

ಬೆಂಗಳೂರು: ಸಚಿವ ಬೈರತಿ ಸುರೇಶ್ ವಿರುದ್ಧ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಅವರು ನೀಡಿರುವ ಅವಹೇಳನ ಹೇಳಿಕೆ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದು, ಸುರೇಶ್ ಕುಮಾರ್ ಅವರ ನಿವಾಸಕ್ಕೆ ಪೋಸ್ಟರ್ ಅಂಟಿಸಿ ಶನಿವಾರ ಪ್ರತಿಭಟನೆ ನಡೆಸಿದ್ದಾರೆ.
ರಾಜಾಜಿನಗರದಲ್ಲಿರುವ ಸುರೇಶ್ ಕುಮಾರ್ ಅವರ ಮನೆಯ ಮುಂದೆ ಶನಿವಾರ ಬೆಳಿಗ್ಗೆ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು, ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು. ಮನೆಯ ಗೋಡೆಗಳಿಗೆ ಪೋಸ್ಟರ್‌ಗಳನ್ನು ಅಂಟಿಸಿದರು.
ಶುಕ್ರವಾರ ವಿಧಾನಸಭೆಯಲ್ಲಿ ಸುರೇಶ್ ಕುಮಾರ್ ನಗರಾಭಿವೃದ್ಧಿ ಮತ್ತು ಪಟ್ಟಣ ಯೋಜನಾ ಸಚಿವ ಬೈರತಿ ಸುರೇಶ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ.
ಈ ಸಂಬಂಧ ಶಾಸಕ ಸುರೇಶ್ ಕುಮಾರ್ ಅವರ ಕಾರು ಚಾಲಕ ಪುನೀತ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಶಂಕರ್, ಮಂಜು, ನವೀನ್ ಮತ್ತು ಸಾಯಿ ಎಂಬ ನಾಲ್ವರನ್ನು ಬಂಧನಕ್ಕೊಳಪಡಿಸಿದ್ದಾರೆ. ನಾಲ್ವರೂ ಬಸವೇಶ್ವರನಗರದ ನಿವಾಸಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಗೆ ಕುರಿತು ಪ್ರತಿಕ್ರಿಯಿಸಿದ ಸುರೇಶ್ ಕುಮಾರ್ ಅವರು, ನಾನು ಬಳಸಿದ ಪದವು ಅವಹೇಳನಕಾರಿಯಾಗಿದ್ದು, ಅದನ್ನು ಸದನದ ಕಡತದಿಂದ ತೆಗೆದುಹಾಕಲಾಗಿದೆ. ಸದನದಲ್ಲೇ ಹೇಳಿಕೆ ಬಗ್ಗೆ ವಿಷಾದವನ್ನೂ ವ್ಯಕ್ತಪಡಿಸಿದ್ದೇನೆ. ಇದರೊಂದಿಗೆ ಈ ಅಧ್ಯಾಯ ಮುಕ್ತಾಯಗೊಂಡಿದೆ ಎಂದು ಹೇಳಿದ್ದಾರೆ.
Advertisement