

ಬೆಂಗಳೂರು: ಪೂರ್ವ ಬೆಂಗಳೂರಿನ ವೈಟ್‌ಫೀಲ್ಡ್ ಬಳಿ ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ಮಾಡಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಸಂತ್ರಸ್ತೆಯು ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕನ ಮಗಳು.
ಜನವರಿ 5 ರಂದು ಮಧ್ಯಾಹ್ನದಿಂದ ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ಬಾಲಕಿ ತಂದೆ ಜನವರಿ 6 ರಂದು ದೂರು ದಾಖಲಿಸಿದ್ದರು. ಹತ್ತಿರದಲ್ಲಿಯೇ ವಾಸಿಸುತ್ತಿದ್ದ ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕನೊಬ್ಬನ ಪಾತ್ರದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು.
ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಮನೆಯ ಮುಂದೆ ಬಾಲಕಿ ಆಟವಾಡುತ್ತಿದ್ದಳು. ಆ ಸಮೀಪದಲ್ಲಿ ಆ ವ್ಯಕ್ತಿ ಕಾಣಿಸಿಕೊಂಡಿದ್ದರಿಂದ ಆತನ ಪಾತ್ರದ ಬಗ್ಗೆ ತಂದೆಗೆ ಅನುಮಾನವಿತ್ತು.
ತಮ್ಮ ಮಗಳು ಕಾಣೆಯಾಗಿದ್ದಾಳೆಂದು ತಿಳಿದ ನಂತರ, ಕುಟುಂಬದವರು ಆಕೆಗಾಗಿ ಹುಡುಕಾಟ ನಡೆಸಿದ್ದಾರೆ ಮತ್ತು ನಂತರ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ನಂತರ ಬಾಲಕಿಯ ಶವ ಪಟ್ಟಂದೂರು ಅಗ್ರಹಾರದ ವಲಸೆ ಕಾಲೋನಿಯ ಹತ್ತಿರದ ಚರಂಡಿಯಲ್ಲಿ ಪತ್ತೆಯಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ ಬಾಲಕಿಯನ್ನು ಕತ್ತು ಹಿಸುಕಿ ಕೊಲ್ಲಲಾಗಿದೆ ಎಂದು ತೋರುತ್ತದೆ ಮತ್ತು ಲೈಂಗಿಕ ದೌರ್ಜನ್ಯದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಕೊಲೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ, ವೈಟ್‌ಫೀಲ್ಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಶಂಕಿತ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಕಾರ್ಯಾಚರಣೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement