

ಬೆಂಗಳೂರು: ಅಡುಗೆ ಅನಿಲ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಐವರು ಕಾರ್ಮಿ ಕರು ಗಾಯಗೊಂಡಿರುವ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.
ಅಂಶುರಾಜ್ ಚೌದರಿ (18), ಹುಸೇನ್ ಖಾನ್ (21), ಮುಜಾಫರ್‌ಹುಸೇನ್ (19), ಆರಬೇಗ್ ಆಲಂ (26) ಮತ್ತು ರೋಹಿತ್ ಚೌದರಿ(20) ಗಾಯಗೊಂಡ ಬಿಹಾರ ಮೂಲದ ಕಾರ್ಮಿಕರಾಗಿದ್ದಾರೆ.
ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯ ನೇತಾಜಿ ನಗರದ 3 ನೇ ಕ್ರಾಸ್‌ನಲ್ಲಿರುವ ಮನೆಯೊಂದರಲ್ಲಿ ಐವರು ಕಾರ್ಮಿಕರು ವಾಸವಿದ್ದರು. ಅಡುಗೆ ಅನಿಲ ಸೋರಿಕೆಯಾಗಿರುವುದನ್ನು ಗಮನಿಸದೆ ಶುಕ್ರವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಅಂಶುರಾಜ್ ಚೌದರಿ ಎಂಬುವವರು ಕರೆಂಟ್ ಸ್ವಿಚ್ ಆನ್ ಮಾಡಿದ ತಕ್ಷಣ ಸಿಲಿಂಡರ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಐವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಳಿಕ ಸ್ಥಳೀಯರು 112 ಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಐವರಿಗೆ ಮುಖ ಮತ್ತು ಕೈಗಳಿಗೆ ಸುಟ್ಟಗಾಯಗಳಾಗಿವೆ. ಚಿಕಿತ್ಸೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟದ ತೀವ್ರತೆಗೆ ಗೋಡೆ ಗಳು ಬಿರುಕು ಬಿಟ್ಟಿದ್ದು, ಮನೆಯಲ್ಲಿದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಪೀಣ್ಯ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
Advertisement