮೈಸೂರು, ಗದಗ, ಧಾರವಾಡ ಹಾಗೂ ಹಾಸನ ಜಿಲ್ಲೆಯ ನ್ಯಾಯಾಲಯಗಳಿಗೆ ಇ-ಮೇಲ್ ಹಾಗೂ ಕರೆ ಮುಖಾಂತರ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಎಲ್ಲಾ ನ್ಯಾಯಾಲಯಗಳ ಕಲಾಪಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ನ್ಯಾಯಮೂರ್ತಿಗಳು, ವಕೀಲರು ಹಾಗೂ ಸಿಬ್ಬಂದಿಗಳು ಹೊರಗೆ ಕಳುಹಿಸಲಾಗಿತ್ತು. ಭದ್ರತಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು ಪೊಲೀಸರು ಶ್ವಾನ ದಳ, ಬಾಂಬ್ ಡಿಟೆಕ್ಟರ್‌ಗಳ ಮೂಲಕ ಶೋಧ ನಡೆಸಿದರು. ತನಿಖಾ ಇಲಾಖೆಗಳು ಹೈ ಅಲರ್ಟ್ ಆಗಿದ್ದು, ತನಿಖೆ ನಡೆಸುತ್ತಿವೆ. ಒಂದೇ ದಿನ ಸರಣಿ ಬಾಂಬ್ ಬೆದರಿಕೆಗಳು ಬಂದಿರುವುದು ಭದ್ರತಾ ಇಲಾಖೆಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಈ ಬೆದರಿಕೆಗಳ ಹಿಂದಿರುವವರ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
RSS ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹಾಗೂ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಗೆ ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಆರ್‌ಎಸ್‌ಎಸ್ ಸದಸ್ಯರಾದ ತೇಜಸ್ ಎಂಬುವರು ಸಲ್ಲಿಸಿದ ಖಾಸಗಿ ದೂರಿನ ಮೇರೆಗೆ ನ್ಯಾಯಾಲಯ ಮೂವರಿಗೆ ನೋಟಿಸ್ ಜಾರಿ ಮಾಡಿದ್ದು ಪ್ರಕರಣದ ವಿಚಾರಣೆಯನ್ನು ಜನವರಿ 14ಕ್ಕೆ ಮುಂದೂಡಿದೆ. ಆರ್‌ಎಸ್‌ಎಸ್ ನವರು ವಿಷಕಾರಿಗಳು ಅವರದೊಂದಿಗೆ ಸ್ನೇಹ ಮಾಡಬೇಡಿ, ಅವರು ಕುಟುಂಬದವರಾಗಿರಲಿ, ಸಹೋದರರಾಗಿರಲಿ, ತಂದೆ ಅಥವಾ ಮಗನಾಗಿರಲಿ. ಅವರು ವಿಷಕಾರಿಗಳು ಎಂದು ಪ್ರಿಯಾಂಕ್ ಖರ್ಗೆ ಪೋಸ್ಟ್ ಮಾಡಿದ್ದರು.
ಆನೇಕಲ್ ನಲ್ಲಿ ರಿಯಲ್ ಎಸ್ಟೇಟ್ ಡೆವಲಪರ್ ಪುರವಂಕರಗೆ ಇನ್ಫೋಸಿಸ್ ಸುಮಾರು 250 ಕೋಟಿ ರೂಪಾಯಿ ಮೌಲ್ಯದ 53.5 ಎಕರೆ ಭೂಮಿಯನ್ನು ಮಾರಾಟ ಮಾಡಿರುವ ಬಗ್ಗೆ ತನಿಖೆ ನಡೆಸಲು ಬೆಂಗಳೂರು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಇನ್ಫೋಸಿಸ್ ಗೆ ಸೇರಿದ ಭೂಮಿಯನ್ನು ಮಾರಾಟ ಮಾಡಿರುವ ಬಗ್ಗೆ ತನಿಖೆ ನಡೆಸಲು ಸೂಚಿಸಲಾಗಿದೆ. ತನಿಖೆಯ ಫಲಿತಾಂಶ ಬಂದ ನಂತರ ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ಐವರು ಉಪ ನೋಂದಣಾಧಿಕಾರಿಗಳು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಇವರಲ್ಲಿ ಒಬ್ಬರು ನಿವೃತ್ತರಾಗಿದ್ದಾರೆ. ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಎನ್. ಸತೀಶ್ ಕುಮಾರ್, ಆರ್. ಪ್ರಭಾವತಿಮ ಶ್ರೀಧರ್, ಗಿರೀಶ್ ಚಂದ್ರ ಅವರನ್ನು ಅಮಾನತು ಮಾಡಲಾಗಿದೆ.
Advertisement