

ಬೆಂಗಳೂರು: ಬೀದಿ ಬದಿ ವ್ಯಾಪಾರಿಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಪಾದಚಾರಿಗಳ ಜೀವರಕ್ಷಣೆಯೂ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕುರಿತು ಅಧಿಕಾರಿಗಳೊಂದಿಗೆ ನಡೆದ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಅವರು, 'ಸರ್ಕಾರ ನಗರದ ಪ್ರಮುಖ ರಸ್ತೆಗಳ ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿ ತೆರವು ಮಾಡಿ ಅಲ್ಲಿನ ಬೀದಿ ಬದಿ ವ್ಯಾಪಾರಿಗಳನ್ನು ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಿಂದ ವಾರ್ಡ್ ರಸ್ತೆಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ನಾವು ಯಾವುದೇ ಕಾರಣಕ್ಕೂ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸುತ್ತಿಲ್ಲ ಅವರನ್ನು ಪ್ರಮುಖ ರಸ್ತೆಗಳಿಂದ ವಾರ್ಡ್ ಮಟ್ಟದ ರಸ್ತೆಗಳಿಗೆ ಸ್ಥಳಾಂತರಿಸಲಾಗುತ್ತಿದೆ. ವ್ಯಾಪಾರಿಗಳಷ್ಟೇ ಅಲ್ಲದೆ ಅನಾಥ ವಾಹನಗಳು, ಅಕ್ರಮ ಪಾರ್ಕಿಂಗ್, ವಿವಿಧ ಅಡೆತಡೆಗಳನ್ನೂ ಹಂತ ಹಂತವಾಗಿ ತೆರವುಗೊಳಿಸಿ ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಸುಗಮ ಪಾದಚಾರಿ ಮಾರ್ಗ ಕಲ್ಪಿಸಬೇಕು ಎಂದು ಸೂಚಿಸಿದರು.
ಅನಾಥ ವಾಹನಗಳ ಶೀಘ್ರ ತೆರವು
ಒತ್ತುವರಿ ತೆರವುಗೊಳಿಸಿದ ರಸ್ತೆಗಳಲ್ಲಿ ತಕ್ಷಣವೇ ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಬೇಕು. ಉತ್ತಮ ಗುಣಮಟ್ಟದ ಪಾದಚಾರಿ ಮಾರ್ಗಗಳನ್ನು ನಿರ್ಮಿಸಿ, ಬಳಿಕ ಸ್ಥಳೀಯ ನಾಗರಿಕರೊಂದಿಗೆ ಪರಿಶೀಲನೆ ನಡೆಸಿ ಸಾರ್ವಜನಿಕರ ಅಭಿಪ್ರಾಯವನ್ನೂ ಪಡೆಯಬೇಕು.
ನಗರದ ರಸ್ತೆ ಬದಿಗಳಲ್ಲಿ ನಿಂತಿರುವ ಅನಾಥ ವಾಹನಗಳ ತೆರವು ಅಭಿಯಾನವನ್ನು ಜುಲೈ 10ರಿಂದ ಆರಂಭಿಸಲಾಗುವುದು. ನಗರ ಪಾಲಿಕೆ ಹಾಗೂ ಸಂಚಾರಿ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಲಿದ್ದಾರೆ.
ಜುಲೈ 15ರ ನಂತರ ಬೃಹತ್ ಕಟ್ಟಡ ತ್ಯಾಜ್ಯ ಹಾಗೂ ಗಿಡಗಂಟಿಗಳ ತೆರವು ಅಭಿಯಾನವನ್ನೂ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಮನೆ ಹಾಗೂ ವಾಣಿಜ್ಯ ಕಟ್ಟಡಗಳ ಮುಂದೆ ಪಾದಚಾರಿ ಮಾರ್ಗದ ಮೇಲೆ ನಿರ್ಮಿಸಿರುವ ರ್ಯಾಂಪ್‌ಗಳು ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಹಂತದಲ್ಲಿ ಅವುಗಳ ತೆರವಿಗೂ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು ಎಂದು ಹೇಳಿದರು.
ಯಾರ ಜೀವನೋಪಾಯಕ್ಕೂ ತೊಂದರೆ ಉಂಟುಮಾಡುವುದು ಸರ್ಕಾರದ ಉದ್ದೇಶವಲ್ಲ
ಇದೇ ವೇಳೆ ಸಚಿವರು ಬಿಡುಗಡೆ ಮಾಡಿದ ವಿಡಿಯೋ ಸಂದೇಶದಲ್ಲಿ, ಸುಪ್ರೀಂ ಕೋರ್ಟ್ ನಿರ್ದೇಶನ ಹಾಗೂ ಸಾರ್ವಜನಿಕರ ಬಹುಕಾಲದ ಬೇಡಿಕೆಯ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಗಳ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಲಾಗುತ್ತಿದೆ ಎಂದರು.
ಯಾರ ಜೀವನೋಪಾಯಕ್ಕೂ ತೊಂದರೆ ಉಂಟುಮಾಡುವುದು ಸರ್ಕಾರದ ಉದ್ದೇಶವಲ್ಲ. ಆದರೆ ಪಾದಚಾರಿಗಳ ಜೀವ ರಕ್ಷಣೆ ಸರ್ಕಾರದ ಜವಾಬ್ದಾರಿಯಾಗಿದೆ. ನಗರದ ಕೇವಲ ಶೇ.20ರಷ್ಟು ಪ್ರಮುಖ ರಸ್ತೆಗಳಲ್ಲಿ ಮಾತ್ರ ಈ ಕಾರ್ಯಾಚರಣೆ ನಡೆಯುತ್ತಿದ್ದು, ಉಳಿದ ರಸ್ತೆಗಳಲ್ಲಿ ವ್ಯಾಪಾರಕ್ಕೆ ಅವಕಾಶ ಇರುತ್ತದೆ.
ಸಾರ್ವಜನಿಕರು ಮತ್ತು ವ್ಯಾಪಾರಿಗಳು ಸಹಕರಿಸಿದರೆ ಮಾತ್ರ ಬೆಂಗಳೂರು ಸುರಕ್ಷಿತ ಹಾಗೂ ವ್ಯವಸ್ಥಿತ ನಗರವಾಗಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಮನವಿ ಮಾಡಿಕೊಂಡರು.