

ಬೆಂಗಳೂರು: ನಗರದಲ್ಲಿ ಹುಡುಗರ ರೀತಿ ವೇಷಧರಿಸಿಕೊಂಡು ಕಳ್ಳತನ ಮಾಡುತ್ತಿದ್ದ ಇಬ್ಬರು ಖತರ್ನಾಕ್ ಕಳ್ಳಿಯರನ್ನು ಪೊಲೀಸರು ಬಂಧಿಸಿದ್ದಾರೆ.
ಜನವರಿ13 ರಂದು ಬೆಂಗಳೂರಿನ ಸಂಪಿಗೇಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಮಹಿಳೆಯರು ಪುರುಷರ ರೀತಿ ವೇಷಧರಿಸಿಕೊಂಡು ಮನೆಗಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾರೆ. ಮಹಿಳೆಯರ ಕೃತ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಜನವರಿ 13 ರಂದು ಆಟೋ ಚಾಲಕ ಸಂಗಮೇಶ್ ಎಂಬುವವರ ಮನೆಯಲ್ಲಿ ದರೋಡೆ ನಡೆದಿತ್ತು. ಅವರು ಮನೆಯಲ್ಲಿ ಇಲ್ಲದಿದ್ದಾಗ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದಾರೆ.
ಆಟೋ ಚಾಲಕ ಮನೆಗೆ ಹಿಂದಿರುಗಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿತು. ನಂತರ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ
ಮಹಿಳೆಯರ ಕಳ್ಳತನದ ಕೃತ್ಯ ಮನೆಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತನಿಖೆಯ ಸಮಯದಲ್ಲಿ, ಆರೋಪಿಗಳು ಕಳ್ಳತನ ಮಾಡುತ್ತಿರುವುದನ್ನು ತೋರಿಸುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅವನಲ್ಲ.. ಅವಳು
ಇನ್ನು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳನ್ನು ವಶಕ್ಕೆ ಪಡೆದ ವೇಳೆ ಅದು ಹುಡುಗರಲ್ಲ, ಹುಡುಗಿಯರು ಎನ್ನುವುದು ಪತ್ತೆಯಾಗಿದೆ. ಕಳ್ಳತನ ಎಸಗಿದ ಶಾಲು ಮತ್ತು ನೀಲು ಎಂಬುವವರನ್ನು ಬಂಧಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಇಬ್ಬರು ಆರೋಪಿಗಳು ಟ್ಯಾನರಿ ರಸ್ತೆಯ ನಿವಾಸಿಗಳಾಗಿದ್ದು ಹುಡುಗರ ರೀತಿ ಪ್ಯಾಂಟ್ ಶರ್ಟ್, ಟೋಪಿ ಹಾಕಿಕೊಂಡು ಬೈಕಿನಲ್ಲಿ ಓಡಾಡುತ್ತಿದ್ದರು. ನಿರ್ಜನ ಪ್ರದೇಶದ ಮನೆಗಳಲ್ಲಿ ಹಾಡುಹಗಲೇ ಕಳ್ಳತನ ಮಾಡುತ್ತಿದ್ದರು. ಸದ್ಯ ಇಬ್ಬರನ್ನು ಬಂಧಿಸಿ ಪೊಲೀಸರು ಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ.
ಸಿಸಿಟಿವಿಯಲ್ಲಿ ಪೊಲೀಸರ ಕಣ್ತಪ್ಪಿಸಲು ಕಳ್ಳಿಯರು ಪುರುಷರ ರೀತಿ ವೇಷಧರಿಸಿ ಕಳ್ಳತನ ಮಾಡುತ್ತಿದ್ದರು ಎಂದು ಹೇಳಲಾಗಿದೆ. ನಂತರ ತನಿಖಾಧಿಕಾರಿಗಳು ಅಪರಾಧಕ್ಕೆ ಸಂಬಂಧಿಸಿದ ದ್ವಿಚಕ್ರ ವಾಹನ ನೋಂದಣಿ ಸಂಖ್ಯೆಯನ್ನು ಪತ್ತೆಹಚ್ಚಿ ಕಳ್ಳಿಯರು ಪತ್ತೆ ಮಾಡಿ ಬಂಧಿಸಿದ್ದಾರೆ.
ನಗರದಲ್ಲಿ ಇದೇ ರೀತಿಯ ಇತರ ಕಳ್ಳತನ ಪ್ರಕರಣಗಳಿಗೆ ಅವರು ಸಂಬಂಧ ಹೊಂದಿದ್ದಾರೆಯೇ ಎಂದು ನಿರ್ಧರಿಸಲು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement