'ಶಾಲಾ ಬಸ್‌ನಲ್ಲಿ ಪ್ರಯಾಣಿಸುವ ಮಕ್ಕಳ ಸುರಕ್ಷತೆ ಶಾಲೆಯ ಜವಾಬ್ದಾರಿ': ಹೈಕೋರ್ಟ್, ಮದ್ದೂರು ತಾಲ್ಲೂಕಿನ ದಿವ್ಯಜ್ಯೋತಿ ಶಾಲೆ ವಿರುದ್ಧ ತನಿಖೆಗೆ ಆದೇಶ

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ದಿವ್ಯಜ್ಯೋತಿ ಶಾಲೆ ಆಡಳಿತ ಮಂಡಳಿಯ ವಿರುದ್ಧ ದಾಖಲಾದ ಕ್ರಿಮಿನಲ್ ಪ್ರಕರಣದ ತನಿಖೆಗೆ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ.
High court
ಹೈಕೋರ್ಟ್
Updated on

ಬೆಂಗಳೂರು: ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ದಿವ್ಯಜ್ಯೋತಿ ಶಾಲೆ ಆಡಳಿತ ಮಂಡಳಿಯ ವಿರುದ್ಧ ದಾಖಲಾದ ಕ್ರಿಮಿನಲ್ ಪ್ರಕರಣದ ತನಿಖೆಗೆ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ.

ನಾಲ್ಕನೇ ತರಗತಿಯ ವಿದ್ಯಾರ್ಥಿಯೊಬ್ಬ ಶಾಲಾ ಬಸ್‌ನಲ್ಲಿ ಮನೆಗೆ ಹಿಂದಿರುಗುವ ವೇಳೆ ಕೆಲವು ಮಕ್ಕಳು ಹಾರಿಸಿದ ಕಾನ್ಫೆಟ್ಟಿ ಗ್ಲಿಟರ್ ಕಣ್ಣಿಗೆ ಬಿದ್ದ ಪರಿಣಾಮ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದು, ದೇಹದ ಒಟ್ಟು ಸಾಮರ್ಥ್ಯದ ಶೇ.40ರಷ್ಟು ಅಂಗವೈಕಲ್ಯ ಬಾಲಕನಿಗೆ ಉಂಟಾಗಿದೆ ಎಂದು ಆರೋಪಿಸಲಾಗಿತ್ತು.

ಈ ಸಂಬಂಧ ಶಾಲೆಯ ವಿರುದ್ಧ ದಾಖಲಾಗಿದ್ದ ಗಂಭೀರ ನಿರ್ಲಕ್ಷ್ಯದ ಪ್ರಕರಣವನ್ನು ರದ್ದುಗೊಳಿಸುವಂತೆ ಶಾಲಾ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ತಳ್ಳಿಹಾಕಿದರು.

ಶಾಲಾ ಬಸ್ ಎನ್ನುವುದು ಶಾಲೆಯ ಭಾಗವೇ ಆಗಿದ್ದು, ಅದರ ಚಟುವಟಿಕೆಯ ವಿಸ್ತರಣೆ ಆಗಿದೆ. ಶಾಲೆಯಿಂದ ಹೊರಟ ಮಗು ತನ್ನ ಮನೆಯವರೆಗೆ, ಅದು ಕೊನೆಯ ನಿಲ್ದಾಣವಾಗಿದ್ದರೂ ಸಹ, ಸುರಕ್ಷಿತವಾಗಿ ತಲುಪುವ ಹೊಣೆಗಾರಿಕೆಯಿಂದ ಶಾಲೆ ಕೈತೊಳೆದುಕೊಳ್ಳಲು ಸಾಧ್ಯವಿಲ್ಲ. ಕಾನೂನಿನಲ್ಲಿ ನಿಗದಿಪಡಿಸಿರುವ ಕರ್ತವ್ಯಗಳನ್ನು ಪಾಲಿಸುವ ಜವಾಬ್ದಾರಿಯಿಂದ ಶಾಲೆಗಳು ಹಿಂದೆ ಸರಿಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

High court
ಪತಿಗಿಂತ ಹೆಚ್ಚು ಸಂಪಾದಿಸುವ ಪತ್ನಿಗೆ ಜೀವನಾಂಶ ನೀಡಬೇಕಿಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ

ತಾಯಿಯ ಆರೋಪ

2025ರ ಆಗಸ್ಟ್ 1ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಯ ತಾಯಿ ಸೆಪ್ಟೆಂಬರ್ 5, 2025ರಂದು ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತಮ್ಮ ದೂರಿನಲ್ಲಿ, ಈ ದುರ್ಘಟನೆ ಮತ್ತೊಬ್ಬ ಮಗುವಿನ ಪ್ರತ್ಯೇಕ ಕೃತ್ಯದಿಂದ ಮಾತ್ರ ಸಂಭವಿಸಿದ್ದಲ್ಲ. ಶಾಲಾ ಬಸ್‌ನಲ್ಲಿ ಸಮರ್ಪಕ ಮೇಲ್ವಿಚಾರಣೆ ಒದಗಿಸದಿರುವುದು, ಬಸ್‌ನಲ್ಲಿ ಅಟೆಂಡರ್ ನ್ನು ನಿಯೋಜಿಸದಿರುವುದು ಹಾಗೂ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳದಿರುವ ಶಾಲಾ ಆಡಳಿತದ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಆರೋಪಿಸಿದ್ದರು.

ಶಾಲೆಯ ವಾದ ತಿರಸ್ಕರಿಸಿದ ನ್ಯಾಯಾಲಯ

ಶಾಲೆಯ ಪರ ವಕೀಲರು, ಶಾಲಾ ಸಮಯದ ನಂತರ ಬಸ್‌ನಲ್ಲಿ ನಡೆದ ಮತ್ತೊಬ್ಬ ವಿದ್ಯಾರ್ಥಿಯ ಕೃತ್ಯಕ್ಕೆ ಆಡಳಿತ ಮಂಡಳಿಯನ್ನು ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ. ಬಸ್‌ನಲ್ಲಿ ಅಟೆಂಡರ್ ಇದ್ದರು ಎಂದು ವಾದಿಸಿದರು.

ಆದರೆ ಈ ವಾದವನ್ನು ನ್ಯಾಯಾಲಯ ಒಪ್ಪಲಿಲ್ಲ. ಶಾಲಾ ಆಡಳಿತದ ಹೊಣೆಗಾರಿಕೆ ಎಷ್ಟರ ಮಟ್ಟಿಗೆ ಇದೆ ಎಂಬುದು ತನಿಖೆ ಪೂರ್ಣಗೊಂಡ ನಂತರವೇ ಸ್ಪಷ್ಟವಾಗುತ್ತದೆ. ಆದ್ದರಿಂದ ಈ ಹಂತದಲ್ಲಿ ತನಿಖೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಶಾಲೆಗಳ ಹೊಣೆಗಾರಿಕೆ ಎಂದರೇನು ಎಂದು ವಿವರಿಸಿದ ನ್ಯಾಯಾಲಯ

ಕರ್ನಾಟಕ ಶಿಕ್ಷಣ ಸಂಸ್ಥೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಪಠ್ಯಕ್ರಮ ನಿಗದಿಪಡಿಸುವಿಕೆ ಮುಂತಾದವು) (ತಿದ್ದುಪಡಿ) ನಿಯಮಗಳು, 2018 ಪ್ರಕಾರ, ಶಾಲಾ ಸಾರಿಗೆ ಸೇರಿದಂತೆ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನ್ಯಾಯಾಲಯ ನೆನಪಿಸಿದೆ.

ಶಾಲಾ ಬಸ್‌ನಲ್ಲಿ ಪ್ರಯಾಣಿಸುವ ಮಗುವಿನ ಸುರಕ್ಷತೆ ಶಾಲೆಯ ಜವಾಬ್ದಾರಿಯಾಗಿದೆ. ಮಗು ಮನೆ ತಲುಪುವವರೆಗೆ, ಅದು ಕೊನೆಯ ನಿಲ್ದಾಣವಾಗಿದ್ದರೂ ಸಹ, ಶಾಲೆ ತನ್ನ ಹೊಣೆಗಾರಿಕೆಯಿಂದ ಹಿಂದೆ ಸರಿಯಲು ಸಾಧ್ಯವಿಲ್ಲ. ಕಾನೂನು ವಿಧಿಸಿರುವ ಕರ್ತವ್ಯಗಳನ್ನು ಶಾಲೆಗಳು ಉಲ್ಲಂಘಿಸುವಂತಿಲ್ಲ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com