

ಬೆಂಗಳೂರು: ATMಗೆ ತುಂಬಬೇಕಿದ್ದ 1.3 ಕೋಟಿಗೂ ಅಧಿಕ ಹಣವನ್ನು ಸಿಬ್ಬಂದಿಯೇ ದೋಚಿ ಪರಾರಿಯಾಗಿದ್ದಾರೆ. 80 ಅಡಿ ರಸ್ತೆಯಲ್ಲಿರುವ ಕೋರಮಂಗಲದ ಆಕ್ಸಿಸ್ ಬ್ಯಾಂಕ್ ಶಾಖೆಯಲ್ಲಿ ಈ ಲೂಟಿ ಘಟನೆ ನಡೆದಿದೆ. ಈ ಸಂಬಂಧ ಜನವರಿ 19 ರಂದು ಏಳು ಸಿಬ್ಬಂದಿ ವಿರುದ್ಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.
ಮಹಿಳೆ ಸೇರಿದಂತೆ ಏಳು ಆರೋಪಿಗಳು ಹಿಟಾಚಿ ಪೇಮೆಂಟ್ ಸರ್ವಿಸಸ್ ಲಿಮಿಟೆಡ್‌ನ ಉದ್ಯೋಗಿಗಳಾಗಿದ್ದು, ನಗರದಾದ್ಯಂತ ವಿವಿಧ ಎಟಿಎಂಗಳಲ್ಲಿ ಹಣವನ್ನು ತುಂಬಲು ಅವರನ್ನು ನಿಯೋಜಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಗಳು ಬ್ಯಾಂಕ್‌ನಿಂದ ಹಣವನ್ನು ಸಂಗ್ರಹಿಸಿದ್ದಾರೆ. ಆದರೆ ಅದರಲ್ಲಿ ಒಂದು ಭಾಗವನ್ನು ಎಟಿಎಂ ಯಂತ್ರಗಳಿಗೆ ಜಮಾ ಮಾಡದೆ. ಅದನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡು 1 ಲಕ್ಷದಿಂದ 2 ಲಕ್ಷದವರೆಗೆ ಕದ್ದಿದ್ದಾರೆ.
ಕಂಪನಿಯ ಆಂತರಿಕ ತನಿಖೆಯ ಪ್ರಕಾರ ಏಪ್ರಿಲ್ 2024 ಮತ್ತು ಜೂನ್ 2025 ರ ನಡುವೆ ಈ ವಂಚನೆ ನಡೆದಿದ್ದು, ದೂರು ದಾಖಲಿಸಲಾಗಿದೆ. ಪ್ರವೀಣ್, ಧನಶೇಖರ್, ಹರೀಶ್ ಕುಮಾರ್ ಮತ್ತು ರಾಮಕ್ಕ ವಿರುದ್ಧ 57,96,400 ರೂ. ಹರೀಶ್ ಕುಮಾರ್, ಪ್ರವೀಣ್ ಮತ್ತು ವರುಣ್ ವಿರುದ್ಧ 80,49,000 ರೂ.ಗಳನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.
ಎರಡು ಪ್ರಕರಣಗಳನ್ನು BNS ನ ಸೆಕ್ಷನ್ 316 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ) ಮತ್ತು 318 (ವಂಚನೆ) ಅಡಿಯಲ್ಲಿ ದಾಖಲಿಸಲಾಗಿದೆ. ದುರುಪಯೋಗ ಮತ್ತಿತರ ವಿವರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement