

ಬೆಂಗಳೂರು: ಕನ್ನಡದ ಖ್ಯಾತ ನಟಿ ಕಾರುಣ್ಯ ರಾಮ್ ತಮ್ಮ ಸ್ವಂತ ತಂಗಿಯ ವಿರುದ್ಧವೇ ದೂರು ನೀಡಿದ್ದು, ವಂಚನೆ ಪ್ರಕರಣ ದಾಖಲಿಸಿದ್ದಾರೆ. ಇದೀಗ ತಮ್ಮ ಈ ಕಠಿಣ ನಿರ್ಧಾರದ ಹಿಂದಿನ ಕಹಿ ಸತ್ಯಗಳನ್ನು ಸ್ವತಃ ಅವರೇ ಬಹಿರಂಗ ಪಡಿಸಿದ್ದಾರೆ.
ನಟಿ ಕಾರುಣ್ಯ ರಾಮ್ ಒಡಹುಟ್ಟಿದ ತಂಗಿ ವಿರುದ್ಧವೇ ದೂರು ಕೊಟ್ಟಿದ್ದು, 25 ಲಕ್ಷ ಹಣ ವಂಚನೆ ಮಾಡಿ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿ ಸ್ವಂತಕ್ಕೆ ಬಳಸಿಕೊಂಡಿರೋದಾಗಿ ದೂರಿದ್ದರು. ಇದೀಗ ಸ್ವಂತ ತಂಗಿ ಹಣವನ್ನು ಯಾವ ಕೆಲಸಕ್ಕೆ ವ್ಯರ್ಥ ಮಾಡಿದ್ದರು..? ತಂಗಿಯ ಯಾವ ಜಾಲದಲ್ಲಿ ಸಿಕ್ಕಾಕೊಂಡಿದ್ದರು ಎಂಬುದರ ಕುರಿತು ನಟಿ ಕಾರುಣ್ಯ ರಾಮ್ ಸ್ಪಷ್ಟನೆ ನೀಡಿದ್ದಾರೆ.
ಇದುವರೆಗೂ ಅನ್ನೋನ್ಯವಾಗಿದ್ದ ಸ್ಯಾಂಡಲ್‌ವುಡ್ ಸಹೋದರಿಯರು ಇದೀಗ ಕಳೆದ ಮೂರು ವರ್ಷಗಳಿಂದ ದೂರಾಗಿದ್ದು, ತಂಗಿ ಸಮೃದ್ಧಿ ರಾಮ್ ಸೇರಿದಂತೆ ಆಕೆಯ ಆಪ್ತರಾದ ಪ್ರತಿಭ, ಕಪಿಲ್, ಪ್ರಜ್ವಲ್, ರಕ್ಷಿತ್, ಸಾಗರ್ ಎಂಬವರ ಮೇಲೆ ದೂರು ದಾಖಲಿಸಿದ್ದಾರೆ. ಸಿಸಿಬಿ ಪೊಲೀಸರಿಗೆ ದೂರು ನೀಡಿರುವ ಕಾರುಣ್ಯ ರಾಮ್ ಹಿಂದೆ ಆರ್‌ಆರ್ ನಗರ ಪೊಲೀಸ್ ಠಾಣೆಗೂ ದೂರು ನೀಡಿದ್ದರು.
ಸರಣಿ ಪೋಸ್ಟ್: ನಟಿ ಕಾರುಣ್ಯ ರಾಮ್ ಕಣ್ಣೀರು
ನಟಿ ಕಾರುಣ್ಯರಾಮ್ ಸಹೋದರಿ ಸಮೃದ್ಧಿ ರಾಮ್ ಬೆಟ್ಟಿಂಗ್ ಆ್ಯಪ್ ಗೀಳಿಗೆ ಬಲಿಯಾಗಿ ಹಣ ಕಳೆದುಕೊಂಡ ಶಾಕಿಂಗ್ ವಿಚಾರವನ್ನು ವೀಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಬೆಟ್ಟಿಂಗ್ ಆ್ಯಪ್‌ನಿಂದ ಬೀದಿಗೆ ಬಿದ್ದ ಫ್ಯಾಮಿಲಿಯಲ್ಲಿ ನಮ್ಮದೂ ಒಂದು ಅಂತ ಹೇಳಿಕೊಳ್ಳೋಕೆ ಕಷ್ಟ ಆಗುತ್ತದೆ ಎಂದು ಕಾರುಣ್ಯರಾಮ್ ಭಾವುಕರಾದ್ರು. ಬೆಟ್ಟಿಂಗ್ ಜಾಲದಲ್ಲಿ ಹಣ ಕಳೆದುಕೊಂಡ ಸಮೃದ್ಧಿ ಸಾಲ ಮಾಡಿಕೊಂಡು ಪರಾರಿಯಾಗಿದ್ದು, ಇದೀಗ ಸಾಲಗಾರರು ತಮಗೆಗೆ ತೊಂದರೆ ಕೊಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
ಕಾರುಣ್ಯ ರಾಮ್ ಹೇಳಿದ್ದೇನು..?
'ಸಂಕ್ರಾಂತಿ ಹಬ್ಬದ ದಿನ ಈ ಥರ ವೀಡಿಯೋ ಮಾಡೋ ಪರಿಸ್ಥಿತಿ ಬರುತ್ತೆ ಅಂತ ಅನ್ಕೊಂಡಿರಲಿಲ್ಲ. ನನ್ನ 3 ವರ್ಷದ ದುಃಖವನ್ನು ಯಾರ್ ಹತ್ರಾನೂ ಶೇರ್ ಮಾಡಿಕೊಳ್ಳಲು ಆಗದೆ ನನ್ನೊಳಗೆ ನಾನು ಇಟ್ಕೊಂಡು ಹೋರಾಡ್ತಾ ಇದ್ದೆ. ನನ್ನ ಜೊತೆ ನನ್ನ ತಂದೆ-ತಾಯಿ ಸೇರಿ ಮೂವರೂ ಹೋರಾಡ್ತಾ ಇದ್ದೇವೆ. ಬೆಟ್ಟಿಂಗ್ ಆ್ಯಪ್‌ನಿಂದ ಎಷ್ಟೋ ಫ್ಯಾಮಿಲಿ ಒದ್ದಾಡಿವೆ. ನನ್ನ ಫ್ಯಾಮಿಲಿನೂ ಒಂದು ಅಂತ ಹೇಳೋಕೆ ಕಷ್ಟ ಆಗುತ್ತಿದೆ. ನನ್ನ ತಂಗಿ ನಮ್ಮಿಂದ ಬೇರೆಯಾಗಿ 3 ವರ್ಷ ಆಗಿದೆ. ಯಾರದ್ದೋ ಸಂಪರ್ಕದಿಂದ ಅವಳು ಒದ್ದಾಡಿ ಅವಳೂ ಹೊರ ಬರೋಕೆ ಆಗದೆ, ಮನೆಯಿಂದಲೂ ಹೊರಗೆ ಹೋಗಿರುತ್ತಾಳೆ. ಸಹವಾಸ ದೋಷದಿಂದ ಹೀಗಾಗಿದೆ ಅಂತ ಹೇಳ್ತೀನಿ ಎಂದು ಕಾರುಣ್ಯ ಹೇಳಿದ್ದಾರೆ.
ಅಂತೆಯೇ 'ಸ್ನೇಹಿತರಿಂದ ಹೀಗಾಗಿದೆ ಅಂತ ತಿಳಿದ ಬಳಿಕ ಆಕೆಯನ್ನು ನಾವು ಕೇಳ್ದಾಗ ನಮಗೆ ಗೊತ್ತಾಯ್ತು. ನಾನು ಇಂಡಸ್ಟ್ರಿಯಲ್ಲಿ ಇಷ್ಟು ವರ್ಷ ಹೆಸರು ಕಾಪಾಡಿಕೊಂಡು ಬಂದಿದ್ದೆ. ಅಪ್ಪ ಸರ್ಕಾರಿ ನಿವೃತ್ತ ಅಧಿಕಾರಿ. ಒಂದು ಬೆಟ್ಟಿಂಗ್ ಆ್ಯಪ್ ಮಾರಿಗೆ ನಮ್ಮ ಕುಟುಂಬ ಬಲಿಯಾಯ್ತು. ಎಲ್ಲಾರೂ ಕೇಳ್ತಿದ್ರು ಯಾಕೆ ನೀವಿಬ್ರೂ ಜೊತೆಯಾಗಿ ಇಲ್ಲ ಅಂತ. ಆದರೆ, ನಾವು ಜೊತೆಯಲ್ಲೇ ಇರಲಿಲ್ಲ.
ಇದನ್ನ ನನ್ನ ತಂದೆ-ತಾಯಿಗೆ ತಿಳಿಸದೆ ತಂಗಿ ಹೀಗೆಲ್ಲಾ ಮಾಡ್ತಿದ್ಲು. ಹೊತ್ತಿಲ್ಲದ ಹೊತ್ತಲ್ಲಿ ಮೆಸೇಜ್ ಕಾಲ್ ಎಲ್ಲಾ ಬರೋದು. ಇದೆಲ್ಲಾ ಅತಿರೇಕಕ್ಕೆ ಹೋದಾಗ ಅವರನ್ನೆಲ್ಲಾ ಬ್ಲಾಕ್ ಮಾಡಿದೀನಿ, ಇಗ್ನೋರ್ ಮಾಡಿದೀನಿ. ಎಷ್ಟೋ ಮಂದಿ ಮಾಧ್ಯಮದ ಸ್ನೇಹಿತರೊಂದಿಗೂ ನನ್ನ ಕಷ್ಟ ಹೇಳಿಕೊಂಡಿದ್ದೆ. ಇಷ್ಟು ದಿವಸ ಆ ನೋವು ಹಿಂಸೆಯಲ್ಲೇ ನಾನು ನನ್ನ ತಂದೆ-ತಾಯಿ ಇದ್ವಿ. ಇದು ಅತಿರೇಕಕ್ಕೆ ಹೋದಾಗ ನಾನು ಪೊಲೀಸ್ ಕಂಪ್ಲೆಂಟ್ ಕೊಟ್ಟಿದ್ದೀನಿ. ನನಗೆ ನ್ಯಾಯ ಬೇಕು. ನನಗೆ ನನ್ನ ತಂದೆ-ತಾಯಿಗೂ ನೆಮ್ಮದಿ ಬೇಕು'.
ಬೆಟ್ಟಿಂಗ್ ಆ್ಯಪ್ ಮಾರಿನ ಯಾರೂ ಪ್ರಮೋಟ್ ಮಾಡಬೇಡಿ. ಇದಕ್ಕೆ ಸಪೋರ್ಟ್ ಮಾಡೋ ವ್ಯಕ್ತಿಗಳು ಸುತ್ತಮುತ್ತ ಇದ್ದುಕೊಂಡು ಫ್ಯಾಮಿಲಿಯನ್ನೇ ಡೆಸ್ಟ್ರಾಯ್ ಮಾಡ್ತಿದ್ದಾರೆ. ನಾನು ಮಾನಸಿಕವಾಗಿ ಕುಗ್ಗಿದ್ರೆ, ತಂದೆ-ತಾಯಿ ನೋಡ್ಕೊಳ್ಳೋವ್ರು ಯಾರು ಅನ್ನೋದನ್ನ ಗಮನಸಿ ಕಂಪ್ಲೇಟ್ ಕೊಟ್ಟಿದ್ದೀನಿ. ಇದರಲ್ಲಿ ಯರ‍್ಯಾರು ಇದ್ದಾರೆ ಅಂತ ಕೂಲಂಕುಶವಾಗಿ ಗಮನಿಸಿ ಕಂಪ್ಲೆಂಟ್ ಕೊಟ್ಟಿದ್ದೀನಿ. ಇದರಲ್ಲಿ ಯಾರದ್ದೋ ವೈಯಕ್ತಿಕ ಹೆಸರನ್ನ ತೆಗೆದುಕೊಳ್ಳಬೇಕು ಅನ್ನೋ ಉದ್ದೇಶ ಇರಲಿಲ್ಲ. ಎಲ್ಲಾ ಸ್ಕ್ರೀನ್‌ಶಾಟ್ ಸಬ್ಮಿಟ್ ಮಾಡಿದ್ದೀನಿ. ನಾನು ಎಲ್ಲರಿಗೂ ರಿಕ್ವೆಸ್ಟ್ ಮಾಡ್ತೀನಿ.
ಬೆಟ್ಟಿಂಗ್‌ನಿಂದ ಎಷ್ಟೋ ಫ್ಯಾಮಿಲಿ ಛಿದ್ರ ಛಿದ್ರ ಆಗಿದೆ. ಇವತ್ತು ನಾನು ತಂಗಿನ ಕಳೆದುಕೊಂಡಿದ್ದೀನಿ. ಮೂರು ವರ್ಷದಿಂದ, ನನ್ನ ತಂದೆ-ತಾಯಿ ಮಗಳನ್ನ ಕಳೆದುಕೊಂಡಿದ್ದಾರೆ. ದೈಹಿಕವಾಗಿ ಇದ್ರೂ ಮಾನಸಿಕವಾಗಿ ನಮ್ಮ ಜೊತೆಗಿಲ್ಲ ನನ್ನ ತಂಗಿ. ನಮ್ಮ ಕುಟುಂಬಕ್ಕೆ ಆಗಿರುವಂತೆ ಬೇರೆ ಯಾರಿಗೂ ಆಗಬಾರದು. ನನಗೆ ನ್ಯಾಯ ಬೇಕು. ನನಗೆ ಯಾರ‍್ಯಾರೋ ಬ್ಯಾಡ್ ಕಮೆಂಟ್ ಮಾಡ್ತಾರೆ, ತೊಂದರೆ ಕೊಡ್ತಿದ್ದಾರೆ. ಅವರ ವಿರುದ್ಧ ದೂರು ಕೊಟ್ಟಿದ್ದೇನೆ. ಇದನ್ನ ಹೇಳುವ ಪರಿಸ್ಥಿತಿ ಹಬ್ಬದ ದಿನ ಬಂದಿರೋದು ಬೇಸರ. ಮೂರು ವರ್ಷಗಳಿಂದ ಇದ್ದ ನೋವನ್ನ ಇವತ್ತು ಹೊರ ಹಾಕಿದ್ದೀನಿ ಎಂದು ಕಾರುಣ್ಯ ರಾಮ್ ಕಣ್ಣೀರು ಹಾಕುತ್ತಾ ಹೇಳಿದ್ದಾರೆ.
Advertisement