

ಬೆಂಗಳೂರು: ಭ್ರಷ್ಟ ಅಧಿಕಾರಿಗಳ ವಿರುದ್ಧ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ದಾಳಿ ಮುಂದುವರೆಸಿದ್ದು 4 ಲಕ್ಷ ರೂ ಲಂಚ ಪಡೆವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಹೈಡ್ರಾಮಾ ಮಾಡಿದ್ದಾರೆ.
ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು 4 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಚೀಟಿ ವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬರನ್ನು ಕೇಸ್‌ನಲ್ಲಿ ಸಿಕ್ಕಿಸುವುದಾಗಿ ಬೆದರಿಸಿ ಇನ್ಸ್‌ಪೆಕ್ಟರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಮೈಸೂರು ರಸ್ತೆಯ ಸಿಐಆರ್ ಗ್ರೌಂಡ್ ಬಳಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ಇದರಲ್ಲಿ 1 ಲಕ್ಷ ರೂಪಾಯಿ ಈಗಾಗಲೇ ಪಡೆದುಕೊಂಡಿದ್ದರು. ಉಳಿದ 4 ಲಕ್ಷ ರೂಪಾಯಿ ಸ್ವೀಕರಿಸುವಾಗ ಟ್ರ್ಯಾಪ್ ಆಗಿದ್ದು, ಧನರಾಜ್ ಎಂಬುವವರು ನೀಡಿದ ದೂರಿನನ್ವಯ ಈ ಕಾರ್ಯಾಚರಣೆ ನಡೆಸಲಾಗಿದೆ.
ರಂಪಾಟದ ವಿಡಿಯೋ ವೈರಲ್
ಚಾಮರಾಜಪೇಟೆಯ ಸಿಎಆರ್ (CAR) ಮೈದಾನದಲ್ಲಿ ನಡೆದ ಈ ಟ್ರ್ಯಾಪ್ ವೇಳೆ ಇನ್ಸ್‌ಪೆಕ್ಟರ್ ಗೋವಿಂದರಾಜು ಲೋಕಾಯುಕ್ತ ಪೊಲೀಸರ ವಿರುದ್ಧವೇ ಕೂಗಾಡಿ ರಂಪಾಟ ನಡೆಸಿದ ಘಟನೆ ನಡೆದಿದೆ. ರಂಪಾಟ ನಡೆಸಿದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಏನಿದು ಪ್ರಕರಣ?
ಈ ಪ್ರಕರಣವು ಹಣ ಹೂಡಿಕೆಗೆ ಸಂಬಂಧಿಸಿದ ವಂಚನೆ ಪ್ರಕರಣದ್ದಾಗಿದ್ದು, ಧನರಾಜ್ ಎಂಬುವವರು ಕೆ.ಪಿ.ಅಗ್ರಹಾರ ಠಾಣೆಗೆ ದೂರು ನೀಡಿದ್ದರು. ಹಣ ಹೂಡಿಕೆ ಮಾಡಿದರೆ ಲಾಭ ಬರುತ್ತದೆ ಎಂದು ನಂಬಿಸಿ ಸೂರಜ್, ಸುಜನ್ ಮತ್ತು ಶ್ರೀನಿವಾಸ್ ಎಂಬುವವರು ಧನರಾಜ್ ಅವರಿಂದ 19 ಲಕ್ಷ ರೂಪಾಯಿ ಪಡೆದು ವಂಚಿಸಿದ್ದರು. ಹಣ ವಾಪಸ್ ಕೇಳಿದಾಗ ಆರೋಪಿಗಳು ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದರು. ಈ ಸಂಬಂಧ ಜನವರಿ 22 ರಂದು ಕೆ.ಪಿ. ಅಗ್ರಹಾರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಸೂರಜ್ ಮತ್ತು ಸುಜನ್ ಮನೆಗೆ ಇನ್ಸ್‌ಪೆಕ್ಟರ್ ಗೋವಿಂದರಾಜು ನೇತೃತ್ವದ ತಂಡ ತೆರಳಿತ್ತು. ಈ ವೇಳೆ ಪೊಲೀಸರು ಮತ್ತು ಆರೋಪಿಗಳ ನಡುವೆ ಗಲಾಟೆ ನಡೆದಿತ್ತು. ಬಳಿಕ ಠಾಣೆಯಲ್ಲಿ ಪ್ರಕರಣವನ್ನು ಡೀಲ್ ಮಾಡಲು ಮುಂದಾದ ಇನ್ಸ್‌ಪೆಕ್ಟರ್ ಗೋವಿಂದರಾಜು, ಬಡ್ಸ್ ಕಾಯ್ದೆಯಡಿ ದಾಖಲಾಗಿರುವ ಕೇಸ್‌ನಿಂದ ಬಿಡಿಸಲು ಮತ್ತು ಬಂಧಿಸದಿರಲು 5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಇನ್ಸ್ ಪೆಕ್ಟರ್ 'ಲೋಕಾ' ಬಲೆಗೆ ಬಿದ್ದಿದ್ದೇ ರೋಚಕ
ಆರೋಪಿಗಳ ಕಡೆಯವರಾದ ಮೊಹಮ್ಮದ್ ಅಕ್ಬರ್ ಎಂಬುವವರು ನೀಡಿದ ದೂರಿನನ್ವಯ ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್ ಈ ಕಾರ್ಯಾಚರಣೆ ನಡೆಸಿದ್ದರು. ದೇವರಾಜು ನೇತೃತ್ವದಲ್ಲಿ ಟ್ರ್ಯಾಪ್ ಪ್ಲಾನ್ ಮಾಡಲಾಗಿತ್ತು. ಇನ್ಸ್‌ಪೆಕ್ಟರ್ ಗೋವಿಂದರಾಜು ಈಗಾಗಲೇ 1 ಲಕ್ಷ ರೂಪಾಯಿ ಲಂಚ ಪಡೆದಿದ್ದರು. ಹೀಗಾಗಿ ಉಳಿದ 4 ಲಕ್ಷ ರೂಪಾಯಿ ಪಡೆಯಲು ಚಾಮರಾಜಪೇಟೆಯ ಸಿಎಆರ್ ಮೈದಾನಕ್ಕೆ ಬಂದಿದ್ದರು. ಇದಕ್ಕೂ ಮೊದಲೇ ಲೋಕಾಯುಕ್ತ ಅಧಿಕಾರಿಗಳು ಅಲ್ಲಿಗೆ ಬಂದಿದ್ದರು. ಇದಾವುದರ ಪರಿವೇ ಇಲ್ಲದೇ ಇನ್ಸ್‌ಪೆಕ್ಟರ್ ಗೋವಿಂದರಾಜು 4 ಲಕ್ಷ ರೂ ಹಣ ಸ್ವೀಕರಿಸುತ್ತಿದ್ದಂತೆಯೇ ಲೋಕಾಯುಕ್ತ ಪೊಲೀಸರು ಸುತ್ತುವರಿದು ಬಂಧಿಸಿದರು.
ಮೈದಾನದಲ್ಲೇ ರಂಪಾಟ
ಲೋಕಾಯುಕ್ತ ಪೊಲೀಸರು ತನ್ನನ್ನು ಹಿಡಿಯುತ್ತಿದ್ದಂತೆಯೇ ಇನ್ಸ್‌ಪೆಕ್ಟರ್ ಗೋವಿಂದರಾಜು ಕೂಗಾಡಲು ಶುರು ಮಾಡಿದರು. "ನಾನು ನಿಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿಲ್ಲ ಸರ್" ಎಂದು ಜೋರಾಗಿ ಕಿರುಚುತ್ತಾ ಹೈಡ್ರಾಮಾ ಸೃಷ್ಟಿಸಿದರು. ಆದರೆ ಲೋಕಾಯುಕ್ತ ಪೊಲೀಸರು ಇನ್ಸ್‌ಪೆಕ್ಟರ್ ಅನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
"ಪ್ರಿವೆನ್ಷನ್ ಆಫ್ ಕರಪ್ಷನ್ ಆ್ಯಕ್ಟ್ ಅಡಿ ನಾವು ಟ್ರ್ಯಾಪ್ ಮಾಡಿದ್ದೇವೆ. ಕೆ.ಪಿ. ಅಗ್ರಹಾರ ಇನ್ಸ್‌ಪೆಕ್ಟರ್ ಗೋವಿಂದರಾಜು ಅವರು 5 ಲಕ್ಷ ಹಣ ಡಿಮ್ಯಾಂಡ್ ಮಾಡಿದ್ದರು. ಉಳಿದ 4 ಲಕ್ಷ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ಈ ಪ್ರಕರಣದಲ್ಲಿ ಇನ್ನು ಕೆಲವು ಅಧಿಕಾರಿಗಳ ಭಾಗಿಯಾಗಿರುವ ಸಾಧ್ಯತೆಯಿದ್ದು, ತನಿಖೆ ನಡೆಸುತ್ತಿದ್ದೇವೆ" ಎಂದು ಎಸ್‌ಪಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.
Advertisement