

ಇಂದಿನ ಕಾರ್ಪೊರೇಟ್ ಶೈಲಿನ ಉದ್ಯೋಗದಲ್ಲಿ ಹೆಚ್ಚಿನ ಸಂಬಳದ ಉದ್ಯೋಗವನ್ನು ಪಡೆಯಲು ಬಹುತೇಕ ಯುವ ಐಟಿ ಪದವೀಧರರು ಉತ್ಸುಕರಾಗಿರುವ 25ನೇ ವಯಸ್ಸಿನಲ್ಲಿ, ಐಐಟಿ ಪದವೀಧರೆ ಹಾಗೂ ಡೇಟಾ ಸೈಂಟಿಸ್ಟ್ ಸ್ನೇಹಾ ಪ್ರಿಯಾ ಅವರು, ಹೆಚ್ಚಿನ ವೇತನದ ಉದ್ಯೋಗದ ಅವಕಾಶವನ್ನು ತಿರಸ್ಕರಿಸಿ ಬೆಂಗಳೂರಿನಲ್ಲೇ ಉಳಿಯುವ ನಿರ್ಧಾರ ಕೈಗೊಂಡಿದ್ದಾರೆ.
ಕಡಿಮೆ ಸಂಬಳವಿದ್ದರೂ ಗುರ್ಗಾಂವ್‌ಗಿಂತ ಬೆಂಗಳೂರನ್ನೇ ಆಯ್ಕೆ ಮಾಡಿಕೊಂಡ ಕಾರಣವನ್ನು ವಿವರಿಸಿದರು. ಬೆಂಗಳೂರು ನನಗೆ ಸುರಕ್ಷಿತ ಭಾವನೆ ನೀಡುತ್ತದೆ. ಇದು ನನ್ನ ಮನೆಯಂತೆಯೇ ಅನಿಸುತ್ತದೆ. ಎಷ್ಟೇ ಹಣ ಕೊಟ್ಟರೂ ಆ ಭಾವನೆಯನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಸ್ನೇಹಾ ಪ್ರಿಯಾ ಅವರು 2023ರಲ್ಲಿ ಐಐಟಿ ರೂರ್ಕೆಲಾದಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. ಬಳಿಕ ಮೊದಲ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದ ಅವರು, ಕೆಲವೇ ದಿನಗಳಲ್ಲಿ ಈ ನಗರದ ಮೇಲೆ ಅಭಿಮಾನ ಬೆಳೆಸಿಕೊಂಡರು.
ಇಲ್ಲಿನ ವಾತಾವರಣ ನನಗೆ ತುಂಬಾ ಇಷ್ಟ. ಜನರು ತುಂಬಾ ಒಳ್ಳೆಯವರು. ಸಮಯ ಕಳೆಯಲು ಸಾಕಷ್ಟು ಅವಕಾಶಗಳಿವೆ ಎನ್ನುತ್ತಾರೆ.
ಆದರೆ, ಅವರಿಗೆ ಇಷ್ಟವಾಗದ ಒಂದು ವಿಷಯವೆಂದರೆ ಅವರ ಮೊದಲ ಉದ್ಯೋಗ. ಕಾಲೇಜಿನ ನಾಲ್ಕು ವರ್ಷಗಳು ತುಂಬಾ ಸಂತೋಷದಿಂದ ಕಳೆದವು. ಆದರೆ ಕಾರ್ಪೊರೇಟ್ ಜಗತ್ತಿಗೆ ಕಾಲಿಟ್ಟ ನಂತರ ಪರಿಸ್ಥಿತಿ ಸಂಪೂರ್ಣ ಬದಲಾಗುತ್ತದೆ ಎಂದು ಅವರು ಹೇಳಿದರು.
ಮೊದಲ ಉದ್ಯೋಗದಲ್ಲಿ ಉತ್ತಮ ಕೆಲಸದ ವಾತಾವರಣ ಇರಲಿಲ್ಲ. ಇದರಿಂದ ಅವರು ಮಾನಸಿಕ ಒತ್ತಡ ಅನುಭವಿಸಲು ಆರಂಭಿಸಿದರು.
ಈ ವರ್ಷದ ಜನವರಿಯಲ್ಲಿ ಸ್ನೇಹಾ ಹೊಸ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಆರಂಭಿಸಿದರು. ನನಗೆ ಉತ್ತಮ ಸಂಸ್ಥೆಯಲ್ಲಿ, ಉತ್ತಮ ಕೆಲಸದ ವಾತಾವರಣವಿರುವ ಉದ್ಯೋಗ ಬೇಕಿತ್ತು. ಕಲಿಯಲು, ಬೆಳೆಯಲು ಮತ್ತು ನನ್ನ ಇತರ ಆಸಕ್ತಿಗಳಿಗೂ ಸಮಯ ನೀಡಲು ಸಾಧ್ಯವಾಗುವ ಸ್ಥಿರ ಹಾಗೂ ಸುರಕ್ಷಿತ ವಾತಾವರಣವನ್ನು ನಾನು ಬಯಸಿದ್ದೆ ಎಂದು ಅವರು ಹೇಳಿದರು.
ವೃತ್ತಿಪರ ಗಾಯಕಿಯೂ ಆಗಿರುವ ಸ್ನೇಹಾ, ಕಚೇರಿ ಕೆಲಸದ ನಂತರ ಸಂಗೀತಾಭ್ಯಾಸಕ್ಕೂ ಸಮಯ ಮೀಸಲಿಡುತ್ತಾರೆ.
32 ಲಕ್ಷದ ಪ್ಯಾಕೇಜ್
ಏಪ್ರಿಲ್‌ನಲ್ಲಿ ಅವರಿಗೆ ವರ್ಷಕ್ಕೆ 32 ಲಕ್ಷ ರೂಪಾಯಿ ಪ್ಯಾಕೇಜ್ ಬರುವ ವೇತನದೊಂದಿಗೆ ಪ್ರತಿಷ್ಠಿತ ಕಂಪನಿಯಿಂದ ಉದ್ಯೋಗದ ಆಫರ್ ಬಂದಿತು. ಸೇರ್ಪಡೆ ಬೋನಸ್, ಸ್ಥಳಾಂತರ ಭತ್ಯೆ ಸೇರಿದಂತೆ ಎಲ್ಲವೂ ಆಕರ್ಷಕವಾಗಿತ್ತು. ಆದರೆ ಒಂದು ಸಮಸ್ಯೆ ಇತ್ತು—ಆ ಕಂಪನಿ ಗುರ್ಗಾಂವ್‌ನಲ್ಲಿತ್ತು.
ಸಂಬಳ ಅತ್ಯುತ್ತಮವಾಗಿತ್ತು. ಸೇರ್ಪಡೆ ಬೋನಸ್, ಸ್ಥಳಾಂತರ ಭತ್ಯೆ ಎಲ್ಲವೂ ಇತ್ತು. ಅದು ಎಲ್ಲ ರೀತಿಯಲ್ಲೂ ಅತ್ಯುತ್ತಮ ಉದ್ಯೋಗವಾಗಿತ್ತು, ಆದರೂ, ಅವರು ಆ ಅವಕಾಶವನ್ನು ತಿರಸ್ಕರಿಸಿದರು.
ತಮ್ಮ ಸಹೋದರ ಮತ್ತು ಅವರ ಪತ್ನಿ ಬೆಂಗಳೂರಿನಲ್ಲಿ ವಾಸವಾಗಿರುವುದರಿಂದ ಕುಟುಂಬದ ಬೆಂಬಲ ಇಲ್ಲಿಯೇ ಇದೆ ಎಂದು ಸ್ನೇಹಾ ಹೇಳಿದರು.
ಇಲ್ಲಿ ನನ್ನ ಕಾಲೇಜು ಸ್ನೇಹಿತರು ಮತ್ತು ಶಾಲೆಯ ಇಬ್ಬರು ಸ್ನೇಹಿತರೂ ಇದ್ದಾರೆ. ಹೀಗಾಗಿ ಬೆಂಗಳೂರು ನನಗೆ ಸುರಕ್ಷಿತ ತಾಣವಾಗಿದೆ ಎಂದು ಅವರು ಹೇಳಿದರು.
ಕುಟುಂಬ, ಸ್ನೇಹಿತರು, ನನಗೆ ಇಷ್ಟವಾದ ಸ್ಥಳ ಮತ್ತು ನನ್ನ ಜೀವನದ ಏರಿಳಿತಗಳಿಗೆ ಸಾಕ್ಷಿಯಾಗಿರುವ ನಗರ ಬೆಂಗಳೂರು ಇವೆಲ್ಲವನ್ನೂ ಹಣದಿಂದ ಅಳೆಯಲು ಸಾಧ್ಯವಿಲ್ಲ. ಹೊಸ ನಗರದಲ್ಲಿಯೂ ಇವೆಲ್ಲವನ್ನು ನಿರ್ಮಿಸಬಹುದು. ಆದರೆ ಈಗ ಅದಕ್ಕೆ ಸರಿಯಾದ ಸಮಯವಲ್ಲ. ಈ ನಗರವನ್ನು ಇನ್ನಷ್ಟು ಅನುಭವಿಸಬೇಕಿದೆ. ನಂತರ ಸೂಕ್ತ ಸಮಯ ಬಂದಾಗ ಬೇರೆಡೆಗೆ ಹೋಗುವ ಬಗ್ಗೆ ಯೋಚಿಸಬಹುದು ಎಂದು ಸ್ನೇಹಪ್ರಿಯ ಹೇಳುತ್ತಾರೆ.
ಮೂಲತಃ ಬಿಹಾರದ ಪಾಟ್ನಾದವರಾದ ಸ್ನೇಹಾ, ಎಲ್‌ಐಸಿಯಲ್ಲಿ ಉದ್ಯೋಗಿಯಾಗಿದ್ದ ತಮ್ಮ ತಂದೆಯ ವರ್ಗಾವಣೆಯ ಕಾರಣ ಭಾರತದ ಹಲವು ನಗರಗಳಲ್ಲಿ ಬೆಳೆದಿದ್ದಾರೆ.
ನಾನು ಉತ್ತರ ಭಾರತದವಳಾದರೂ, ಕಾಲೇಜಿನ ನಂತರ ಕಳೆದ ಮೂರು ವರ್ಷಗಳಿಂದ ಬೆಂಗಳೂರಿನಲ್ಲೇ ಇದ್ದೇನೆ. ಟ್ರಾಫಿಕ್ ಸಮಸ್ಯೆ ಹೊರತುಪಡಿಸಿದರೆ ಈ ನಗರ ನನಗೆ ತುಂಬಾ ಇಷ್ಟ. ಟ್ರಾಫಿಕ್ ಸಮಸ್ಯೆ ಎಲ್ಲ ನಗರಗಳಲ್ಲೂ ಇದೆ ಎನ್ನುತ್ತಾರೆ.
ಗುರ್ಗಾಂವ್‌ನಲ್ಲಿ ಹೊಸದಾಗಿ ಜೀವನ ಆರಂಭಿಸಬೇಕಾಗುತ್ತಿತ್ತು. ಜೊತೆಗೆ ದೆಹಲಿ-ಎನ್‌ಸಿಆರ್‌ನ ತೀವ್ರ ಬೇಸಿಗೆ ಮತ್ತು ಚಳಿಗಾಲವೂ ಅವರಿಗೆ ಇಷ್ಟವಾಗಲಿಲ್ಲ.
ಬೆಂಗಳೂರು ಹವಾಮಾನ ತುಂಬಾ ಚೆನ್ನಾಗಿದೆ. ಉತ್ತರ ಭಾರತದಲ್ಲಿ ಹವಾಮಾನ ಯಾವಾಗಲೂ ಅತಿಯಾಗಿ ಬಿಸಿಯಾಗಿರುತ್ತದೆ ಅಥವಾ ಅತಿಯಾಗಿ ಚಳಿಯಾಗಿರುತ್ತದೆ ಎನ್ನುತ್ತಾರೆ.
ಗುರ್ಗಾಂವ್‌ಗೆ ತೆರಳದಿರುವ ಪ್ರಮುಖ ಕಾರಣಗಳಲ್ಲಿ ಸುರಕ್ಷತೆಯೂ ಒಂದು ಎಂದು ಸ್ನೇಹಾ ಹೇಳುತ್ತಾರೆ. ಈ ಹಿಂದೆ ದೆಹಲಿ-ಎನ್‌ಸಿಆರ್‌ನಲ್ಲಿ ಅವರಿಗೆ ಕೆಲವು ಅಹಿತಕರ ಅನುಭವಗಳಾಗಿದ್ದವು.
ನಾನು ಬೆಂಗಳೂರನ್ನು ಬಿಟ್ಟು ಹೋಗಲು ಇಷ್ಟಪಡದ ಪ್ರಮುಖ ಕಾರಣಗಳಲ್ಲಿ ಒಂದು ಇಲ್ಲಿನ ಜನರು. ಇಲ್ಲಿ ಜನರು ತುಂಬಾ ಸೌಹಾರ್ದಯುತರು ಮತ್ತು ಸಹೃದಯರು ಎನ್ನುತ್ತಾರೆ.