ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಮಸೂದೆ ವಿರುದ್ಧ ರಾಷ್ಟ್ರಪತಿ ಬಳಿಗೆ ರಾಜ್ಯದ ನಿಯೋಗ!

ಮಲಯಾಳಂ ಭಾಷಾ ಮಸೂದೆಯು ಕೇರಳದ ಗಡಿ ಪ್ರದೇಶಗಳಲ್ಲಿ ವಾಸಿಸುವ ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾಗಿದೆ. ಕಾಸರಗೋಡಿನಲ್ಲಿ 7.5 ಲಕ್ಷ ಕನ್ನಡಿಗರಿದ್ದು, 210 ಕನ್ನಡ ಮಾಧ್ಯಮ ಶಾಲೆಗಳಿವೆ.
State Cabinet Casual Images
ರಾಜ್ಯ ಸಚಿವ ಸಂಪುಟ ಸಭೆ (ಸಾಂದರ್ಭಿಕ ಚಿತ್ರ)
Updated on

ಬೆಳಗಾವಿ: ಕಾಸರಗೋಡು ವಿಚಾರವಾಗಿ ಕರ್ನಾಟಕ ಹಾಗೂ ಕೇರಳ ರಾಜ್ಯಗಳ ನಡುವೆ ಮತ್ತೊಮ್ಮೆ ಭಾಷಾ ಸಮರ ಭುಗಿಲೆದ್ದಿದೆ. ಕಾಸರಗೋಡು ಜಿಲ್ಲೆಯ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಭಾಷೆಯನ್ನು ಕಡ್ಡಾಯವಾಗಿ, ಪ್ರಥಮ ಭಾಷೆಯಾಗಿ ಕಲಿಸಬೇಕೆಂಬ ಮಸೂದೆ ವಿರುದ್ಧ ಕರ್ನಾಟಕದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಇದು ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರ ಎಂದು ಟೀಕಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು, ವಿಧೇಯಕಕ್ಕೆ ಅನುಮೋದನೆ ನೀಡದಂತೆ ಒತ್ತಾಯಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ನೇತೃತ್ವದಲ್ಲಿ ಶೀಘ್ರವೇ ರಾಷ್ಟ್ರಪತಿ ಬಳಿಗೆ ನಿಯೋಗವೊಂದನ್ನು ಕರೆದೊಯ್ಯಲಾಗುವುದು ಎಂದು ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮಲಯಾಳಂ ಭಾಷಾ ಮಸೂದೆಯು ಕೇರಳದ ಗಡಿ ಪ್ರದೇಶಗಳಲ್ಲಿ ವಾಸಿಸುವ ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾಗಿದೆ. ಕಾಸರಗೋಡಿನಲ್ಲಿ 7.5 ಲಕ್ಷ ಕನ್ನಡಿಗರಿದ್ದು, 210 ಕನ್ನಡ ಮಾಧ್ಯಮ ಶಾಲೆಗಳಿವೆ. ಸಂವಿಧಾನದ 350ಬಿ ವಿಧಿಯ ನಿಬಂಧನೆಗಳ ಅಡಿ, ಕೇರಳ ಸರ್ಕಾರ ಕಳುಹಿಸಿರುವ ಮಸೂದೆಗೆ ಅನುಮೋದನೆ ನೀಡದಂತೆ ರಾಷ್ಟ್ರಪತಿಗಳನ್ನು ಒತ್ತಾಯಿಸುತ್ತೇವೆಂದು ಹೇಳಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಜತೆ ಮಾತುಕತೆ ನಡೆಸಿದ್ದೇವೆ. ಮಲಯಾಳಂ ಭಾಷಾ ಮಸೂದೆಗೆ ಅನುಮೋದನೆ ಕೊಡದಂತೆ ಕೇರಳ ರಾಜ್ಯಪಾಲರನ್ನು ಒತ್ತಾಯಿಸುತ್ತೇವೆ. ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾಗಿರುವ ಮಸೂದೆಯ ಕುರಿತು ಕೇರಳ ಮುಖ್ಯಮಂತ್ರಿಗೆ ಪತ್ರ ಬರೆಯುವಂತೆಯೂ ಕೇಳಲಾಗುವುದು. ಈ ನಿಟ್ಟಿನಲ್ಲಿ ಸಂಬಂಧಿತರೊಂದಿಗೆ ಚರ್ಚಿಸಲಾಗುವುದು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವೂ ಮಸೂದೆ ವಿರುದ್ಧ ಸರ್ಕಾರಕ್ಕೆ ಪತ್ರ ಬರೆದಿದೆ ಎಂದು ತಿಳಿಸಿದರು.

State Cabinet Casual Images
ಮಲಯಾಳಂ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್ಕೆ: ಕೇರಳ ಸಿಎಂಗೆ ಸಿದ್ದರಾಮಯ್ಯ ಪತ್ರ, ಪುನರ್ ಪರಿಶೀಲನೆಗೆ ಒತ್ತಾಯ

ಕೇರಳದಲ್ಲಿ ಅಧಿಕಾರದಲ್ಲಿರುವ ಎಲ್‌ಡಿಎಫ್ ಸರಕಾರ 20258 ಅಕ್ಟೋಬರ್ ರಂದು ವಿಧಾನಸಭೆಯಲ್ಲಿ 'ಮಲಯಾಳಂ ಭಾಷಾ ಮಸೂದೆ-2025'ನ್ನು ಅಂಗೀಕರಿಸಿದ್ದು, ಮಸೂದೆ ಈಗ ರಾಜ್ಯಪಾಲರ ಅಂಗೀಕಾರಕ್ಕಾಗಿ ಕಾಯುತ್ತಿದೆ.

ಪ್ರಸ್ತುತ ಕೇರಳ ರಾಜ್ಯದಲ್ಲಿ ಇಂಗ್ಲಿಷ್ ಮತ್ತು ಮಲಯಾಳಂ ಎರಡನ್ನೂ ಅಧಿಕೃತ ಭಾಷೆಗಳನ್ನಾಗಿ ಗುರುತಿಸಲಾಗಿದೆ. ಆದರೆ, ಈ ಮಸೂದೆ, ಮಲಯಾಳಂ ಅನ್ನು ಕೇರಳದ ಅಧಿಕೃತ ಭಾಷೆಯನ್ನಾಗಿ ಅಳವಡಿಸಿಕೊಳ್ಳಲು ಅನುವು ಮಾಡಿಕೊಡಲಿದ್ದು, ಸರ್ಕಾರ, ಶಿಕ್ಷಣ, ನ್ಯಾಯಾಂಗ, ಸಾರ್ವಜನಿಕ ಸಂವಹನ, ವಾಣಿಜ್ಯ ಮತ್ತು ಡಿಜಿಟಲ್ ಡೊಮೇನ್ ನಾದ್ಯಂತ ಅದರ ಬಳಕೆಯನ್ನು ಕಡ್ಡಾಯಗೊಳಿಸುತ್ತದೆ. ಇದರಿಂದಾಗಿ ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಲಿಕೆ ಕಡ್ಡಾಯವಾಗಲಿದೆ.

ಈ ಮೊದಲು, 2017ರಲ್ಲಿ ಕೇರಳ ಸರ್ಕಾರ ಮಲಯಾಳ ಭಾಷಾ ಮಸೂದೆ-2017ಯನ್ನು ಅಲ್ಲಿನ ವಿಧಾನಸಭೆಯಲ್ಲಿ ಅಂಗೀಕರಿಸಿತ್ತು. ಆದರೆ, 1963ರ ಅಧಿಕೃತ ಭಾಷಾ ಕಾಯ್ದೆಗೆ ವಿರುದ್ಧವಾದ ನಿಬಂಧನೆಗಳನ್ನು ಅದು ಒಳಗೊಂಡಿರುವುದರಿಂದ ಮಸೂದೆಗೆ ರಾಷ್ಟ್ರಪತಿ ಒಪ್ಪಿಗೆ ಸಿಕ್ಕಿರಲಿಲ್ಲ. ಕೇಂದ್ರ ಸರ್ಕಾರ ಕೂಡ ಇದಕ್ಕೆ ತನ್ನ ಆಕ್ಷೇಪ ವ್ಯಕ್ತಪಡಿಸಿತ್ತು. ಈಗ ಈ ದೋಷಗಳನ್ನು ತೆಗೆದು ಹಾಕಿ, ಹೊಸ ಮಸೂದೆಯನ್ನು ಅಂಗೀಕರಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com