ಜನಾರ್ಧನ ರೆಡ್ಡಿ ಮಾಡೆಲ್ ಹೌಸ್‌ಗೆ ಬೆಂಕಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ರೀಲ್ಸ್ ಮಾಡಲು ಹೋಗಿ ಬೆಂಕಿ ಹಚ್ಚಿದ್ರಾ ಹುಡುಗರು..?
ಬಳ್ಳಾರಿ: ಗಂಗಾವತಿ ಶಾಸಕ ಜನಾರ್ಧನ ರೆಡ್ಡಿಗೆ ಸೇರಿದ ಮಾಡೆಲ್ ಹೌಸ್ ಅಗ್ನಿ ಅವಘಡ ಪ್ರಕರಣಕ್ಕೆ ಭಾರೀ ತಿರುವು ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 6 ಅಪ್ರಾಪ್ತರು ಸೇರಿ ಒಟ್ಟು 8 ಮಂದಿಯನ್ನು ಬಳ್ಳಾರಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಬಳ್ಳಾರಿಯ ಕೌಲ್‌ಬಜಾರ್ ಪ್ರದೇಶದ ನಿವಾಸಿಗಳಾದ 8 ಜನರನ್ನು ವಶಕ್ಕೆ ಪಡೆಯಲಾಗಿದ್ದು, ಸಾಮಾಜಿಕ ಜಾಲತಾಣಗಳಿಗಾಗಿ ರೀಲ್ಸ್ ಮಾಡುತ್ತಿರುವ ವೇಳೆ ಅಜಾಗರೂಕತೆಯಿಂದ ಅಥವಾ ದುರುದ್ದೇಶದಿಂದ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಪ್ರತಿಕ್ರಿಯೆ ನೀಡಿರುವ ಬಳ್ಳಾರಿಯ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ್ ಅವರು, ಮನೆ ಹಲವು ವರ್ಷಗಳಿಂದ ಪಾಳು ಬಿದ್ದಿದೆ. ಮನೆಯಲ್ಲಿ ಕಸ ಬಿದ್ದಿದೆ, ಗಾಜುಗಳು ಪುಡಿಯಾಗಿವೆ. ಇಲ್ಲಿ ಯಾರೂ ವಾಸವಿಲ್ಲ. ಸಿಸಿಟಿವಿಯೂ ಇಲ್ಲ. ಭದ್ರತೆಗೆಂದು ಭದ್ರತಾ ಸಿಬ್ಬಂದಿಯನ್ನೂ ಇಲ್ಲಿ ನಿಯೋಜಿಸಿಲ್ಲ ಎಂಬುದು ಕಂಡು ಬಂದಿದೆ ಎಂದು ಹೇಳಿದ್ದಾರೆ.
ಅಗ್ನಿ ಅವಘಡ ಪ್ರಕರಣದ ತನಿಖೆಯಲ್ಲಿ ನಾವು ಈಗಾಗಲೇ ಒಂದು ಹಂತಕ್ಕೆ ತಲುಪಿದ್ದೇವೆ. ನಮಗೆ ಅನುಮಾನ ಇದ್ದ 8 ಮಂದಿಯನ್ನು ಬಂದಿಸಿದ್ದೇವೆ. ಇದರಲ್ಲಿ 6 ಮಂದಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರಿದ್ದಾರೆ. ಇದರಲ್ಲಿ ಹಲವರು ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಾಗಿದ್ದು, ಕೆಲವರು ಶಾಲೆ ಬಿಟ್ಟವರಿದ್ದಾರೆ. ಫ್ಯಾನ್ಸಿ ಸ್ಟೋರ್‌ಗಳಲ್ಲಿ ಕೆಲಸ ಮಾಡುವವರಾಗಿದ್ದಾರೆ. ಇಬ್ಬರು ಮುಂಬೈನಿಂದ ಬಂದವರೂ ಇದ್ದಾರೆ. ಇವರೆಲ್ಲರೂ ಕೂಲಿ ಕಾರ್ಮಿಕರ, ಚಾಲಕರ ಮಕ್ಕಳು. ಯಾವುದೇ ಉದ್ದೇಶ ಇಟ್ಟುಕೊಂಡು ಈ ಕೃತ್ಯ ಮಾಡಿರುವ ಬಗ್ಗೆ ನಮಗೆ ಖಚಿತವಾಗಿಲ್ಲ. ಆದರೂ ನಾವು ಯಾವುದೇ ಸಾಧ್ಯತೆಗಳನ್ನು ಅಲ್ಲಗೆಳೆಯುವುದಿಲ್ಲ. ಸಮಗ್ರ ತನಿಖೆ ಮಾಡುತ್ತೇವೆಂದು ತಿಳಿಸಿದ್ದಾರೆ.
‘ರೀಲ್ಸ್, ಫೋಟೊ ಶೂಟ್ ಮಾಡಲು ಹುಡುಗರ ಗುಂಪು ಈ ಮನೆಗೆ ಆಗಾಗ ಬರುತ್ತಿತ್ತು. ಬೇರೆ ಬೇರೆಯವರೂ ಇಲ್ಲಿಗೆ ಬಂದು ಹೋಗುತ್ತಿದ್ದರು. ಬಂಧಿತರ ಮೊಬೈಲ್ ಪರಿಶೀಲನೆಯಿಂದ ಇದೆಲ್ಲವೂ ಗೊತ್ತಾಗಿದೆ. ಇದಕ್ಕೆ ಪೂರಕವಾಗಿ ಮನೆಯಲ್ಲಿ ಸಿಗರೇಟ್ ತುಣುಕುಗಳು, ಬೆಂಕಿಪೊಟ್ಟಣಗಳು ಅಲ್ಲಲ್ಲಿ ಬಿದ್ದಿರುವುದು ಕಂಡುಬಂದಿದೆ. ಗುಂಪಿನಲ್ಲಿದ್ದ ಬಾಲಕನೊಬ್ಬ ಮನೆಯಲ್ಲಿದ್ದ ವಸ್ತುವೊಂದಕ್ಕೆ ಬೆಂಕಿ ಹೊತ್ತಿಸಿದ್ದಾನೆ. ಆದರೆ, ಬೆಂಕಿ ನಿಯಂತ್ರಣಕ್ಕೆ ಬಾರದೆ ಇಡೀ ಮನೆಗೆ ವ್ಯಾಪಿಸಿದೆ. ಇನ್ನೂ ಆಳವಾಗಿ ತನಿಖೆ ಮಾಡುತ್ತೇವೆ. ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸುತ್ತೇವೆ. ವಿಧಿ ವಿಜ್ಞಾನ ತಜ್ಞರು ಸಾಕ್ಷಿ ಸಂಗ್ರಹ ಕೆಲಸ ಇಂದು ಆರಂಭಿಸಿದ್ದಾರೆಂದು ಮಾಹಿತಿ ನೀಡಿದರು.
ಇದೇ ವೇಳೆ ದೂರಿನಲ್ಲಿ ಹೇಳಿರುವುದಂತೆ ಯಾವುದೇ ವಸ್ತುಗಳು ಮನೆಯಲ್ಲಿದ್ದ ಇದ್ದ ಕುರುಹುಗಳು ನಮಗೆ ಸಿಕ್ಕಿಲ್ಲ. ಮನೆಯಲ್ಲಿ ಈ ಹಿಂದೆ ವಸ್ತುಗಳಿದ್ದಿರಬಹುದು. ಅದನ್ನು ಕದ್ದುಕೊಂಡು ಹೋಗಿರುವ ಸಾಧ್ಯತೆಗಳಿವೆ. ಆದರೆ, ಈಗಂತೂ ಯಾವುದೇ ವಸ್ತುಗಳು ಸಿಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.
ಮಾಡೆಲ್ ಹೌಸ್ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಪತ್ನಿಗೆ ಸೇರಿದ್ದು ಎನ್ನಲಾಗಿದೆ. ಜಿ ಸ್ಕ್ವೇರ್ ಲೇಔಟ್‌ನಲ್ಲಿರುವ ಈ ಆಸ್ತಿ ಒಟ್ಟು 109 ಎಕರೆ ವ್ಯಾಪ್ತಿಯ ಲೇಔಟ್‌ನ ಭಾಗವಾಗಿದೆ. ಈ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿರುವುದರ ಹಿಂದೆ ಕಾಂಗ್ರೆಸ್ ಬೆಂಬಲಿಗರ ಕೈವಾಡವಿದೆ ಎಂಬ ಗಂಭೀರ ಆರೋಪಗಳು ಶುಕ್ರವಾರ ಕೇಳಿಬಂದಿದ್ದವು.
ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ, ಹಿಂದಿನ ಬ್ಯಾನರ್ ಗಲಾಟೆ ಸಂದರ್ಭದಲ್ಲೇ ಬೆಂಕಿ ಹಚ್ಚುವ ಬೆದರಿಕೆ ಹಾಕಲಾಗಿತ್ತು. ಅದಕ್ಕೆ ಸಾಕ್ಷಿ ಎಂಬಂತೆ ಈಗ ಈ ಘಟನೆ ನಡೆದಿದೆ ಎಂದು ಆರೋಪಿಸಿದ್ದಾರೆ.
ಈ ಪ್ರಕರಣವು ಮುಂದಿನ ದಿನಗಳಲ್ಲಿ ರಾಜಕೀಯ ವಲಯದಲ್ಲಿ ಮತ್ತಷ್ಟು ಅಲ್ಲೋಲಕಲ್ಲೋಲ ಸೃಷ್ಟಿಸುವ ಸಾಧ್ಯತೆ ಇದೆ. ಸದ್ಯ ಪೊಲೀಸರು ವಶಕ್ಕೆ ಪಡೆದವರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ಘಟನೆ ಬೆನ್ನಲ್ಲೇ ಬಿಜೆಪಿ ತೀವ್ರ ಪ್ರತಿಭಟನೆ ನಡೆಸಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಎಲ್ಲೆಡೆ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ ಎಂದು ತಿಳಿದುಬಂದಿದೆ.

