

ಬೆಂಗಳೂರು: ಮಾಟಮಂತ್ರ, ವಶೀಕರಣಕ್ಕಾಗಿ ಮಾನವನ ತಲೆಬುರುಡೆ, ಉಡದ ಜನನಾಂಗ, ಹುಲಿ ಚರ್ಮವನ್ನು ಇರಿಸಿಕೊಂಡಿದ್ದ ಮಾಂತ್ರಿಕನೊಬ್ಬನನ್ನು ವನ್ಯಜೀವಿ (ರಕ್ಷಣೆ) ಕಾಯ್ದೆ, 1972 ರ ಅಡಿಯಲ್ಲಿ ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ)ದ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದಾರೆ.
ಜನವರಿ 9 ರಂದು ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಮಾಂತ್ರಿಕನನ್ನು ಬಂಧನಕ್ಕೊಳಪಡಿಸಿದ್ದಾರೆ. ಈತನಿಂದ 5 ಮಾನವ ತಲೆಬುರಡೆ, ಮಾನವ ದೇಹದ ಇತರೆ ಮೂಳೆ, ಹುಲಿ ಚರ್ಮ, ಇತರೆ ಪ್ರಾಣಿಗಳ ಚರ್ಮ, 206 ಉಡಗದ ಜನನಾಂಗ, ಹತ್ ಜೋಡಿಸ, 1.1 ಕೆಜಿ ಹವಳಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ. ಆರೋಪಿಯನ್ನು ಇದೀಗ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.
ಆರೋಪಿಯು ತಾನು ಮಾಂತ್ರಿಕತೆಯನ್ನು ಅಭ್ಯಾಸ ಮಾಡುವುದಾಗಿ, ಅದಕ್ಕಾಗಿ ನೆರೆಯ ರಾಜ್ಯದ ಸ್ಮಶಾನದಿಂದ ಮಾನವ ತಲೆಬುರುಡೆಗಳನ್ನು ತೆಗೆದುಕೊಂಡಿದ್ದೇನೆಂದು ಅಧಿಕಾರಿಗಳ ಬಳಿ ಹೇಳಿದ್ದಾನೆ. ‘ಹತ್ ಜೋಡಿ’ ಮತ್ತು ಸಾಫ್ಟ್ ಕೋರಲ್‌ಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಶೆಡ್ಯೂಲ್–I ಅಡಿಯಲ್ಲಿ ಸಂಪೂರ್ಣ ರಕ್ಷಿತ ವಸ್ತುಗಳಾಗಿವೆ.
ಖಚಿತ ಮಾಹಿತಿಯ ಆಧಾರದ ಮೇಲೆ ಡಿಆರ್'ಐ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಆರೋಪಿಯು ಈ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ತಡೆದು ಬಂಧನಕ್ಕೊಳಪಡಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿ ತನ್ನ ಮನೆಯಲ್ಲಿಯೂ ಇಂತಹ ಹಲವು ವಸ್ತುಗಳಿರುವುದಾಗಿ ಹಾಗೂ ಅವುಗಳಿಗೆ ಯಾವುದೇ ಪರವಾನಗಿ ಅಥವಾ ಅನುಮತಿ ಇಲ್ಲದಿರುವುದಾಗಿ ತಿಳಿಸಿದ್ದಾನೆಂದು ತಿಳಿದುಬಂದಿದೆ.
ಮಾಹಿತಿ ಆಧರಿಸಿ ಅಧಿಕಾರಿಗಳು ಆರೋಪಿಯ ಮನೆಯಲ್ಲೂ ಪರಿಶೀಲನೆ ನಡೆಸಿದ್ದು, ಹುಲಿ ಚರ್ಮವನ್ನೇ ಹೋಲುವ ಇತರೆ ಪ್ರಾಣಿಗಳ ಚರ್ಮ, ಅವುಗಳ ಕಾಲು, ಇತರೆ ಪ್ರಾಣಿಗಳ ಬಾಲ, ಐದು ಮಾನವ ಅಸ್ಥಿ ಪಂಜರದ ತಲೆಬುರುಡೆ ಹಾಗೂ ಮೂಳೆಗಳ ತುಂಡನ್ನು ವಶಪಡಿಸಿಕೊಂಡಿದ್ದಾರೆ. ಈ ಮೂಳೆಗಳನ್ನು ಮುಂದಿನ ಕ್ರಮಕ್ಕಾಗಿ ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಹತ್ ಜೋಡಿ’ ಮತ್ತು ಸಮುದ್ರ ಹವಳಗಳು ಸೇರಿದಂತೆ ವಶಪಡಿಸಿಕೊಂಡ ಹಲವಾರು ಇನ್ನಿತರೆ ವಸ್ತುಗಳು ವನ್ಯಜೀವಿಗಳದ್ದೇ ಆಗಿದೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳು ದೃಢಪಡಿಸಿದೆ.
ಇದೀಗ ಈತನ ವಿರುದ್ಧ ವನ್ಯಜೀವಿ (ರಕ್ಷಣೆ) ಕಾಯ್ದೆಯ ಹಲವಾರು ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವಶಪಡಿಸಿಕೊಂಡ ವನ್ಯಜೀವಿ ಉತ್ಪನ್ನಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಬನ್ನೇರುಘಟ್ಟ ಅರಣ್ಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement